ದೇವನಹಳ್ಳಿ ಭೂಸ್ವಾಧೀನ ಕೈಬಿಡುವಂತೆ ಸಿಎಂಗೆ ಸಲಹೆ ನೀಡಲು ರಾಹುಲ್‌ ಗಾಂಧಿಗೆ ಪತ್ರ ಬರೆದ ಹೋರಾಟಗಾರರು

Most read

ಬೆಂಗಳೂರು: ದೇವನಹಳ್ಳಿಯ ಚನ್ನರಾಯಪಟ್ಟಣ ಸೇರಿದಂತೆ 13 ಗ್ರಾಮಗಳ ಸುಮಾರು 1700 ಎಕರೆ ಭೂಮಿಯನ್ನು ಬಲವಂತವಾಗಿ ಭೂಸ್ವಾಧೀನವನ್ನು ಕೈಬಿಟ್ಟು ರೈತರ ಹಿತ ರಕ್ಷಿಸಬೇಕು ಎಂದು ಲೋಕಸಭೆ ವಿಪಕ್ಷ

ನಾಯಕ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ-ಕರ್ನಾಟಕ ಪತ್ರ ಬರೆದಿದೆ.

ರೈತರ ಹಿತಕ್ಕೆ ವಿರುದ್ಧವಾಗಿ ಉದ್ಯಮಿಗಳ ಪರ ನಿಲುವನ್ನು ಕೈಗೊಂಡರೆ ತೀವ್ರ ಸ್ವರೂಪದ ರಾಜಕೀಯ ಪರಿಣಾಮ ಎದುರಿಸಬೇಕಾಗುತ್ತದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪೂರ್ಣಪ್ರಮಾಣದ ಹೋರಾಟ ಸ್ಫೋಟಗೊಳ್ಳುವುದರ ಜತೆಗೆ ಈ ಹೋರಾಟ ರಾಷ್ಟ್ರಮಟ್ಟದ ಸ್ವರೂಪವನ್ನೂ ಪಡೆದುಕೊಳ್ಳಬಹುದು ಎಂದೂ ಎಚ್ಚರಿಸಿದೆ.

ಈ ವಿಷಯ ಕುರಿತು ಚರ್ಚಿಸಲು ಜುಲೈ 4 ರಂದು ಮುಖ್ಯಮಂತ್ರಿಗಳು ಕರೆದಿದ್ದ ಸಭೆಯಲ್ಲಿ ಕಾನೂನಾತ್ಮಕ ಪರಿಣಾಮಗಳ ಕುರಿತು ಸಮಾಲೋಚನೆಗಳು ಅಗತ್ಯವಿರುವುದರಿಂದ ಸರ್ಕಾರಕ್ಕೆ ಕನಿಷ್ಟ 10 ದಿನ ಸಮಯ ಬೇಕು ಎಂದು ಕೋರಲಾಗಿತ್ತು.ನಾಳೆ, ಜುಲೈ 15ರ ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದೆ.

ಆದರೆ ಸರ್ಕಾರದ ಉದ್ದೇಶಗಳ ಬಗ್ಗೆ ಅನುಮಾನ ಮೂಡುವಂತಹ ವಿದ್ಯಮಾನಗಳು ನಡೆಯುತ್ತಿವೆ. ಒಂದು ಕಡೆ  ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಹೋರಾಟಗಾರರನ್ನು ಲೇವಡಿ ಮಾಡುತ್ತಾ ದೇವನಹಳ್ಳಿ ಭೂಮಿಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಬಿಟ್ಟರೆ ಡಿಫೆನ್ಸ್‌ ಕಾರಿಡಾರ್‌ ಪ್ರಾಜೆಕ್ಟ್‌ ನೆರೆಯ ಆಂಧ್ರ ಪ್ರದೇಶಕ್ಕೆ ಎಂದು ಪ್ರತಿಪಾದಿಸಿದ್ದಾರೆ. ಮತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಕ್ಷಣಾ ಮಂತ್ರಿ ರಾಜನಾಥ ಸಿಂಗ್‌ ಅವರನ್ನು ಕಂಡು ದೇವನಹಳ್ಳಿ ಭಾಗಕ್ಕೆ ಡಿಫೆನ್ಸ್‌ ಕಾರಿಡಾರ್‌ ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸುತ್ತಾರೆ.

