ಮಂಗಳೂರು: ಧರ್ಮಸ್ಥಳದಲ್ಲಿ ಹತ್ಯೆ ಮಾಡಿ ಹೂತು ಹಾಕಲಾಗಿದೆ ಎಂದು ಆರೋಪಿಸಿರುವ ಸಾಕ್ಷಿ ದೂರುದಾರ ಕನ್ಯಾಡಿ ಬಳಿ ಇಂದು ಹೊಸ ಜಾಗವನ್ನು ತೋರಿಸಿದ್ದು, ಅಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಸ್ನಾನಘಟ್ಟದ ಪಕ್ಕದಲ್ಲಿ ಹರಿಯುವ ನೇತ್ರಾವತಿ ನದಿಯ ಮತ್ತೊಂದು ಬದಿಯಲ್ಲಿ ಈ ಸ್ಥಳವಿದೆ. ನೇತ್ರಾವತಿ ನದಿ ಪಕ್ಕದಲ್ಲಿರುವ ಈ ಸ್ಥಳಕ್ಕೆ ಖಾಸಗಿ ವ್ಯಕ್ತಿಯೊಬ್ಬರ ಅಡಿಕೆ ತೋಟದ ಮೂಲಕ ಹಾದುಹೋಗಬೇಕಿದೆ. ಅಂದರೆ ಉಜಿರೆ– ಧರ್ಮಸ್ಥಳ ರಸ್ತೆಯಿಂದ ಸುಮಾರು 1 ಕಿ.ಮೀ ದೂರವನ್ನು ಸಣ್ಣ ರಸ್ತೆಯಲ್ಲಿ ಸಾಗಿ ಈ ಜಾಗವನ್ನು ತಲುಪಬೇಕಾಗಿದೆ. ಎಸ್ ಐ ಟಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾಕ್ಷಿ ದೂರುದಾರ ಈ ಸ್ಥಳವನ್ನು ತಲುಪಿದ್ದಾರೆ.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್‌ಐಟಿ ಎಸ್‌ಪಿ. ಜಿತೇಂದ್ರ ಕುಮಾರ್ ದಯಾಮ, ವಿಧಿ ವಿಜ್ಞಾನ ತಜ್ಞರು ಸ್ಥಳದಲ್ಲಿದ್ದಾರೆ. ಭೂಮಿ ಅಗೆಯುವ ಕಾರ್ಮಿಕರು ಅಗೆಯುವ ಕೆಲಸ ಆರಂಭಿಸಿದ್ದಾರೆ. ನೆಲವನ್ನು ಅಗೆಯುವ ಯಂತ್ರವನ್ನೂ ಅಲ್ಲಿಗೆ ಸಾಗಿಸಲಾಗಿದೆ.
ಅನಾಮಿಕ ಸಾಕ್ಷಿ ದೂರುದಾರ ಇದುವರೆಗೆ 17 ಜಾಗಗಳನ್ನು ತೋರಿಸಿದ್ದಾನೆ. ಆದರೆ ಎರಡು ಕಡೆ ಮಾತ್ರ ಮೃತದೇಹದ ಕುರುಹುಗಳು ಪತ್ತೆಯಾಗಿವೆ.