ದೇವರ ದಾಸಿಮಯ್ಯ ಜಯಂತಿ ವಿಶೇಷ
ಹನ್ನೊಂದನೇ ಶತಮಾನದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅರಿವು ಮತ್ತು ಆಚಾರಗಳ ಮೂರ್ತರೂಪದಂತಿರುವ ದೇವರ ದಾಸಿಮಯ್ಯನವರ ಜಯಂತಿಯನ್ನು ಕರ್ನಾಟಕ ಸರ್ಕಾರವು ಏಪ್ರಿಲ್ 2 ರಂದು ಆಚರಿಸುತ್ತಿರುವ ಪ್ರಯುಕ್ತ ಅವರನ್ನು ಸ್ಮರಿಸಿದ್ದಾರೆ ಡಾ.ಗಂಗಾಧರಯ್ಯ ಹಿರೇಮಠ.
ಹನ್ನೊಂದನೆಯ ಶತಮಾನದ ಆದಿಕವಿ, ಪ್ರಥಮ ವಚನಕಾರ, ಬಸವಪೂರ್ವ ಯುಗದ ಶಿವಶರಣ, ‘ಸಾಮಾಜಿಕ ನ್ಯಾಯದ ಆದಿ ಸಿದ್ಧಾಂತಿ’, ಹೆಣ್ಣು-ಗಂಡು, ಮೇಲು-ಕೀಳು, ಜಾತಿ-ಪಂಥ ಆಚರಣೆಗಳ ‘ಭೇದ’ಗಳನ್ನು ಗುರುತಿಸಿ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧಿಕ್ಕರಿಸಿ, ಎಳೆಎಳೆಯಾಗಿ ಬಿಡಿಸಿ ತೋರಿಸಿದ ವಚನಕಾರ, ‘ದೇವರ ದಾಸಿಮಯ್ಯ’. ಯಾದಗಿರಿ ಜಿಲ್ಲೆಯ ಕೆಂಭಾವಿ ತಾಲ್ಲೂಕಿನ ‘ಮುದೆನೂರು’ ಇವರ ಜನ್ಮಸ್ಥಳ. 11ನೇ ಶತಮಾನದ ಕ್ರಿ.ಶ. 1070ರ ವರೆಗೆ ಬದುಕಿ-ಬಾಳಿದ್ದ ಇವರು ‘ಮುದೆನೂರಿನ’ ನೀರಿನ ಸೇಲೆಗಳನ್ನು ಬಳಸಿ ಬೇಸಾಯ ಮಾಡುತ್ತಾ ದಾಸೋಹಕ್ಕಾಗಿ ತನ್ನ ಕಣಜದಲ್ಲಿದ್ದ ಇಳೆಯ ಬೆಳೆಯನ್ನು ಬಳಸಿ, ಜನರಿಗೆ ಹಂಚುತ್ತಾ ಕಾಯಕ-ದಾಸೋಹ ಪರಿಕಲ್ಪನೆ ತಿಳಿಸಿ ದೇವರ ಅನುಗ್ರಹ ಪಡೆದು ದೇವರ ದಾಸಿಮಯ್ಯನಾದ. ಇವರ ಕುರಿತು ಕರ್ನಾಟಕ ಸರ್ಕಾರ ಏಪ್ರಿಲ್ 2 ರಂದು ಬುಧವಾರ ರಾಜ್ಯಾದ್ಯಂತ ಜಯಂತಿ ಆಚರಿಸುತ್ತಿದೆ. ಪ್ರಯುಕ್ತ ಈ ಲೇಖನ.