ಇತ್ತ, ಚನ್ನರಾಯಪಟ್ಟಣ ಹೋಬಳಿಯಲ್ಲಿ ಒಂದಷ್ಟು ಪಿತ್ರಾರ್ಜಿತ ಜಮೀನು ಹೊಂದಿರುವ, ಕೆಲವು ಮಂದಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ರಿಯಲ್‌ ಎಸ್ಟೇಟ್‌ ಏಜೆಂಟರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.‌ ಮುನಿಯಪ್ಪ ಅವರ ಚಿತಾವಣೆಯಂತೆ ʼರೈತ ಸಮಿತಿʼ ಹೆಸರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ “ರೇಟು ಕೊಟ್ಟರೆ – ಭೂಮಿ ಕೊಡುತ್ತೇವೆ; ನಾವು ಭೂ ಸ್ವಾಧೀನಕ್ಕೆ ಅಥವಾ ಡಿಫೆನ್ಸ್‌ ಕಾರಿಡಾರ್‌ ಯೋಜನೆಗೆ ವಿರುದ್ಧವಿಲ್ಲ” ಎಂದು ಹೇಳಿ ಗೊಂದಲ ಸೃಷ್ಟಿಸುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಭೂಮಿಗೆ “ರೇಟು” ಎಂದು ಮಾತಾಡುವವರು ರಿಯಲ್‌ ಎಸ್ಟೇಟ್‌ ಏಜೆಂಟರಾಗಿರಬಹುದೇ ಹೊರತು ಉಳುವ ರೈತರಾಗಿರಲು ಸಾಧ್ಯವಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಎಲ್ಲ, ಬೆಳವಣಿಗೆಗಳು ಸರ್ಕಾರದ ಮೇಲೆ ಅನುಮಾನ ಮೂಡಿಸುತ್ತವೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ನೀತಿಗಳನ್ನೇ ಕಾಂಗ್ರೆಸ್‌ ಸರ್ಕಾರವೂ ಮುಂದುವರೆಸಿಕೊಂಡು ಹೋಗುತ್ತಿದೆ. ಕಾಂಗ್ರೆಸ್‌ ನೇತ್ರತ್ವದ  ಯುಪಿಎ ಸರ್ಕಾರವೇ ತಂದಿದ್ದ 2013 ರ ಭೂ ಸ್ವಾಧೀನ ಕಾಯ್ದೆಯ ನಿಬಂಧನೆಗಳನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವೇ ಮಾಡುತ್ತಿದೆ. ರಾಜ್ಯ ಸರ್ಕಾರ ತಪ್ಪು ಹಾದಿ ತುಳಿಯುತ್ತಿದ್ದರೂ ಅದನ್ನು ಸರಿಪಡಿಸುವಲ್ಲಿ ಹೈ ಕಮಾಂಡ್‌ ವಿಫಲಗೊಳ್ಳುತ್ತಿದೆ ಎಂಬ ಅನುಮಾನ ಉಂಟಾಗಿದೆ ಎಂದಿದ್ದಾರೆ.

ರಾಷ್ಟ್ರ ಮತ್ತು ರಾಜ್ಯ ಬಹುತೇಕ ರೈತ ಮತ್ತು ಕಾರ್ಮಿಕ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಹೈ ಕಮಾಂಡ್‌ ಸಕರಾತ್ಮಕ ತೀರ್ಮಾನ ಕೈಗೊಂಡು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುತ್ತದೆ ಎಂದು ನಿರೀಕ್ಷಸುತ್ತೇವೆ. ಈ ಬಲವಂತದ ಭೂಸ್ವಾಧೀನವನ್ನು ಕೈಬಿಡಿ ಎಂದು ಮತ್ತೊಮ್ಮೆ ಮನವಿ ಮಡಿಕೊಳ್ಳುತ್ತೇವೆ. ಇಲ್ಲವಾದಲ್ಲಿ ರಾಷ್ಟ್ರ ಮಟ್ಟದ ಹೋರಾಟ ಅನಿವಾರ್ಯ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಸಂಸ ಒಕ್ಕೂಟದ ಇಂದೂಧರ ಹೊನ್ನಾಪುರ CITU ರಾಜ್ಯ ಅಧ್ಯಕ್ಷೆ ಎಸ್.‌ ವರಲಕ್ಷ್ಮಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ, ನೂರ್‌ ಶ್ರೀಧರ್‌, ರೈತ ಸಂಘಟನೆಗಳ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಎಚ್.ಆರ್. ಬಸವರಾಜಪ್ಪ, ಗುರುಪ್ರಸಾದ್‌ ಕೆರಗೋಡು, ಯು.ಬಸವರಾಜು, ಕೆ.ವಿ.ಭಟ್‌, ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್‌, ವಿ.ನಾಗರಾಜ್‌ ಸೇರಿದಂತೆ ಅನೇಕ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು  ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿಕೊಂಡ ಪ್ರಮುಖರು.

More articles

Latest article