ನವದೆಹಲಿ: ದೇವನಹಳ್ಳಿಯ ಚನ್ನರಾಯಪಟ್ಟಣದ ರೈತರ ಭೂ ಸ್ವಾಧೀನ ಕುರಿತು ಚರ್ಚಿಸಲು ಕರೆಯಲಾಗಿದ್ದ ಭೂ ಒತ್ತುವರಿ ಪರಿಶೀಲನೆಯ ಜಂಟಿ ಸಂಸದೀಯ ಸಮಿತಿ ಸಭೆಯಿಂದ ಬಿಜೆಪಿ ಸದಸ್ಯರು ಹೊರನಡೆದಿದ್ದಾರೆ.
ದೇವನಹಳ್ಳಿ ರೈತರ ಭೂ ಸ್ವಾಧೀನ ಕುರಿತು ಕಾಂಗ್ರೆಸ್ ಹೈಕಮಾಂಡ್ ಜತೆ ಚರ್ಚಿಸಲು ನಟ ಪ್ರಕಾಶ್ ರಾಜ್, ಹೋರಾಟಗಾರ್ತಿ ಮೇಧಾ ಪಾಟ್ಕರ್ ಸೇರಿದಂತೆ ಪ್ರಮುಖ ಹೋರಾಟಗಾರರು ದೆಹಲಿಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಹೋರಾಟಗಾರರ ಜತೆ ಭೂ ಒತ್ತುವರಿ ಪರಿಶೀಲನೆಯ ಜಂಟಿ ಸಂಸದೀಯ ಸಮಿತಿ ಸಭೆ ಏರ್ಪಡಿಸಲಾಗಿತ್ತು. ಸಮಿತಿಯಲ್ಲಿ ಆಡಳಿತಾರೂಢ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಸಂಸದರು ಸದಸ್ಯರಾಗಿದ್ದರು. ಈ ಸಭೆಯಲ್ಲಿ ದೇವನಹಳ್ಳಿ ಭೂ ಸ್ವಾಧೀನ ಹೋರಾಟ ಪ್ರಮುಖ ಚರ್ಚಾ ವಿಷಯವಾಗಿತ್ತು.
ಸಭೆ ಆರಂಭಗೊಂಡಾಗ ಬಿಜೆಪಿ ಸದಸ್ಯರು ಕೆಲವೇ ನಿಮಿಷಗಳಲ್ಲಿ ಬರುತ್ತೇವೆ ಎಂದು ಹೊರಹೋಗಿದ್ದಾರೆ. ಆದರೆ ಅವರಾರೂ ಸಭೆಗೆ ಮರಳಿ ಬಂದಿಲ್ಲ.
ಈ ಮಧ್ಯೆ ಚನ್ನರಾಯಪಟ್ಟಣದ ರೈತರ ಭೂ ಸ್ವಾಧೀನ ವಿರೋಧಿಸಿ ಜೂನ್ 26ರಿಂದಲೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಭೂಮಿ ಸತ್ಯಾಗ್ರಹ’ ನಡೆಯುತ್ತಿದೆ. ಜುಲೈ 4ರಂದು ರೈತ ಮುಖಂಡರು ಮತ್ತು ಹೋರಾಟಗಾರರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಲಿದ್ದಾರೆ. ಅದೇ ದಿನ ಫ್ರೀಡಂ ಪಾರ್ಕ್‌ನಲ್ಲಿ ‘ಬೃಹತ್ ನಾಡ ಉಳಿಸಿ’ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಜುಲೈ 4ರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿ ಸ್ವಾಧೀನ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಭೂ ಸ್ವಾಧೀನವನ್ನು ಸಂಪೂರ್ಣವಾಗಿ ಕೈ ಬಿಡಬೇಕು. ಅದಕ್ಕೂ ಮುನ್ನ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಮುಖ ವಿಷಯವನ್ನಾಗಿ ಕೈಗೆತ್ತಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಪಡಿಸಿದ್ದಾರೆ.