ಆದ್ಯ ವಚನಕಾರ ದೇವರ ದಾಸಿಮಯ್ಯ:
ಡಾ. ಫ.ಗು. ಹಳಕಟ್ಟಿಯವರು ದಾಸಿಮಯ್ಯನ ವಚನಗಳನ್ನು ಸಂಗ್ರಹಿಸಿ, ಪ್ರಥಮವಾಗಿ ಪ್ರಕಟಿಸಿದರು. ಇಲ್ಲಿಯವರೆಗೆ 150 ವಚನಗಳು ದೊರೆತಿವೆ. ಡಾ. ಎಲ್. ಬಸವರಾಜರ ಸಂಪಾದಕತ್ವದಲ್ಲಿಯೂ ವಚನಗಳು ಪ್ರಕಟವಾಗಿದೆ. 1873ರಲ್ಲಿ ಏ.ಕೆ. ರಾಮಾನುಜಂ ಅವರು ನಾಲ್ವರು ವಚನಕಾರರಲ್ಲಿ ‘ದೇವರ ದಾಸಿಮಯ್ಯ’ ಕುರಿತ ವಚನಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ. ‘ಸ್ಪೀಕಿಂಗ್ ಆಫ್ ಶಿವ’ ಎಂಬ ಈ ಕೃತಿ ಜಗತ್ತಿನ 120 ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿದೆ. ಬಸವಣ್ಣ ತನ್ನ 18 ವಚನಗಳಲ್ಲಿ ದಾಸಿಮಯ್ಯನನ್ನು ಸ್ಮರಿಸಿದ್ದಾರೆ. ಅಂಬಿಗರ ಚೌಡಯ್ಯ, ಅಲ್ಲಮ ಪ್ರಭು, ಅಕ್ಕಮಹಾದೇವಿ ಹೀಗೆ ಅನೇಕ ವಚನಕಾರರು ತಮ್ಮ ವಚನಗಳಲ್ಲಿ ನೆನಪಿಸಿಕೊಂಡಿದ್ದಾರೆ. 12ನೇ ಶತಮಾನದ ಎಲ್ಲ ವಚನಕಾರರಿಗೆ ಪ್ರೇರಣೆಯಾಗಿ, ವಚನಸಾಹಿತ್ಯಕ್ಕೆ ‘ಭೂಮಿಕೆ’ ಸಿದ್ಧಪಡಿಸಿಕೊಟ್ಟ ಸತ್ಯವನ್ನು ನಾವೆಲ್ಲ ಮರೆತಿದ್ದೇವೆ. 2007ರಲ್ಲಿ ಹಂಪಿ, ವಿ.ವಿ. ಅಧ್ಯಯನ ಪೀಠ ಆರಂಭಿಸಿದೆ. ರಾಜ್ಯಾದ್ಯಂತ ಗಾಯಕರು ಇವರ ವಚನಗಳ ಹಿರಿಮೆ, ಗರಿಮೆ ಗುರುತಿಸಿ ಹಾಡಿ ಜನಮನಕ್ಕೆ ತಲುಪಿಸುತ್ತಿರುವುದು ಸಂತಸದ ಸಂಗತಿಯಾದರೂ ಪ್ರಥಮ ವಚನಕಾರ ದಾಸಿಮಯ್ಯನ ವಚನಗಳಿಗೆ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ ಎಂಬುದು ಗಮನಾರ್ಹ.
ದಾಸಿಮಯ್ಯನ ವಚನಗಳ ವೈಶಿಷ್ಟ್ಯತೆ:
ದಾಸಿಮಯ್ಯನ ವಚನಗಳು ‘ವಚನ ಸಾಹಿತ್ಯದ ಸಮೃದ್ಧಿ’ ಮತ್ತು ಸಾಧ್ಯತೆಯ ಮುನ್ಸೂಚನೆ. ಸರಳತೆ, ಸಂಕ್ಷಿಪ್ತತೆ, ಕಿರಿದರಲ್ಲಿ ಹಿರಿದಾದ ಅರ್ಥವೇ ವಚನಗಳ ವೈಶಿಷ್ಟ್ಯತೆ. ಕವಿ ಹೃದಯದ ಕಾವ್ಯಗುಣವೂ ಇದೆ. ಭಾಷೆಯ ಬಳಕೆ ಅತ್ಯಂತ ಸರಳ, ಪರಿಣಾಮಕಾರಿ. ನಾನು, ನನ್ನದು ಎಂದು ಬೀಗುವ ಜನರಿಗೆ ಅವರ ವಚನ ಹೀಗಿದೆ……
ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥಾ…
ಈ ವಚನದಿಂದ ಎಲ್ಲವೂ ಭಗವಂತನದೇ ಎಂಬುದು ಅವರ ಆಶಯವಾಗಿದೆ.
