ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹತ್ಯೆ ನಡೆಸಿ ನೂರಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣ ಕುರಿತು ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ನಿನ್ನೆ ಬುಧವಾರ ಸಂಜೆ ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್ ನಲ್ಲಿ ನಾಲ್ಕು ಮಂದಿ ಯೂಟ್ಯೂಬರ್ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಧರ್ಮಸ್ಥಳ ಗ್ರಾಮ ಕನ್ಯಾಡಿ ನಿವಾಸಿ ಜೀಪು ಚಾಲಕ ಸೋಮನಾಥ ಸಪಲ್ಯ(48) ಬಂಧಿತ ಆರೋಪಿ.
ಇಂದು ಸಂಜೆ ಸೋಮನಾಥ ಸಪಲ್ಯನನ್ನು ಇಂದು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರಾ ನೇತೃತ್ವದ ತಂಡ ಬಂಧಿಸಿ ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 189(2),191(2),115(2),324(5),352,307 ಜೊತೆಗೆ 190 BNS ಅಡಿಯಲ್ಲಿ ಸುಮಾರು 15 ರಿಂದ 50 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.