ಧರ್ಮಸ್ಥಳ ಹತ್ಯೆಗಳು: ನೇತ್ರಾವತಿ ನದಿ ತೀರದ ಕಾಡಿನಲ್ಲಿ ಮುಂದುವರಿದ ಶೋಧ ಕಾರ್ಯ; 7ನೇ ಜಾಗದಲ್ಲಿ ಸಿಕ್ಕಿದ್ದೇನು?

Most read

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮೃತದೇಹಗಳ ಕುರುಹುಗಳ ಪತ್ತೆಗಾಗಿ ಶೋಧ ಕಾರ್ಯ ಇಂದೂ ಸಹ ಮುಂದುವರಿದಿದೆ. .

ಈ ಪ್ರಕರಣದ ಅನಾಮಿಕ ಸಾಕ್ಷಿ ದೂರುದಾರ ಕಾಡಿನಲ್ಲಿ ತೋರಿಸಿದ ಏಳನೇ ಜಾಗವನ್ನು ಎಸ್‌ ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಅಗೆಯಲಾಗುತ್ತಿದೆ. ಸುಮಾರು 20 ಕಾರ್ಮಿಕರು ಹಾರೆ, ಗುದ್ದಲಿ ಪಿಕಾಸಿಗಳ ಜತೆ ಕಾಡಿನ ಒಳಗೆ ತೆರಳಿದ್ದು ಶೋಧ ಕಾರ್ಯ ನಡೆಯುತ್ತಿದೆ.  ಆದರೆ ಸಾಕ್ಷಿ ದೂರುದಾರ ತೋರಿಸಿರುವ ಏಳನೇ ಜಾಗದಲ್ಲಿ ಇದುವರೆಗೆ ಮೃತದೇಹದ ಯಾವುದೇ ಅವಶೇಷಗಳು ಕಂಡುಬಂದಿಲ್ಲ ಎಂದು ಎಸ್ಐಟಿ ಮೂಲಗಳು  ತಿಳಿಸಿವೆ.

ಏಳನೇ ಜಾಗದಲ್ಲಿ ಸುಮಾರು 3 ಅಡಿಗಳವರೆಗೆ ಅಗೆದರೂ ಯಾವುದೇ ಕುರುಹು ಕಂಡುಬಂದಿಲ್ಲ. ಹೀಗಾಗಿ ಹಿಟಾಚಿ ಬಳಸಿ ಆರು ಅಡಿ ಆಳದವರೆಗೆ ಅಗೆದರೂ ಯಾವುದೇ ಮಹತ್ವದ ಅವಶೇಷಗಳು ಸಿಕ್ಕಿಲ್ಲ. ಆದರೆ ಕರ್ಚಿಫ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ಇದನ್ನೂ ಎಫ್‌ ಎಸ್‌ ಎಲ್‌  ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಸಾಕ್ಷಿ ದೂರುದಾರ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ , ಎಸ್ಐಟಿಯ ಎಸ್‌ ಪಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವ ವಹಿಸಿದ್ದಾರೆ.

ಸಾಕ್ಷಿ ದೂರುದಾರ ಧರ್ಮಸ್ಥಳದ‌ಲ್ಲಿ ನೇತ್ರಾವತಿ ನದಿ ತೀರದಲ್ಲಿ ಒಟ್ಟು 13 ಜಾಗಗಳನ್ನು ತೋರಿಸಿ ಈ ಜಾಗಗಳಲ್ಲಿ ಮೃತದೇಹಗಳನ್ನು ಹೂತು ಹಾಕಿದ್ದಾಗಿ ಎಸ್ಐಟಿಗೆ ತಿಳಿಸಿದ್ದ. ಇದುವರೆಗೂ ಆರು ಜಾಗಗಳನ್ನು ಅಗೆಯಲಾಗಿದೆ. ಆರನೇ ಜಾಗದಲ್ಲಿ  ಮಾತ್ರ ಗುರುವಾರ ಗಂಡಸಿನ‌ ಮೃತದೇಹದ ಅವಶೇಷಗಳು ಸಿಕ್ಕಿದ್ದವು. ಉಳಿದ ಐದು ಕಡೆ ಯಾವುದೇ ಕುರುಹು ಕಂಡು ಬಂದಿರಲಿಲ್ಲ.  

More articles

Latest article