ದರ್ಪ, ಅಹಂಕಾರ ವಿನಾಶಕ್ಕೆ ದಾರಿ:
ಮನುಷ್ಯನ ದೇಹವನ್ನೇ ಒಂದು ಬಂಡಿಯಾಗಿ ಪರಿಭಾವಿಸಿ ದಾಸಿಮಯ್ಯ ಹೀಗೆ ಹೇಳುತ್ತಾನೆ. ದೇಹವೆಂಬ ಬಂಡಿ ಅತಿಯಾದ ದರ್ಪ – ಅಹಂಕಾರಗಳಿಂದ ಬೀಗುತ್ತಿದ್ದರೆ, ಅದು ಬೇಗ ಉರುಳಿ ಬೀಳುವುದು ಖಚಿತ. ಈ ದೇಹದ ಬಂಡಿ ಉರುಳಿ ಬೀಳದಂತೆ ಸುಸ್ಥಿತಿಯಲ್ಲಿ ಚಲಿಸಬೇಕಾದರೆ ಜ್ಞಾನಿಗಳ ಸಂಪರ್ಕ, ಮಾರ್ಗದರ್ಶನ ಮುಖ್ಯ. ದರ್ಪ, ಅಹಂಕಾರಗಳು ನಮ್ಮನ್ನು ವಿನಾಶಕ್ಕೆ ತಳ್ಳುತ್ತವೆ. ಬಲ್ಲವರ, ಜ್ಞಾನಿಗಳ, ಬುದ್ಧಿ ಮಾತುಗಳನ್ನು ಕೇಳಿ, ಸಜ್ಜನರಾಗಿ ಬದುಕುವುದು ಶ್ರೇಯಸ್ಕರ. ಮೇಲು-ಕೀಳೆಂಬ ತಾರತಮ್ಯ ಬೇಡ, ಸಾಮಾಜಿಕ ಶ್ರೇಣಿಯಲ್ಲಿ ಕೆಳಗಿನವರು, ಅವರು ಅನರ್ಹರು, ಅಪ್ರಯೋಜಕರು, ಗೌರವ ಹೀನರೆಂದು ಭಾವಿಸುವುದು ಮಹಾಮುರ್ಖತನ. ಅದು ಉತ್ತಮರೆನಿಸಿಕೊಂಡವರ ‘ಉದ್ಧಟತನ’ ಎಂಬುದು ದಾಸಿಮಯ್ಯನ ಅಭಿಮತ.
