ನಮ್ಮ ದಿನನಿತ್ಯದ ಬದುಕಿಗೆ ಸಂಬಂಧಿಸಿದ ನೂರಾರು ವಿಷಯಗಳ ಮೇಲೆ ಧರ್ಮ, ಜಾತಿ, ಕೋಮು ಎನ್ನುವ ಭ್ರಮೆಗಳ ಪರದೆ ಎಳೆದು ಅಧಿಕಾರದ ರಾಜಕಾರಣ ಮಾಡುತ್ತಿರುವ ಶಕ್ತಿಗಳ ಬಗ್ಗೆ ನಾಡು ಎಚ್ಚರವಾಗ ಬೇಕಿದೆ. ನಮ್ಮ ನುಡಿ ನಮ್ಮ ಅನ್ನದ ಪ್ರಶ್ನೆಯನ್ನು ಕುರಿತ ಚರ್ಚೆಯ ಕಡೆಗೆ ಇರಬೇಕಿದೆ – ಡಾ. ಉದಯಕುಮಾರ ಇರ್ವತ್ತೂರು.
ಕಳೆದ ಹತ್ತು ವರ್ಷಗಳಿಂದೀಚೆಗೆ ನಡೆದ ರಾಜಕೀಯ ಗೌಜಿ-ಗದ್ದಲಗಳು ಉಂಟು ಮಾಡಿದ ಭ್ರಮೆ ನಿಜವನ್ನು ಮರೆತು ನೆರಳಿನ ಹಿಂದೆ ನಡೆಯುವಂತಹ ಪರಿಸ್ಥಿತಿಯನ್ನು ಉಂಟು ಮಾಡಿತ್ತು. ಸುಳ್ಳಿನ ಅಬ್ಬರಕ್ಕೆ ಬೆಚ್ಚಿಬಿದ್ದ ಸತ್ಯದ ಜೊತೆ ನಿಲ್ಲುವ ಧೈರ್ಯವೇ ಇಲ್ಲದೆ ಸಾಮಾನ್ಯ ಜನ ಕಂಗಾಲಾಗಿ ಹೋಗಿದ್ದರು. ಕಳೆದ ಕೆಲವು ಸಮಯದಿಂದ ಸುಳ್ಳಿನ ಗಿಲೀಟು ಕರಗಿ ನಿಜದ ದರ್ಶನ ಅಗುತ್ತಾ ಇರುವುದು, “ಸತ್ಯವೇ ದೇವರು”, “ಸತ್ಯಮೇವ ಜಯತೇ” ಎನ್ನುವುದು ಬರೇ ಕಾಗುಣಿತವಲ್ಲ. ಇದು ನಿಜದ ನೆಲೆಗೆ ನಿಷ್ಠರಾಗಿ ಬದುಕುವ ಪ್ರತಿಯೊಬ್ಬರ ನಾಡಿ ಮಿಡಿತ ಎನ್ನುವುದು ಜನ ಸಾಮಾನ್ಯರಿಗೂ ಅರ್ಥವಾಗುತ್ತಿದೆ. ಆದರೆ ಪ್ರಜಾಪ್ರಭುತ್ವದ ಯಂತ್ರವನ್ನು ಸುಸ್ಥಿತಿಯಲ್ಲಿಡ ಬೇಕಿದ್ದರೆ ನಾಡಿನ ಪ್ರಜ್ಞಾವಂತರು, ಸಾಮಾಜಿಕ ಹೋರಾಟಗಾರರು, ಜನಪರ ಕಾಳಜಿಯ ಮನಸ್ಸುಗಳು ಮತ್ತೆ ಮತ್ತೆ ಆಳುವವರನ್ನು ಪ್ರಶ್ನಿಸುತ್ತಾ ಇರಬೇಕು. ಆರೋಗ್ಯವಾಗಿರಲು ಮಾನವ ದೇಹಕ್ಕೆ ವ್ಯಾಯಾಮ ಹೇಗೆ ಅಗತ್ಯವೋ ಅದೇ ರೀತಿಯಲ್ಲಿ ಸಾಮಾಜಿಕ ಉತ್ತರದಾಯಿತ್ವದ ವಿಷಯವನ್ನು ನಿರಂತರ ಜಾಗೃತ ಸ್ಥಿತಿಯಲ್ಲಿಯಲ್ಲಿಡಲು ಅಧಿಕಾರಸ್ತರಿಗೆ ಪ್ರಶ್ನೆ ಕೇಳುತ್ತಿರಬೇಕು. ಈ ಕೆಲಸವನ್ನು ಪ್ರಬಲ ವಿರೋಧ ಪಕ್ಷಗಳು, ನಾಗರಿಕ ಸಮಾಜ, ನಾಡಿನ ಪ್ರಜ್ಞಾವಂತರು, ಮಾಧ್ಯಮಗಳು ಮಾಡುವ ಮೂಲಕ ಚರ್ಚೆ ಸಂವಾದಗಳು ಆಗಬೇಕು.
ಅಧಿಕಾರದ ಕೇಂದ್ರಗಳು ಕರುಣಿಸುವ ಆಯಾಯ ಕಾಲದ ಕೊಡುಗೆಗಳಿಗೆ ಮನಸೋತು ಆಳುವವರ ಮರ್ಜಿಗೆ ಮಣೆ ಹಾಕಿ ಹೊಂದಿಕೊಂಡು ಹೋಗಿದ್ದ, ಹೋಗುತ್ತಿರುವ ಮತ್ತು ಹೋಗಬಹುದಾದ ಅನುಕೂಲ ಸಿಂಧು ಶಕ್ತಿಗಳು ಸಕ್ರಿಯವಾಗಿದ್ದ ಪರಿಸ್ಥಿತಿ ಮೊನ್ನೆ ಮೊನ್ನೆಯವರೆಗೂ ಇತ್ತು. ಅಂತಹ ಮನೋಭಾವದ ಶಕ್ತಿಗಳು ನಮ್ಮ ನಡುವೆ ಇಂದು ಕೂಡಾ ಸಕ್ರಿಯವಾಗಿವೆ ಮತ್ತು ಅದು ