ಬೆಂಗಳೂರು: ಧರ್ಮಸ್ಥಳದಲ್ಲಿ ಅಸ್ಥಿ ಶೋಧಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ ಏಂದು ಗೃಹ ಸಚಿವ ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳ ಹತ್ಯಗಳನ್ನು ಕುರಿತು ಚರ್ಚೆ ನಡೆದ ನಂತರ ಅವರು ಸದನಕ್ಕೆ ಮಾಹಿತಿ ನೀಡಿದರು.
FSL ವರದಿ ಬರುವವರೆಗೂ ಕಳೇಬರ ಶೋಧ ಕಾರ್ಯವನ್ನು ಸ್ಥಗಿತಗಿಳಿಸಲಾಗುತ್ತದೆ. ಸಧ್ಯ ಸಿಕ್ಕಿರುವ ಅಸ್ಥಿಗಳ FSL ವರದಿ ಬಂದ ನಂತರ ಮುಂದಿನ ತನಿಖೆ ಕುರಿತು ನಿರ್ಧರಿಸಲಾಗುತ್ತದೆ. ಈ ನಿರ್ಧಾರವನ್ನು ಎಸ್ ಐಟಿಯೇ ತೆಗೆದುಕೊಂಡಿದೆ ಎಂದರು. ಎಸ್ ಐಟಿ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿಲ್ಲ. ನ್ಯಾಯಸಮ್ಮತ ಮತ್ತು ಪಾರದರ್ಶಕ ತನಿಖೆಗೆ ಸರ್ಕಾರ ಸೂಚನೆ ನೀಡಿದೆ ಎಂದರು.
ತನಿಖೆಗೂ ಮುನ್ನವೇ ಬೇರೆ ಬೇರೆ ರೀತಿ ಅರ್ಥೈಸುವುದು ಸರಿಯಲ್ಲ. ಆದಷ್ಟು ಶೀಘ್ರವಾಗಿ ತನಿಖೆ ಮಾಡಬೇಕು ಎಂದಷ್ಟೇ ಒತ್ತಾಯಿಸಬಹುದು. ಹೇಳಬಹುದು. ಷಡ್ಯಂತ್ರ ನಡೆದಿದೆ ಎಂಬ ಆರೋಪ ಕುರಿತೂ ತನಿಖೆ ನಡೆಯಲಿದೆ. ಯಾರ ಒತ್ತಡಕ್ಕೂ ಸರ್ಕಾರ ಮಣಿಯುವುದಿಲ್ಲ. ಪಾರದರ್ಶಕವಾಗಿ, ದಕ್ಷತೆಯಿಂದ ಪಕ್ಷಾತೀತ ತನಿಖೆ ನಡೆಸುವುದು ಸರ್ಕಾರದ ಉದ್ದೇಶವಾಗಿದೆ. ತನಿಖೆಯನ್ನು ಹೊರತುಪಡಿಸಿ ಬೇರೆ ಬೇರೆ ವಿಚಾರಗಳನ್ನು ಕುರಿತು ಮಾತನಾಡುವುದಿಲ್ಲ. ವಸ್ತುಸ್ಥಿತಿಯನ್ನು ನಾನು ಸದನ ಮುಂದೆ ಇಡುವ ಕೆಲಸ ಮಾಡಿದ್ದೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಉತ್ತರಿಸಿದರು.
ಅತ್ಯಾಚಾರ, ಕೊಲೆ ಪ್ರಕರಣ ಕುರಿತು ತನಿಖೆ ನಡೆಸುವಂತೆ ಅಪರಿಚಿತ ದೂರು ಕೊಟ್ಟಿದ್ದ. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆಯೂ ಕೇಳೊಕೊಂಡಿದ್ದ. ನಂತರ ಪೊಲೀಸರು ಆ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 164 ಹೇಳಿಕೆಗಳನ್ನು ದಾಖಲಿಸಿದ್ದರು. ಬಳಿಕ ನ್ಯಾಯಾಧೀಶರು ತನಿಖೆಗೆ ಸೂಚಿಸಿದ್ದರು. ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು ತನಿಖೆ ಕೈಗೊಂಡಿದ್ದರು. ಎಸ್ ಐಟಿ ರಚಿಸುವಂತೆ ಮಹಿಳಾ ಆಯೋಗವೂ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಎಸ್ ಐಟಿ ರಚಿಸಿತ್ತು. ಹಿರಿಯ ಅಧಿಕಾರಿ ಪ್ರಣವ್ ಮೊಹಂತಿ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದರು ಎಂದು ಸದನಕ್ಕೆ ತಿಳಿಸಿದರು.