ಧರ್ಮಸ್ಥಳ ಹತ್ಯೆಗಳು: ಎಸ್‌ ಐಟಿ ತನಿಖಾ ತಂಡಕ್ಕೆ ಮತ್ತೊಂದು ದೂರು

Most read

ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ ಎನ್ನಲಾದ ಹತ್ಯೆಗಳು ಮತ್ತು ಶವಗಳನ್ನು ಹೂತು ಹಾಕಿರುವ  ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ಮತ್ತೊಂದು ದೂರು ಸಲ್ಲಿಸಲಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ಇಚಿಲಂಪಾಡಿ ನಿವಾಸಿ, ಸಾಮಾಜಿಕ ಹೋರಾಟಗಾರ ಜಯಂತ್ ಅವರು ಇಂದು ಮೂವರು ವ್ಯಕ್ತಿಗಳ ಜೊತೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿ, ದೂರು ನೀಡಿದ್ದಾರೆ.

15 ವರ್ಷಗಳ ಹಿಂದೆ ನಡೆದ 13 ರಿಂದ 15 ವರ್ಷದ ಬಾಲಕಿಯ ನಿಗೂಢ ಸಾವು ಸಂಭವಿಸಿದೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹುಡುಗಿಯ ಶವವನ್ನು ಯಾವುದೇ ಕಾನೂನು ಪ್ರಕ್ರಿಯೆಗಳಿಲ್ಲದೆ ಹೂಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಡಾ. ಅರುಣ್ ಕೆ ಪ್ರತಿಕ್ರಿಯೆ ನೀಡಿ ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೇಲೆ ಸಂಪೂರ್ಣ ನಂಬಿಕೆ ಇರುವುದರಿಂದ ಅವರು ದೂರು ದಾಖಲಿಸಿದ್ದಾರೆ. ಇವರು ಆರಂಭದಲ್ಲಿ ಎಸ್‌ಐಟಿಯನ್ನು ಸಂಪರ್ಕಿಸಿದ್ದರು. ಆದರೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲು ಸೂಚಿಸಲಾಯಿತು ಮತ್ತು ಅವರಿಂದ ದೂರು ಸ್ವೀಕರಿಸಲಾಗಿದೆ. ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

2002-03ರ ಅವಧಿಯಲ್ಲಿ ರಾಜ್ಯ ಹೆದ್ದಾರಿ- 37ರ ಅರಣ್ಯದಲ್ಲಿ ಮೃತದೇಹವೊಂದನ್ನು ಯಾರೋ ಎಸೆದು ಹೋಗಿದ್ದರು. ಈ ವಿಷಯವನ್ನು ಸ್ಥಳೀಯ ನಿವಾಸಿಯೊಬ್ಬರು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ತಿಳಿಸಿದ್ದರು. ಘಟನೆ ನಡೆದು ಒಂದು ವಾರದ ನಂತರ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಬಂದಿದ್ದಾರೆ. ಅದು 35 ರಿಂದ 40 ವರ್ಷ ಹೆಂಗಸಿನ ಶವ. ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಿ, 2 ಅಡಿ ಆಳದ ಹೊಂಡ ತೆಗೆದು ಹೂತು ಹಾಕಿದ್ದಾರೆ. ಆದರೆ ಮೃತಪಟ್ಟಿದ್ದವರ ವಯಸ್ಸು ಸುಮಾರು 13 ರಿಂದ 15 ವರ್ಷದ ಹೆಣ್ಣು ಮಗುವಿನದ್ದಾಗಿತ್ತು ಎಂದು ಜಯಂತ್ ದೂರಿನಲ್ಲಿ ತಿಳಿಸಿದ್ದಾರೆ.

More articles

Latest article