ಕುಂಭಮೇಳದಲ್ಲಿ ಗಾಯಗೊಂಡ ಬೆಳಗಾವಿಯ ಭಕ್ತರು; ತ್ರಿವೇಣಿ ಸಂಗಮದಲ್ಲಿ ಜನಸಾಗರ

Most read

ಮಹಾಕುಂಭಮೇಳ ನಗರ: ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ಇಬ್ಬರು ಬಿಜೆಪಿ ಕಾರ್ಯಕರ್ತೆಯರು ಹಾಗೂ ಇಬ್ಬರು ಬಾಲಕಿಯರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿನ ವಡಗಾವಿಯ ನಿವಾಸಿ ಸರೋಜಿನಿ ನಡುವಿನಹಳ್ಳಿ ಹಾಗೂ ಕಾಂಚನ್ ಕೋಪಾರ್ಡೆಗೆ ಗಾಯಗೊಂಡ ಬಿಜೆಪಿ ಕಾರ್ಯಕರ್ತೆಯರು. ಇವರೊಂದಿಗೆ ಇದ್ದ ಬಾಲಕಿಯರಾದ ಮೇಘಾ, ಜ್ಯೋತಿ ಅವರಿಗೂ ಗಾಯಗಳಾಗಿವೆ.
ಇವರೆಲ್ಲರೂ ಮೂರು ದಿನಗಳ ಹಿಂದೆ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಗಾಯಗೊಂಡಿರುವ ಇವರಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗಾವಿಯಿಂದ ಸುಮಾರು 500ಕ್ಕೂ ಹೆಚ್ಚು ಯಾತ್ರಾರ್ಥಿಗಳು ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.

ಮಹಾಕುಂಭಮೇಳದ ಪ್ರಯುಕ್ತ ತ್ರಿವೇಣಿ ಸಂಗಮದಲ್ಲಿ (ಗಂಗಾ, ಯಮುನಾ, ಸರಸ್ವತಿ ನದಿ ಸೇರುವ ಸ್ಥಳ) ಪವಿತ್ರ ಸ್ನಾನ ಮಾಡಿದ ಭಕ್ತರ ಸಂಖ್ಯೆ 20 ಕೋಟಿ ದಾಟಿದೆ ಎಂದು ಸರ್ಕಾರ ತಿಳಿಸಿದೆ. ಮೌನಿ ಅಮಾವಾಸ್ಯೆ ಮುನ್ನ ದಿನವಾದ ಮಂಗಳವಾರ ತ್ರಿವೇಣಿ ಸಂಗಮದಲ್ಲಿ ಐದು ಕೋಟಿ ಯಾತ್ರಾರ್ಥಿಗಳು ಪುಣ್ಯ ಸ್ನಾನ ಮಾಡಿದ್ದಾರೆ. ಭಾನುವಾರ ಮತ್ತು ಸೋಮವಾರದಂದು 3 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಮೌನಿ ಅಮಾವಾಸ್ಯೆ ದಿನವಾದ ಇಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಲಕ್ಷಾಂತರ ಭಕ್ತರು ಸೇರಿದ್ದಾರೆ. ಮಹಾಕುಂಭಮೇಳದ ಎರಡನೇ ‘ಪವಿತ್ರ ಸ್ನಾನ’ ಇದಾಗಿದ್ದು, 10 ಕೋಟಿ ಭಕ್ತರು ಸಂಗಮದಲ್ಲಿ ಮಿಂದೇಳುವ ಸಂಭವವಿದೆ. ಕಣ್ಣು ಹಾಯಿಸಿದಷ್ಟು ದೂರ ಜನಸಾಗರವೇ ಸೇರಿದೆ. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದತ್ತ (ಗಂಗಾ, ಯಮುನಾ, ಸರಸ್ವತಿ ನದಿ ಸೇರುವ ಸ್ಥಳ) ಅಸಂಖ್ಯಾತ ಜನರು ಸೇರುತ್ತಿದ್ದಾರೆ. ತ್ರಿವೇಣಿ ಮಾರ್ಗ, ಕಾಳಿ ಮಾರ್ಗ, ನಾಗ್ ವಾಸುಕಿ ರಸ್ತೆ, ಝೂಸಿ ರಸ್ತೆ, ಸಂಗಮ್ ಬೌಡ್ ರಸ್ತೆ ಸೇರಿದಂತೆ ಹಲವು ರಸ್ತೆಗಳು ಜನರಿಂದ ತುಂಬಿವೆ. ಕುಂಭಮೇಳದ ಸ್ಥಳವನ್ನು ‘ವಾಹನರಹಿತ ವಲಯ’ ಎಂದು ಘೋಷಿಸಲಾಗಿದ್ದು ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಜನವರಿ 13 ರಂದು ಆರಂಭವಾಗಿರುವ ಮಹಾಕುಂಭಮೇಳವು ಫೆಬ್ರುವರಿ 26ರವರೆಗೆ ನಡೆಯಲಿದೆ. ಈ ಬಾರಿ ಕುಂಭಮೇಳಕ್ಕೆ 45 ಕೋಟಿ ಜನ ಸೇರುವನಿರೀಕ್ಷೆ ಇದೆ.

More articles

Latest article