ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳನ್ನು ಕುರಿತು ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಗಳು ಬಾಕಿ ಉಳಿದಿವೆ ಎಂದು ಅವರು ಹೇಳಿದರು.
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಟಿ ತನ್ನ ಕೆಲಸ ಮಾಡುತ್ತಿದೆ. ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಗಳಿಗಾಗಿ ಕಾಯಲಾಗುತ್ತಿದೆ. ಇತ್ತೀಚೆಗೆ ಪತ್ತೆಯಾದ ಅವಶೇ಼ಗಳನ್ನೂ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಹೇಳಿದರು.
ತನಿಖೆಗೆ ಸಂಬಂಧಿಸಿದಂತೆ ಒಬ್ಬರಾದ ಮೇಲೊಬ್ಬರು ಅರ್ಜಿ ಸಲ್ಲಿಸುತ್ತಾ ಹೋದರೆ ತನಿಖೆಯನ್ನುಮುಂದುವರಿಸಲು ಸಾಧ್ಯವಿಲ್ಲ. ಒಂದು ಅಂತ್ಯ ಇರಲೇಬೇಕು ಎಂದರು. ದೂರುದಾರರು ಮತ್ತು ಇತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಎಸ್‌ಐಟಿ ತಮ್ಮ ವರದಿಯಲ್ಲಿ ಆ ಅಂಶವನ್ನು ಪರಿಗಣಿಸಬಹುದು ಎಂದು ಹೇಳಿದರು.
ಸೌಜನ್ಯ ಪರ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿಲ್ಲ. ಕಾನೂನು ಪ್ರಕಾರ ಪೊಲೀಸರು ಅವರನ್ನು ಬಂಧಿಸುತ್ತಾರೆ. ಸರ್ಕಾರ ಮಧ್ಯಪ್ರವೇಶಿಸುವುದಾಗಲೀ ಅಥವಾ ಸೂಚನೆಗಳನ್ನು ನೀಡುವುದಾಗಲೀ ಮಾಡುವುದಿಲ್ಲ. ತನಿಖಾ ತಂಡ ಸ್ವತಂತ್ರವಾಗಿ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.