ಸತಿ-ಪತಿ ಭಕ್ತಿಗೆ ದಾಸಿಮಯ್ಯನ ಸೂತ್ರ:
ಭಕ್ತಿ ಸಾಧನೆಯಲ್ಲಿ ಪತಿ-ಪತ್ನಿಯರಲ್ಲಿ ಸಾಮರಸ್ಯ ಅಗತ್ಯ. ಹೆಂಡತಿ ಭಕ್ತೆಯಾಗಿ, ಗಂಡ ಭಕ್ತನಲ್ಲದಿದ್ದರೆ, ಗಂಡು ಒಂದು ದೈವ, ಹೆಂಡತಿ ಇನ್ನೊಂದು ದೈವ ಪೂಜಿಸಿದರೆ ಅಮೃತದಲ್ಲಿ ವಿಷ ಬೆರೆಸಿದಂತೆ ಎಂಬುದು ದಾಸಿಮಯ್ಯರ ಮಾತು. ಸತಿ, ಪತಿ ಏಕೋಭಾವದಿಂದ ಶಿವನನ್ನು ಪೂಜಿಸಬೇಕು. ಆಗ ಭಕ್ತಿಗೆ ಶಕ್ತಿ ಹೆಚ್ಚು, ಸತಿ-ಪತಿ ಒಂದಾದ ಭಕ್ತಿ ಶಿವನಿಗೆ ಪ್ರಿಯ. ಸತಿ-ಪತಿ ಸೇರಿದರೆ ದಂಪತಿ, ಸಂಸಾರ. ಅವರೇ ಮಕ್ಕಳಿಗೆ ತಂದೆ ತಾಯಿ. ಕಾಳಿದಾಸ ಪಾರ್ವತಿ ಪರಮೇಶ್ವರರನ್ನು ಜಗತ್ತಿನ ಪ್ರಥಮ ತಂದೆ-ತಾಯಿಗಳೆಂದು ವಂದಿಸುತ್ತಾನೆ. ಗಂಡ-ಹೆಂಡತಿ ಸಾಮರಸ್ಯಕ್ಕೆ ಶಿವನ ಅರ್ಧನಾರೀಶ್ವರ ಪರಿಕಲ್ಪನೆ ಹೆಚ್ಚು ಅರ್ಥಪೂರ್ಣವಾಗಿದೆ.
ಜಾತಿಗಿಂತ ಗುಣ, ವ್ಯಕ್ತಿತ್ವ ಮುಖ್ಯ:
ಕೀಳುಜಾತಿ, ಮೇಲುಜಾತಿ ಎಂದು ಏಕೆ ತಾರತಮ್ಯ ಮಾಡುತ್ತಿದ್ದೀರಿ? ಜಾತಿಗಿಂತ ಗುಣ, ವ್ಯಕ್ತಿತ್ವ ಮುಖ್ಯ. ಉತ್ತಮ ಗುಣ, ಸ್ವಭಾವಗಳನ್ನುಳ್ಳ ಯಾರೇ ಆಗಲಿ, ಅವನು ಉತ್ತಮನೇ ಎಂದು ತಿಳಿಸಿ ತಮ್ಮ ವಚನಗಳಲ್ಲಿ ಸಮಕಾಲೀನರಾದ ಮಾದಾರ ಚೆನ್ನಯ್ಯ, ಕೆಂಭಾವಿ ಭೋಗಣ್ಣ, ಕುಂಬಾರ ಗುಂಡಯ್ಯ ಮುಂತಾದವರ ಶ್ರೇಷ್ಠ ಭಕ್ತಿಯನ್ನು ಸ್ಮರಿಸಿದ್ದಾರೆ. ಶಿವನಲ್ಲಿ ನಂಬಿಕೆ, ಭಕ್ತಿ ಮುಖ್ಯ. ಚಂಚಲ ಮನಸ್ಸು, ದೃಢವಿಲ್ಲದ ಭಕ್ತಿ, ತೂತು ಮನಸ್ಸು ಬೇಡ. ಸದ್ಭಾವನೆ, ಸ್ಥಿರತೆ ಮುಖ್ಯ. ಎಲ್ಲರನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಸ್ತ್ರೀ-ಪುರುಷರಲ್ಲಿ ತಾರತಮ್ಯ ಬೇಡ, ಜಾತೀಯತೆ ಬೇಡ ಎಂಬುದು ಅವರ ವಚನಗಳ ಆಶಯವಾಗಿದೆ.
