ಧರ್ಮಸ್ಥಳ ಹತ್ಯೆ, ಭೂಕಬಳಿಕೆ ಪ್ರಕರಣಗಳು: ಸಮಗ್ರ ತನಿಖೆಗೆ ಆಗ್ರಹಿಸಿ ಅ. 9 ರಂದು ರಾಜ್ಯಾದ್ಯಂತ ಪ್ರತಿಭಟನೆ

Most read

ಬೆಂಗಳೂರು: ಸೌಜನ್ಯ ಕೊಲೆ ಸೇರಿದಂತೆ ಧರ್ಮಸ್ಥಳದ ಸುತ್ತ ಮುತ್ತ ನಡೆದ ಎಲ್ಲಾ ಅಸಹಜ ಸಾವುಗಳು, ಭೂ ಕಬಳಿಕೆ, ಮೈಕ್ರೋ ಫೈನಾನ್ಸ್‌ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಧರ್ಮ ಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಅ. 9 ರಂದು ರಾಜ್ಯಾದ್ಯಂತ ನ್ಯಾಯಕ್ಕಾಗಿ ಜನಾಗ್ರಹ ಎಂಬ ವಿನೂತನ ರೀತಿಯ ಪ್ರತಿಭಟನೆ ಹಮ್ಮಿಕೊಂಡಿದೆ.

ಅಕ್ಟೋಬರ್ 9 ಕ್ಕೆ ಕುಮಾರಿ ಸೌಜನ್ಯ ದಾರುಣ ಹತ್ಯೆಯಾಗಿ 13 ವರ್ಷಗಳು ತುಂಬುತ್ತವೆ.  ಅಂದು ರಾಜ್ಯಾದ್ಯಂತ  ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸೌಜನ್ಯ, ಪದ್ಮಲತಾ, ಯಮುನ, ಮಾವುತ ನಾರಾಯಣ ಅವರ ಕೊಲೆ ಪ್ರಕರಣಗಳ ಮರು ತನಿಖೆ ನಡೆಸಬೇಕು. ಧರ್ಮಸ್ಥಳದ ಭೂ ಹಗರಣ, ಮೈಕ್ರೋ ಫೈನಾನ್ಸ್‌ , ಅಕ್ರಮಗಳನ್ನು ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಪಡಿಸಲಾಗುತ್ತಿದೆ ಎಂದು ವೇದಿಕೆ ತಿಳಿಸಿದೆ.

ರಾಜ್ಯದ‌ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿಲ್ಲ. ದಶಕಗಳೇ ಕಳೆದರೂ ಅಪರಾಧಿಗಳನ್ನು ಪತ್ತೆಹಚ್ಚಲಾಗಿಲ್ಲ. ಈ ಉದ್ದೇಶಕ್ಕಾಗಿ ಹಾಲಿ ರಚನೆಯಾಗಿರುವ SIT ಕೂಡ ದಿಕ್ಕು ತಪ್ಪಿರುವುದು ಎದ್ದುಕಾಣುತ್ತದೆ. ಧರ್ಮಸ್ಥಳದ ನೆಲದಲ್ಲಿ ಕ್ರೂರವಾಗಿ ಹತ್ಯೆಯಾದ ಕುಮಾರಿ ಸೌಜನ್ಯ ಮತ್ತು ಇತರೆ ಅಮಾಯಕ ಜೀವಗಳಿಗೆ ನ್ಯಾಯ ಸಿಗುವುದು ಮರೀಚಿಕೆಯಾಗುತ್ತಿದೆ. ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿವೆ ಎನ್ನಲಾದ ಅಸಹಜ ಸಾವು, ಕೊಲೆ ಇತ್ಯಾದಿಗಳ ಸಮಗ್ರ ತನಿಖೆ ಕೈಗೆತ್ತಿಕೊಳ್ಳಲು ಈಗ ತನಿಖೆ ನಡೆಸುತ್ತಿರುವ SIT ವಿಫಲವಾಗಿದೆ. ಮಾತ್ರವಲ್ಲ, SIT ರಚಿಸಿದ ಸರ್ಕಾರವೇ ಸಮಗ್ರ ತನಿಖೆಗೆ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಅಡ್ಡಗೋಡೆ ನಿರ್ಮಿಸಿದೆ. ಸಾಕ್ಷಿ ಹೇಳಲು ಮುಂದೆ ಬಂದ ವ್ಯಕ್ತಿಗಳು ತಮ್ಮ ದೂರನ್ನು ಪರಿಗಣಿಸುವಂತೆ ಹೈಕೋರ್ಟ್ ಮೊರೆ ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವು ಮೂಕಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಅ. 9 ರಂದು ಸಾರ್ವಜನಿಕರು, ಸಂಘಸಂಸ್ಥೆಗಳು, ಮಹಿಳಾ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಒಟ್ಟುಗೂಡಿ ತಂತಮ್ಮ ಊರುಗಳಲ್ಲಿ ಸಾಧ್ಯವಿರುವ ರೀತಿಯಲ್ಲಿ ಶಾಂತಿಯುತ ಸತ್ಯಾಗ್ರಹ ಕಾರ್ಯಕ್ರಮ ನಡೆಸೋಣ. ಧರ್ಮಸ್ಥಳದಲ್ಲಿ ದಶಕಗಳಿಂದಲೂ ಪತ್ತೆಯಾಗದ ಆ ಎಲ್ಲಾ ಪಾತಕ ಕೃತ್ಯಗಳನ್ನೆಸಗಿದ ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಸರ್ಕಾರಕ್ಕೆ ಒತ್ತಾಯಿಸೋಣ. ಸಂವಿಧಾನ ವಿರೋಧಿ ರಾಜಕೀಯ ಶಕ್ತಿಗಳ ಒತ್ತಡಗಳಿಗೆ ಮಣಿದಿರುವ ಸರ್ಕಾರವು ತಾಂತ್ರಿಕ ಅಡಚಣೆಯ ಹೆಸರಿನಲ್ಲಿ SIT ತನಿಖೆಗೆ ಮುಳ್ಳುಬೇಲಿ ಹಾಕಿ ನಿರ್ಬಂಧ ಹೇರುವ ಕ್ರಮವನ್ನು ಖಂಡಿಸೋಣ. ಧರ್ಮಸ್ಥಳ ಗ್ರಾಮ ಹಾಗೂ ಸುತ್ತಮತ್ತಲ ಪ್ರದೇಶದಲ್ಲಿ ಕಳೆದ ಹಲವು ದಶಕಗಳಿಂದ ನಡೆದಿರುವ ಎಲ್ಲಾ ಅತ್ಯಾಚಾರ, ಕೊಲೆ, ಅಸಹಜ ಸಾವುಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಈ SIT ಗೆ ಸ್ಪಷ್ಟ ಆದೇಶ ಕೊಡಬೇಕೆಂದು ಸರ್ಕಾರಕ್ಕೆ ಆಗ್ರಹ ಪತ್ರ ಸಲ್ಲಿಸೋಣ ಎಂದೂ ಹೇಳಿದೆ.

 ಈಗಾಗಲೇ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ʼಸೌಜನ್ಯ ಸತ್ಯಾಗ್ರಹʼ ನಡೆಸಲು ವೇದಿಕೆ ಸಿದ್ದವಾಗಿದೆ ಎಂದು ತಿಳಿಸಿದೆ.

More articles

Latest article