ಧರ್ಮಸ್ಥಳ:ಸ್ನೇಹಮಯಿ ಕೃಷ್ಣ ವಿರುದ್ಧ ಠಾಣೆಗೆ ದೂರು; ಎಸ್‌ ಐಟಿ ಯಶಸ್ಸಿಗೆ ನಾಡಿದ್ದು ತಿಮರೋಡಿ ತಂಡದಿಂದ ಪ್ರಾರ್ಥನೆ

Most read

ಮಂಗಳೂರು: ಧರ್ಮಸ್ಥಳದ ಸೌಜನ್ಯಾ ಅವರ ಹತ್ಯೆಗೆ ಸಂಬಂಧಿಸಿದಂತೆ ಆಕೆಯ ಮಾವ ವಿಠಲ ಗೌಡ ಅವರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಸ್ನೇಹಮಯಿ ಕೃಷ್ಣ ವಿರುದ್ಧ ವಿರುದ್ಧ ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟುವಿನ ನಿವಾಸ್‌ ವೆಂಕಪ್ಪ ಕೋಟ್ಯಾನ್ ಅವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಅವರು, ಸೌಜನ್ಯಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಪತ್ತೆಗಾಗಿ ಕಳೆದ  13 ವರ್ಷಗಳಿಂದ ನಡೆಯುತ್ತಿರುವ ಹೋರಾಟವನ್ನು ಅನುಮಾನಿಸಿದ್ದಾರೆ. ಈ ಪ್ರಕರಣದಲ್ಲಿ ಸುಳ್ಳು ದೂರು ನೀಡಿರುವ ಮೈಸೂರಿನ ಕೃಷ್ಣ ಅವರಿಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ರೀತಿ ಸುಳ್ಳು ದೂರು ನೀಡಲು ಕೃಷ್ಣಗೆ ಕುಮ್ಮಕ್ಕು ನೀಡಿದರವನ್ನು ಪತ್ತೆಮಾಡಿ ಅವರನ್ನೂ ವಿಚಾರಣೆಗೊಳಪಡಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.

ಈ ಮಧ್ಯೆ ಸೌಜನ್ಯಾ ಪರ ಹೋರಾಟ ನಡೆಸುತ್ತಿರುವ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ಅವರು ಇದೇ 17ರಂದು (ಸಂಕ್ರಮಣದ ದಿನ) ಮಠ, ಮಂದಿರಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳಿಗೆ ಸತ್ಯಾಂಶವನ್ನು ಹೊರತೆಗೆಯುವ ಶಕ್ತಿ ಲಭಿಸಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಎಸ್‌ಐಟಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ತನಿಖೆಯನ್ನು ಹಾದಿ ತಪ್ಪಿಸುವ  ಪ್ರಯತ್ನವೂ ನಡೆಯುತ್ತಿದೆ ಎಂದೂ ಆರೋಪಿಸಿದ್ದಾರೆ.

ಈ ಮಧ್ಯೆ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯನ್ನು ಚುರುಕುಗೊಳಿಸಿದೆ.

ಎಸ್‌ ಐಟಿ ಅಧಿಕಾರಿಗಳು ಮತ್ತೆ ಸಾಕ್ಷಿ ದೂರುದಾರ ಚಿನ್ನಯ್ಯಗೆ ತಲೆಬುರುಡೆ ಇದ್ದ ಜಾಗ ತೋರಿಸಿದ್ದ ವಿಠಲ ಗೌಡ, ಧರ್ಮಸ್ಥಳದ ಪ್ರದೀಪ್‌, ಬುರುಡೆ ಹೊರ ತೆಗೆಯುವ ವಿಡಿಯೊ ಪ್ರಸಾರ ಮಾಡಿದ್ದ ಯೂಟ್ಯೂಬರ್ ಅಭಿಷೇಕ್‌, ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ್ ಟಿ. ಮತ್ತು  ಗಿರೀಶ್ ಮಟ್ಟೆಣ್ಣವರ್‌ ಅವರ ವಿಚಾರಣೆ ನಡೆಸಿದೆ.

More articles

Latest article