ವೇಷಧಾರಿ ಸನ್ಯಾಸಿಗಳ ಕುರಿತು ವಿಡಂಬನೆ:
ಕೆಲವರು ತಲೆ ಬೋಳಿಸಿಕೊಂಡು, ಮಡಿಯಾದ ಪುಟಗೋಸಿ ಕಟ್ಟಿಕೊಂಡು ನಾನು ಸರ್ವಸಂಗ ಪರಿತ್ಯಾಗಿ ಎಂದು ಜನರಲ್ಲಿ ಪೋಜು ಕೊಡುತ್ತಾರೆ. ಅದೇ ವೇಷದಲ್ಲೇ ಕಂಡ ಕಂಡವರ ಬಳಿ ಕೈಚಾಚಿ ಭಿಕ್ಷೆ ಬೇಡುತ್ತಾರೆ. ಇಂತವರನ್ನು ಶಿವ ಮೆಚ್ಚುವುದಿಲ್ಲ ಎಂಬುದು ದಾಸಿಮಯ್ಯನ ವಚನದ ಸ್ಪಷ್ಟನೆ. ಇವರಿಗೆ ಹೊಟ್ಟೆಪಾಡು ಮುಖ್ಯ, ಸನ್ಯಾಸ ಧರ್ಮವಲ್ಲ. ಶರಣರು ಆವರೆಗಿನ ಸನ್ಯಾಸದ ರೀತಿ-ನೀತಿ ಅಲ್ಲಗಳೆದು ಸಂಸಾರದಿಂದಲೇ ಅಂತರಂಗದಲ್ಲಿ ಸನ್ಯಾಸ ಸಾಧಿಸಬಹುದು. ಅಂಥವನು ನಿಜವಾದ ಭಕ್ತ, ದೇಹ ನಿಯಂತ್ರಣದೊಂದಿಗೆ ಮನಸ್ಸಿನ ನಿಯಂತ್ರಣ ಮುಖ್ಯ ಎಂಬುದು ದಾಸಿಮಯ್ಯನ ಅಭಿಮತ.
ಭಕ್ತರ ಕುರಿತು ದಾಸಿಮಯ್ಯನ ವಿಚಾರ:
ತಮ್ಮ ವಚನದಲ್ಲಿ ಸುಂದರ ರೂಪಕದ ಮೂಲಕ ವೇಷಧಾರಿ ಭಕ್ತರನ್ನು ವಿಡಂಬಿಸಿದ್ದಾರೆ. ಬೆಕ್ಕು ಮಠದಲ್ಲಿದ್ದ ಮಾತ್ರಕ್ಕೆ ಅದು ವಿರಾಗಿಯಾಗಲು ಸಾಧ್ಯವೆ? ಅದು ಎಲ್ಲಿದ್ದರೂ ತನ್ನ ಸಹಜ ಸ್ವಭಾವ ಬಿಡದೆ ಧ್ಯಾನಸ್ಥನಂತೆ ಕುಳಿತರೂ ‘ಇಲಿ’ ಯನ್ನು ಕಂಡ ಕೂಡಲೇ ಚಂಗನೆ ನೆಗೆದು ಹಿಡಿಯಲು ಓಡುತ್ತದೆ. ಅದರಂತೆ ವೇಷದ ಡಾಂಭಿಕ ಭಕ್ತರನ್ನು ಯಾವ ಕಾರಣಕ್ಕೂ ನಂಬುವಂತಿಲ್ಲ. ಭಕ್ತನ ವೇಷ ಇರಬಹುದು. ಆದರೆ ಭಕ್ತಿಯಲ್ಲ, ಅವರು ತಮ್ಮ ಸ್ವಾರ್ಥ ಸಾಧನೆ, ವಿಷಯ ಲಾಲಸೆ, ತೀರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸೋಗಿನ ಭಕ್ತರನ್ನು ನಂಬಬಾರದೆಂದು ತಿಳಿಸಿ ಸದ್ಭಕ್ತರು, ಸಜ್ಜನರು ಕರೆದರೆ ಅವರ ಮನೆ ಬಾಗಿಲಿಗೆ ಹೋಗುವೆ ಎನ್ನುತ್ತಾರೆ ದೇವರ ದಾಸಿಮಯ್ಯನವರು.
ಡಾ. ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು.
ಮೊ: 9880093613
ಇದನ್ನೂ ಓದಿ- ಭೂ ಮಸೂದೆಯ ಅನುಷ್ಠಾನಕ್ಕೆ ಅಡಿಪಾಯ ಹಾಕಿದ ಬಿ ಸುಬ್ಬಯ ಶೆಟ್ಟಿ