ಬೆಂಗಳೂರು: ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ನಿವಾಸದಲ್ಲಿ ಇಂದು ಸಭೆ ನಡೆಯಿತು. ಸಭೆಯಲ್ಲಿ ಸಚಿವ ಎಚ್ ಕೆ ಪಾಟೀಲ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಹಿರಿಯ ನಾಗರೀಕರೂ ಬೆಟ್ಟದ ತುದಿ ತಲುಪಲು ಅಗತ್ಯವಾದ ಸವಲತ್ತುಗಳು ಕಲ್ಪಿಸಲು ಹಾಗೂ ಇದಕ್ಕಾಗಿ ಪ್ರದಕ್ಷಿಣೆ ಮಾರ್ಗ ನಿರ್ಮಿಸುವ ಬಗ್ಗೆ ಸೂಚನೆಗಳನ್ನು ನೀಡಿದರು.
ಸಭೆಯ ಮುಖ್ಯಾಂಶಗಳು:
ಹನುಮ ಜಯಂತಿ ಸಂದರ್ಭದಲ್ಲಿ ಲಕ್ಷಾಂತರ ಜನರು ಬೆಟ್ಟಕ್ಕೆ ಭೇಟಿ ನೀಡುತ್ತಾರೆ.ಉತ್ತರ ಭಾರತದ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಯಾತ್ರಿಕರು ಉಳಿದುಕೊಳ್ಳಲು ಡಾರ್ಮೆಟರಿ ವ್ಯವಸ್ಥೆ , ಹಿರಿಯ ಭಕ್ತಾಧಿಗಳು ಬೆಟ್ಟ ಏರಲು ಅನುಕೂಲವಾಗುವಂತೆ ಮೆಟ್ಟಿಲುಗಳ ವ್ಯವಸ್ಥೆ , ಸಮುದಾಯ ಭವನ ನಿರ್ಮಾಣ ಹಾಗೂ ಇತರ ಪ್ರವಾಸಿ ಸೌಲಭ್ಯಗಳು ಸೇರಿ ಕ್ಷೇತ್ರದ ಸುತ್ತ ಮುತ್ತ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಿದೆ.
ಸದರಿ ಕ್ಷೇತ್ರಕ್ಕೆ ಹಂತ-1 ಮತ್ತು ಹಂತ-2ರಲ್ಲಿ ರೂ.200.00 ಕೋಟಿಗಳ ಕಾಮಗಾರಿಗಳು ಮಂಜೂರಾಗಿದ್ದು, ಈವರೆಗೆ ಸದರಿ ಕಾಮಗಾರಿಗಳಿಗೆ ರೂ.10.00 ಕೋಟಿಗಳನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದ್ದು, ಬಾಕಿ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಅನುದಾನ ಒದಗಿಸಬೇಕಿರುತ್ತದೆ.
ಮಂಜೂರಾಗಿರುವ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಿ ಜಮೀನಿನ ಕೊರತೆ ಇರುವುದರಿಂದ, ಪ್ರಸಾಪಿಸಿರುವ 77.28 ಖಾಸಗಿ ಜಮೀನನ್ನು ಅನುದಾನದ ಕೊರತೆಯಿರುವುದರಿಂದ ಈವರೆಗೂ ಭೂ-ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ, ಹೆಚ್ಚುವರಿ ಜಮೀನು ಒಳಗೊಂಡಂತೆ ಒಟ್ಟು 101-30 “ಎ-ಗುಂ ಖಾಸಗಿ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಅಗತ್ಯವಾಗಿರುವ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಒದಗಿಸಬೇಕಿರುತ್ತದೆ.
ಮಂಜೂರಾಗಿರುವ ಬಹುತೇಕ ಕಾಮಗಾರಿಗಳನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಕೈಗೊಳ್ಳಬೇಕಿರುವುದರಿಂದ, ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯ NOC ನೀಡಬೇಕಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಕಾಮಗಾರಿ:
2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಅಂಜನಾದ್ರಿ ಬೆಟ್ಟವೂ ಒಳಗೊಂಡಂತೆ ರಾಜ್ಯದ 11 ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರೋಪ್ ವೇಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಅನುಮೋದನೆ ನೀಡಲಾಗಿರುತ್ತದೆ.