ಧರ್ಮಸ್ಥಳ ಹತ್ಯೆಗಳು: ಸಾಕ್ಷಿದಾರನ ಕೋರಿಕೆಯಂತೆ ಮತ್ತೊಂದು ಸ್ಥಳದಲ್ಲಿ ಶೋಧ ಆರಂಭಿಸಿದ ಎಸ್‌ ಐಟಿ ತಂಡ

Most read

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ನೇತ್ರಾವತಿ ಸ್ನಾನಘಟ್ಟದ ಸಮೀಪ ಹೆದ್ದಾರಿ ಪಕ್ಕದ ಕಾಡಿನೊಳಗೆ ಶೋಧಕಾರ್ಯ ಆರಂಭಿಸಿದೆ.

ಅನಾಮಿಕ ಸಾಕ್ಷಿ ದೂರುದಾರ ಹೆಣಗಳನ್ನು ಹೂತು ಹಾಕಿರುವ ಒಟ್ಟು 13 ಜಾಗಗಳನ್ನು ತೋರಿಸಿದ್ದಾನೆ. ಇದರಲ್ಲಿ  13ನೇ ಸ್ಥಳ ಹೊರತುಪಡಿಸಿ ಉಳಿದ 12  ಜಾಗಗಳಲ್ಲಿ  ಶೋಧ ಕಾರ್ಯ ಪೂರ್ಣಗೊಂಡಿದೆ. ಈ ಜಾಗಗಳನ್ನು ಹೊರತುಪಡಿಸಿ ಆತ ತೋರಿಸಿದ್ದ ಬೇರೊಂದು ಜಾಗದಲ್ಲೂ ಶೋಧ ಕಾರ್ಯ ನಡೆದಿದೆ.

ಇಂದು ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಯಲಿನಲ್ಲಿರುವ 13ನೇ ಜಾಗದಲ್ಲಿ ಭೂಮಿ ಅಗೆಯುವ ಕೆಲಸ ನಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ, ಎಸ್‌ ಐಟಿ ತಂಡವು ಸಾಕ್ಷಿ ದೂರುದಾರ ತೋರಿಸಿದ್ದ 12ನೇ ಜಾಗವಿರುವ ಸ್ಥಳದಿಂದ ಕಾಡಿನೊಳಗೆ ತೆರಳಿದೆ. ಇದೇ ಕಾಡಿನಲ್ಲಿ ಸಾಕ್ಷಿ ದೂರುದಾರ ಮತ್ತೊಂದು ಜಾಗವನ್ನು ತೋರಿಸಿದ್ದು ಅಲ್ಲಿ ಇಂದು ಶೋಧ ಕಾರ್ಯ ನಡೆಯಲಿದೆ ಎಂದು ಎಸ್‌ ಐಟಿ ಮೂಲಗಳು ತಿಳಿಸಿವೆ.

ಎಸ್‌ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ವಿಧಿವಿಜ್ಞಾನ ತಜ್ಞರು ಹಾಗೂ ಸಾಕ್ಷಿದೂರುದಾರ ಹಾಗೂ ಆತನ ವಕೀಲರ ಭದ್ರತಾ ಸಿಬ್ಬಂದಿ, ಅಂದಾಜು 20 ಕಾರ್ಮಿಕರು ಹಾಜರಿದ್ದಾರೆ. ಇಂದು ನೆಲ ಅಗೆಯಲು ಜೆಸಿಬಿಯನ್ನು ಬಳಸದಿರಲು ನಿರ್ಧರಿಸಲಾಗಿದೆ.

ಈ ಹನ್ನೆರಡು ಸಥಳಗಳ ಪೈಕಿ ಎರಡು ಕಡೆ ಮೃತದೇಹದ ಕುರುಹುಗಳು ಪತ್ತೆಯಾಗಿವೆ. ಆರನೇ ಜಾಗದ ಗಂಡಸಿನ ಮೃತದೇಹದ ಸಿಕ್ಕಿದ್ದರೆ, ಆತ ಕಾಡಿನೊಳಗೆ ತೋರಿಸಿದ್ದ ಗುರುತು ಮಾಡದ ಮತ್ತೊಂದು ಸ್ಥಳದಲ್ಲಿ ಮೃತದೇಹದ ತಲೆಬುರುಡೆ, ಬೆನ್ನುಮೂಳೆ ಸೇರಿದಂತೆ 100ಕ್ಕೂ ಹೆಚ್ಚು ಮೂಳೆಗಳು ಸಿಕ್ಕಿವೆ. ಉಳಿದ 11 ಜಾಗಗಳಲ್ಲಿ ಮೃತದೇಹಗಳ ಯಾವುದೇ ಕುರುಹು ಪತ್ತೆಯಾಗಿಲ್ಲ.

ಎಸ್‌ಐಟಿ ಮುಖ್ಯಸ್ಥರಾಗಿರುವ ಡಿಜಿಪಿ ಪ್ರಣವ್ ಮೊಹಾಂತಿ ಅವರು ಇಂದು ಬೆಳ್ತಂಗಡಿ ಕಚೇರಿಗೆ ಆಗಮಿಸಿದ್ದು, ಅಧಿಕಾರಿಗಳ ಸಭೆ ನಡೆಸಿದ್ದಾರೆ. ಶೋಧ ಕಾರ್ಯ ಆರಂಭವಾಗುವುದಕ್ಕೂ ಮುನ್ನ ನಡೆದ ಸಭೆಯಲ್ಲಿ ಎಸ್‌ಐಟಿಯ ಡಿಐಜಿ ಅನುಚೇತ್, ಎಸ್.ಪಿ.ಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ.ಸೈಮನ್ ಮೊದಲಾದವರು ಹಾಜರಿದ್ದರು.

More articles

Latest article