ದೇವನೂರ ಮಹಾದೇವ ಅವರಿಗೆ ವೈಕಂ ಪ್ರಶಸ್ತಿ ಪ್ರದಾನ

Most read

ವೈಕಂ: ಕೇರಳದ ದೇವಸ್ಥಾನ ಪ್ರವೇಶದ ‘ವೈಕಂ’ ಹೋರಾಟದ ನೆನಪಿಗೆ ತಮಿಳುನಾಡು ಸರ್ಕಾರ ಆರಂಭಿಸಿರುವ 2024ನೇ ಸಾಲಿನ ವೈಕಂ ಪ್ರಶಸ್ತಿಯನ್ನು ಕನ್ನಡದ ಖ್ಯಾತ ಸಾಹಿತಿ ದೇವನೂರ ಮಹಾದೇವ ಅವರಿಗೆ ಇಂದು ಪ್ರಧಾನ ಮಾಡಲಾಯಿತು.

ಕೇರಳದ ವೈಕಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಪೆರಿಯಾರ್ ಸ್ಮಾರಕ ಮತ್ತು ಗ್ರಂಥಾಲಯವನ್ನು’ ಉದ್ಘಾಟಿಸಿದ ನಂತರ, ದೇವನೂರ ಮಹಾದೇವ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಸ್ತಿ ಪ್ರದಾನ ಮಾಡಿದರು.

ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದಲ್ಲಿ ಕೇರಳದ ವೈಕಂನಲ್ಲಿ ನಡೆದಿದ್ದ ವೈಕಂ ಹೋರಾಟಕ್ಕೆ ಶತಮಾನೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಶತಮಾನ ಸಮಾರಂಭ ಮತ್ತು ಪೆರಿಯಾರ್ ಸ್ಮಾರಕ ಉದ್ಘಾಟನಾ ಕಾರ್ಯಕ್ರಮವನ್ನು ಕೇರಳದ ವೈಕಂದಲ್ಲಿ ತಮಿಳುನಾಡು ಸರ್ಕಾರ ಗುರುವಾರ ಹಮ್ಮಿಕೊಂಡಿತ್ತು. ಇದೇ ಕಾರ್ಯಕ್ರಮದಲ್ಲಿ ದೇವನೂರ ಮಹದೇವ ಅವರಿಗೆ ವೈಕಂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ದೇವನೂರ ಮಹಾದೇವ ತಾವು ಬರೆದಿರುವ ʻಆರ್‌ಎಸ್‌ಎಸ್ ಆಳ ಅಗಲʼ ಪುಸ್ತಕದ ಕನ್ನಡ, ಇಂಗ್ಲಿಷ್ ಮತ್ತು ಮಲೆಯಾಳಂ ಅನುವಾದದ ಪ್ರತಿಗಳನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ನೀಡಿದರು.

ಪ್ರಶಸ್ತಿ ಪ್ರದಾನದ ಬಳಿಕ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮ್ಮ ಎಕ್ಸ್ ಖಾತೆಯಲ್ಲಿ “ತಂಥೈ ಪೆರಿಯಾರ್ ಅವರ ವಿಚಾರವಾದಿ ತತ್ವಗಳ ಅನುಯಾಯಿಯಾಗಿ, ಖ್ಯಾತ ಸಾಹಿತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದಣಿವರಿಯದ ಪ್ರತಿಪಾದಕರಾದ ದೇವನೂರು ಮಹಾದೇವ ಅವರಿಗೆ ಚೊಚ್ಚಲ ‘ವೈಕಂ ಪ್ರಶಸ್ತಿ’ ಪ್ರದಾನ ಮಾಡಲು ನನಗೆ ಹೆಮ್ಮೆಯಾಗುತ್ತದೆ. ಅವರ ಕೃತಿಗಳು ಅಸಮಾನತೆಗಳನ್ನು ಎದುರಿಸಲು ಮತ್ತು ಸಮಾನ ಸಮಾಜವನ್ನು ಮುನ್ನಡೆಸಲು ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈಕಂನಲ್ಲಿ ಈ ಪ್ರಶಸ್ತಿಯನ್ನು ನೀಡುವುದು ಭಾರಿ ಮಹತ್ವ ಹೊಂದಿದೆ. ಏಕೆಂದರೆ, ಪೆರಿಯಾರ್ ಅವರು ಇಲ್ಲಿಂದಲೇ ಅಸ್ಪೃಶ್ಯತೆ ವಿರುದ್ಧ ಐತಿಹಾಸಿಕ ಚಳುವಳಿಯನ್ನು ಮುನ್ನಡೆಸಿದ್ದರು. ಸಾಮಾಜಿಕ ಸಮಾನತೆ ಮತ್ತು ನ್ಯಾಯದ ಅನ್ವೇಷಣೆಯಲ್ಲಿ ದೇವನೂರು ಮಹಾದೇವ ಅವರ ಕಾರ್ಯವು ನಮಗೆ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದು ಸ್ಟಾಲಿನ್ ಹೇಳಿದ್ದಾರೆ.

ವೈಕಂ ಪ್ರಶಸ್ತಿಯು ರೂ. 5 ಲಕ್ಷ ನಗದು ಮತ್ತು ಸ್ವರ್ಣಲೇಪಿತ ಪದಕವನ್ನು ಒಳಗೊಂಡಿದೆ. ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಗಣ್ಯ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ವೈಕಂ ಪ್ರಶಸ್ತಿ ನೀಡಲಾಗುತ್ತದೆ ಎಂದು ತಮಿಳುನಾಡು ಸರ್ಕಾರದ ಪ್ರಕಟಣೆ ತಿಳಿಸಿದೆ.

More articles

Latest article