ಭೂಸ್ವಾಧೀನ ಕೈಬಿಟ್ಟ ಸರ್ಕಾರ: ಕುಣಿದುಕುಪ್ಪಳಿಸಿದ ದೇವನಹಳ್ಳಿ ರೈತರು

Most read

ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಮತ್ತು ಇತರ 13 ಗ್ರಾಮಗಳ 1777 ಎಕರೆ ಭೂಸ್ವಾಧೀನವನ್ನು ಕೈಬಿಟ್ಟಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸುತ್ತಿದ್ದಂತೆ ದೇವನಹಳ್ಳಿ ರೈತರ ಸಂಭ್ರಮ ಮುಗಿಲುಮುಟ್ಟಿತ್ತು. ಅನ್ನ ಕೊಡುವ ಭೂಮಿ ಉಳಿಯಿತು ಎಂದು  ರೈತ ಹೋರಾಟಗಾರರು ಕುಣಿದುಕುಪ್ಪಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ನಡೆದ ಸಭೆ ಯಶಸ್ವಿಯಾಗಿ ಗೆಲುವು ಸಿಕ್ಕ ಯ ನಂತರ  ಶಿವಾನಂದ ವೃತ್ತದ ಗಾಂಧಿ ಭವನದಲ್ಲಿ ಹೋರಾಟಗಾರರು ಸಭೆ ನಡೆಸಿದರು. ಎಂದಿಗೂ ಎಂದೆಂದಿಗೂ ಗೆಲುವು ನಮ್ಮದೇ.. ಎಂಬ ಚಲನ ಚಿತ್ರ ಗೀತೆಗೆ ನರ್ತಿಸುತ್ತಾ ಹಸಿರು ಟವಲ್ ಬೀಸುತ್ತಾ ಸಂಭ್ರಮಿಸಿದರು.

ನಂತರ ಮಾತನಾಡಿದ ನಟ ಪ್ರಕಾಶ್ ರಾಜ್, 13 ಹಳ್ಳಿಗಳಲ್ಲಿನ ಭೂ ಸ್ವಾಧೀನ ಕೈಬಿಡಲು ಸರ್ಕಾರ ಒಪ್ಪಿಕೊಂಡಿದ್ದಕ್ಕೆ ರೈತರ ಹೋರಾಟವೇ ಕಾರಣ. ಈ ಗೆಲುವನ್ನು ನಾವು ಉಳಿಸಿಕೊಳ್ಳಬೇಕಿದೆ. ರೈತರ ಈ ಗೆಲುವು ಮುಂದಿನ ಚಳವಳಿಗಳಿಗೆ ನಾಂದಿಯಾಗಲಿದೆ. ದೇವನಹಳ್ಳಿಯ ರೈತರ ಹೋರಾಟದಿಂದ ಗೆಲುವು ಸಿಕ್ಕಿದೆ ಎಂದರು.

ರೈತರ ಹೋರಾಟಕ್ಕೆ ಯಾವುದೇ ಸರ್ಕಾರ ತಲೆಬಾಗಬೇಕು. ನಮ್ಮ ಕರೆಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ನಾಯಕ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಆದರೆ, ರೈತರ ಕೂಗು ಕೇಳಿಸಿಕೊಳ್ಳಲು ಮೂರು ವರ್ಷ ತೆಗೆದುಕೊಂಡರು ಎಂದರು.

ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಇದೊಂದು ಐತಿಹಾಸಿಕ, ದಾಖಲೆಯ ಹೋರಾಟ. ಸರ್ಕಾರ ಭೂಸ್ವಾಧೀನ ಕೈಬಿಟ್ಟಿರುವುದು ಜನಚಳವಳಿಗೆ ಸಂದ ಜಯ ಎಂದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಹೋರಾಟಗಾರರು, ಕಾರ್ಮಿಕರು, ಬುದ್ದಿಜೀವಿಗಳು ಸಂಘಟಿತ ಹೋರಾಟದಿಂದ ಈ ಗೆಲುವು ಸಾಧ್ಯವಾಯಿತು.   ಸಾಹಿತಿ, ಕಲಾವಿದರೂ ಕೈಜೋಡಿಸಿದ್ದು ನೆರವಿಗೆ ಬಂದಿತು. ಅನೇಕ ಮಂದಿ  ಪ್ರತ್ಯಕ್ಷ, ಪರೋಕ್ಷವಾಗಿ ದೇವನಹಳ್ಳಿಯ ರೈತರ ಹೋರಾಟದ ಪರವಾಗಿ ಕೆಲಸ ಮಾಡಿದ್ದರಿಂದ ಗೆಲುವು ಸಿಕ್ಕಿದೆ. ಈ ಮೂಲಕ ರಾಜ್ಯದ ನೆಲ-ಜಲವನ್ನು ಉಳಿಸುವ ಕೆಲಸವಾಗಬೇಕು ಎಂದರು.

ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಚಾಲಕ ಕಾರಳ್ಳಿ ಶ್ರೀನಿವಾಸ್‌ ಮಾತನಾಡಿ ನಾನು ದಲಿತರ ಹುಡುಗ. ದಲಿತ ಸಂಘರ್ಷ ಸಮಿತಿ ನನ್ನ ಸಂಘಟನೆ. ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಎಲ್ಲ ಸಮುದಾಯದ ಜನರು ನನ್ನ ನಾಯಕತ್ವವನ್ನು ಒಪ್ಪಿಕೊಂಡರು. ನನ್ನೊಳಗೆ ನೀಲಿ ಮಾತ್ರ ಇತ್ತು, ಈಗ ಕೆಂಪು ನನ್ನ ರಕ್ತವಾಗಿದೆ, ಹಸಿರು ಉಸಿರಾಗಿದೆ. ಈ ಗೆಲುವು ಜನ ಚಳವಳಿಗಳಿಗೆ ಶಕ್ತಿ ತುಂಬಲಿ ಎಂದರು.

ಚನ್ನರಾಯಪಟ್ಟಣದ ರೈತ ಮಹಿಳೆ ನಾರಾಯಣಮ್ಮ ಮಾತನಾಡಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ. ನಾವು ಕೃಷಿಯನ್ನು ಬಿಡುವುದಿಲ್ಲ. ಈಗ ನಮ್ಮ ಭೂಮಿ ನಮಗೆ ದಕ್ಕಿದೆ. ಅದರಲ್ಲಿ ಬೆಳೆಯನ್ನು ಬೆಳೆದು ಜೀವನ ನಡೆಸುತ್ತೇವೆ. ಇಡೀ ರಾಜ್ಯದ ಜನ ಸಂಘಟನೆಗಳು, ಜನರು ನಮ್ಮ ಜೊತೆಗೆ ನಿಂತರು. ಅವರಿಗೆ ಧನ್ಯವಾದ ಹೇಳುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ, ನೂರ್ ಶ್ರೀಧರ್, ಕಾರಳ್ಳಿ ಶ್ರೀನಿವಾಸ್, ವರಲಕ್ಷ್ಮಿ, ವಿಜಯಮ್ಮ, ಕೆ ಎಸ್‌ ವಿಮಲ ವೀರಸಂಗಯ್ಯ ಮೊದಲಾದವರು ಹಾಜರಿದ್ದರು.

More articles

Latest article