ಧರ್ಮಸ್ಥಳ ಹತ್ಯೆಗಳು: ಚಿನ್ನಯ್ಯನ ಪತ್ನಿ, ಸಹೋದರಿಯಿಂದ ಮಹತ್ವದ ಮಾಹಿತಿ ಕಲೆ ಹಾಕಿದ ಎಸ್‌ ಐಟಿ; ತನಿಖೆಗೆ ಸಹಕಾರಿಯಾದ ಸ್ಫೋಟಕ ಮಾಹಿತಿ

Most read

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಲ್ಲಿ ಶವಗಳನ್ನು ಹೂತುಹಾಕಿರುವ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ ಐಟಿ) ಈ ಪ್ರಕರಣದಲ್ಲಿ ದೂರು ಸಲ್ಲಿಸಿದ್ದ ಸಾಕ್ಷಿ ದೂರುದಾರ ಚಿನ್ನಯ್ಯನ ಎರಡನೇ ಪತ್ನಿ ಮತ್ತು ಸಹೋದರಿಯಿಂದ ಆತನ ಸಂಪೂರ್ಣ ಹಿನ್ನೆಲೆ ಮತ್ತು ಮಾಹಿತಿಯನ್ನು ಸಂಗ್ರಹಿಸಿದೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ. ಚಿನ್ನಯ್ಯ ನಿರ್ವಹಿಸುತ್ತಿದ್ದ ಕೆಲಸ, ಆತ ಹೊಂದಿದ್ದ ಸಂಪರ್ಕ ಮತ್ತು ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.

ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನಮ್ಮ ಅವರನ್ನು ಕರೆಸಿಕೊಂಡಿದ್ದ ಎಸ್‌ ಐಟಿ ತಂಡ ಹಲವಾರು ಗಂಟೆಗಳ ಕಾಲ ಪ್ರಶ್ನಿಸಿ ಉತ್ತರಗಳನ್ನು ಪಡೆದುಕೊಂಡಿದೆ. ಸೌಜನ್ಯ ಪರ ಹೋರಾಟಗಾರರ ಸಂಪರ್ಕಕ್ಕೆ ಬರುವುದಕ್ಕೂ ಮುನ್ನ ಚಿನ್ನಯ್ಯ ಎಲ್ಲಿ ವಾಸಿಸುತ್ತಿದ್ದ? ಇಷ್ಟು ವರ್ಷಗಳ ಕಾಲ ಎಲ್ಲಿ, ಯಾವ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಸೇರಿದಂತೆ ಮಹತ್ವದ ಅಂಶಗಳನ್ನು ಇಬ್ಬರಿಂದಲೂ ಸಂಗ್ರಹಿಸಿದೆ.

ಮಲ್ಲಿಕಾ ಮತ್ತು ರತ್ನಮ್ಮ ಇಬ್ಬರೂ ಚಿನ್ನಯ್ಯನ ಜತೆ ನಿಕಟ ಸಂಪರ್ಕ ಹೊಂದಿದ್ದರು. ಹಾಗಾಗಿ ಇಬ್ಬರಿಂದಲೂ ಎಸ್‌ ಐಟಿ ಚಿನ್ನಯ್ಯನ ಸಂಪೂರ್ಣ ಇತಿಹಾಸವನ್ನು ಸಂಗ್ರಹಿಸಿದೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.

ಜುಲೈ 3ರಂದು ಚಿನ್ನಯ್ಯ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದ. ಜುಲೈ 11ರಂದು ಬೆಳ್ತಂಗಡಿ ನ್ಯಾಯಾಲಯದ ಎದುರು ಭಾರತೀಯ ನ್ಯಾಯಸಂಹಿತೆ (ಬಿಎನ್‌ ಎಸ್‌ ಎಸ್)‌ ಸೆ. 183ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದ. ಈ ಹಿಂದೆ ಸಲ್ಲಸಿದ್ದ ದೂರು ಮತ್ತು 183ರ ಅಡಿಯಲ್ಲಿ ನೀಡಿದ್ದ ಹೇಳಿಕೆಗಳೆರಡರಲ್ಲೂ ಅತ ತನ್ನಿಂದ ಬಲವಂತವಾಗಿ ಶವಗಳನ್ನು ಹೂತು ಹಾಲಿಸಲಾಗಿದೆ ಎಂದು ಆರೋಪ ಮಾಡಿದ್ದ. ನಂತರ ಆತ ಯೂ ಟರ್ನ್‌ ಹೊಡೆದು ತಾನು ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ತಾನು ಸುಳ್ಳು ಹೇಳಿದ್ದೇನೆ ಎಂದು ಹೇಳಿಕೆ ನೀಡಿದ ನಂತರ ಚಿನ್ನಯ್ಯನನ್ನು ಆಗಸ್ಟ್‌ 23ರಂದು ಬಂಧಿಸಲಾಗಿತ್ತು.

ಸೆ. 183ರ ಅಡಿಯಲ್ಲಿ ಚಿನ್ನಯ್ಯ ಎರಡನೇ ಹೇಳಿಕೆ ನೀಡಿ ಸ್ಫೋಟಕ ಅಂಶಗಳನ್ನು ದಾಖಲಿಸಿದ್ದ. ಈ ಅಂಶಗಳನ್ನು ಕುರಿತು ಎಸ್‌ ಐಟಿ ಅಧಿಕಾರಿಗಳು ಸುಳಿವು ಬಿಟ್ಟುಕೊಟ್ಟದೆ ತನಿಖೆಯನ್ನು ಮುಂದುವರೆಸಿತ್ತು. ಎರಡನೇ ಹೇಳಿಕೆ ನೀಡಿದ ನಂತರವೂ ಮೊದಲ ಹೇಳಿಕೆ ಊರ್ಜಿತವಾಗಿದ್ದು, ಎರಡನ್ನೂ ಪೂರಕವಾಗಿಟ್ಟುಕೊಂಡು ಎಸ್‌ ಐಟಿ ತನಿಖೆ ನಡೆಸುತ್ತಿದೆ.

ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಹಲವಾರು ಚಾನೆಲ್‌ ಗಳಿಗೆ ಸಂದರ್ಶನ ನೀಡಿದ್ದು, ಸೌಜನ್ಯ ಪರ ಹೋರಾಟಗಾರರಿಂದ ನಯಾಪೈಸೆ ಪಡೆದಿಲ್ಲ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ನಂತರದ ಬೆಳವಣಿಗೆಗಳಲ್ಲಿ ಮಲ್ಲಿಕಾ ಜೈಲಿನಿಂದ ತನ್ನ ಪತಿ ಬಿಡುಗಡೆಗೆ ಸಹಾಯ ಮಾಡುವಂತೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.  ಎಸ್‌ ಐಟಿ ಅಧಿಕಾರಿಗಳು ಚಿನ್ನಯ್ಯನ ಸಹೋದರಿ ರತ್ನಮ್ಮ ಅವರನ್ನೂ ಹಲವು ಆಯಾಮಗಳಿಂದ ಪ್ರಶ್ನಿಸಿದ್ದಾರೆ. ಇವರಿಬ್ಬರೂ ನೀಡಿರುವ ಮಾಹಿತಿಯು ತನಿಖೆಗೆ ಸಹಕಾರಿಯಾಗಿದೆ ಎಂದು ಎಸ್‌ ಐಟಿ ಮೂಲಗಳು ತಿಳಿಸಿವೆ

More articles

Latest article