ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಹೂತು ಹಾಕಿರುವ ಮೃತದೇಹಗಳ ಪತ್ತೆಗಾಗಿ ಭೂಮಿ ಅಗೆಯುವ ಕೆಲಸ ಎರಡನೆಯ ದಿನವಾದ ಬುಧವಾರವೂ ಮುಂದುವರಿಯಿತು. ಆದರೆ ನಾಲ್ಕು ಕಡೆ ಅಗೆದರೂ ಎಲ್ಲಿಯೂ ಮೃತದೇಹದ ಕುರುಹುಗಳು ಪತ್ತೆಯಾಗಲಿಲ್ಲ.
ಪ್ರಕರಣದ ಸಾಕ್ಷಿ ದೂರುದಾರ ಶವ ಹೂತು ಹಾಕಿರುವ 12 ಜಾಗಗಳನ್ನು ಕಾಡಿನೊಳಗೆ ಹಾಗೂ ಇನ್ನೊಂದು ಜಾಗವನ್ನು ಸ್ನಾನಘಟ್ಟದ ಸಮೀಪದಲ್ಲಿರುವ ಅಣೆಕಟ್ಟೆ ಬಳಿಯ ಬಯಲು ಪ್ರದೇಶದಲ್ಲಿ ತೋರಿಸಿದ್ದರು. ಆತ ತೋರಿಸಿದ್ದ ಒಂಬತ್ತು ಜಾಗಗಳು ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿಯೇ ಇದ್ದು, ಅವುಗಳಲ್ಲಿ ಮಂಗಳವಾರ ಅಗೆದ ನಾಲ್ಕು ಜಾಗಗಳು ಸೇರಿ ಒಟ್ಟು ಐದು ಕಡೆ ಅಗೆಯುವ ಕಾರ್ಯ ಮುಗಿದಿದೆ. ಇಷ್ಟೂ ಜಾಗಗಳಲ್ಲಿ ಶವಗಳ ಯಾವುದೇ ಕುರುಹುಗಳು ಸಿಕ್ಕಿಲ್ಲ ಎಂದು ವಿಶೇಷ ತನಿಖಾ ತಂಡದ (ಎಸ್ಐಟಿ) ಮೂಲಗಳು ತಿಳಿಸಿವೆ.
ಈ ಜಾಗ ದಟ್ಟ ಅರಣ್ಯದೊಳಗೆ ಇದ್ದುದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಲ್ಲಿಗೆ ತಲುಪಲು ಹರಸಾಹಸ ಪಡಬೇಕಾಯಿತು. ಈ ಜಾಗಕ್ಕೆ ನೆಲ ಅಗೆಯುವ ಯಂತ್ರವನ್ನು ಒಯ್ಯುವುದು ಅಸಾಧ್ಯವಾಗಿತ್ತು. ಆದ್ದರಿಂದ ಬುಧವಾರ ಸುಮಾರು 20 ಕಾರ್ಮಿಕರನ್ನು ಬಳಸಿಕೊಂಡು ಹಾರೆ, ಪಿಕ್ಕಾಸಿ ಬಳಸಿಯೇ ಈ ಜಾಗಗಳನ್ನು ಅಗೆಯಲಾಗಿತ್ತು.
ಅನಾಮಿಕ ಸಾಕ್ಷಿ ದೂರುದಾರ ತೋರಿಸಿದ ಮೊದಲನೇ ಸ್ಥಳ ನೇತ್ರಾವತಿ ನದಿಯಿಂದ ಹತ್ತು ಅಡಿ ದೂರದಲ್ಲಿತ್ತು. ಅಲ್ಲಿ ಮಂಗಳವಾರ ಸುಮಾರು 8 ಅಡಿಗಳಷ್ಟು ಆಳಕ್ಕೆ ಅಗೆದಾಗಲೂ ಮೃತದೇಹದ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.
ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ.