ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ಅಪರಾಧ ಕೃತ್ಯಗಳ ಸಂಬಂಧ ಹೂತು ಹಾಕಲಾಗಿವೆ ಎನ್ನಲಾದ ಪ್ರಕರಣದ ಅನಾಮಿಕ ಸಾಕ್ಷಿ ದೂರುದಾರ ನೇತ್ರಾವತಿ ನದಿ ಸಮೀಪದ ಅರಣ್ಯದಲ್ಲಿ ಗುರುತಿಸಿರುವ ಆರನೇ ಜಾಗದಲ್ಲಿ ಇಂದು ಪತ್ತೆಯಾಗಿರುವ ಮೃತದೇಹದ ಕುರುಹು ಗಂಡಸಿನದ್ದು ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ವಿಧಿವಿಜ್ಞಾನ ತಜ್ಞರ ತಂಡವು ಸ್ಥಳದಲ್ಲೇ ಇದ್ದು, ಮೃತದೇಹದ ಅವಶೇಷಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುತ್ತಿದೆ.
ಇಂದೂ ಸಹ ಎಸ್ಐಟಿ ತಂಡದ ಜೊತೆ ಸುಮಾರು 20 ಕಾರ್ಮಿಕರು ನೇತ್ರಾವತಿ ನದಿ ಪಕ್ಕದ ಕಾಡಿನ ಒಳಗೆ ತೆರಳಿ, ಅಗೆಯುವ ಕಾರ್ಯದಲ್ಲಿ ತೊಡಗಿದ್ದರು. ಈ ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 13 ಜಾಗಗಳ ಪೈಕಿ ನೇತ್ರಾವತಿ ನದಿ ಪಕ್ಕದ ಕಾಡಿನ ಒಳಗೆ ತೋರಿಸಿದ್ದ ಐದು ಕಡೆ ಈಗಾಗಲೇ ಭೂಮಿಯನ್ನು ಅಗೆಯಲಾಗಿದ್ದರೂ, ಮೃತದೇಹಗಳನ್ನು ಹೂತು ಹಾಕಿದ ಕುರುಹುಗಳು ಪತ್ತೆಯಾಗಿರಲಿಲ್ಲ.
ಆದರೆ ಆರನೇ ಜಾಗದಲ್ಲಿ ದೂರುದಾರನ ಸಮ್ಮುಖದಲ್ಲೇ ನೆಲ ಅಗೆಯಲಾಗಿದ್ದು, ಮೂಳೆಗಳು ದೊರೆತಿವೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ , ಎಸ್ಐಟಿಯ ಎಸ್ ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲೇ ಮೊಕ್ಕಾಂ ಹೂಡಿದಾರೆ.
ಈ ಸ್ಥಳದಲ್ಲಿ ಪುರುಷನ ದೇಹದ 12 ಮೂಳೆಗಳು ಮತ್ತು ತಲೆಬುರುಡೆಯೊಂದು ಸಿಕ್ಕಿದೆ. ಪುರುಷನ ಒಳ ಉಡುಪು ಕಂಡು ಬಂದಿದ್ದು ಅದನ್ನೂ ಎಸ್ ಐಟಿ ತಂಡ ವಶಕ್ಕೆ ಪಡೆದಿದೆ.
ದೂರುದಾರ ಗುರುತಿಸಿರುವ ಆರನೇ ಸ್ಥಳದಲ್ಲಿ ಶವಸಂಸ್ಕಾರ ಮಾಡಲಾಗುತ್ತಿತ್ತು ಎಂದು ಹೇಳಿಕೆ ನೀಡಿರುವ ಧರ್ಮಸ್ಥಳ ಗ್ರಾ. ಪಂಚಾಯ್ತಿ ಉಪಾಧ್ಯಕ್ಷ ಶ್ರೀನಿವಾಸರಾವ್ ಅವರನ್ನು ಬಂಧಿಸಬೇಕು ಎಂದು ಸುಜಾತ ಭಟ್ ಪರ ವಕೀಲ ಮಂಜುನಾಥ್ ಆಗ್ರಹಪಡಿಸಿದ್ದಾರೆ. ಇವರ ಹೇಳಿಕೆ ಎಸ್ ಐಟಿ ತನಿಖೆಯ ದಾರಿ ತಪ್ಪಿಸುವಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸ ರಾವ್ 1980 ರಿಂದಲೂ ಧರ್ಮಸ್ಥಳದಲ್ಲಿ ಕಾನೂನು ಬದ್ದವಾಗಿ ಶವಸಂಸ್ಕಾರ ಮಾಡಲಾಗುತ್ತಿದೆ. ನಿಗೂಢ ವ್ಯಕ್ತಿ ತೋರಿಸಿದ್ದ ಜಾಗದಲ್ಲೂ ಶವಸಂಸ್ಕಾರ ಮಾಡಲಾಗಿತ್ತು ಎಂದು ಹೇಳಿಕೆ ನೀಡಿದ್ದರು.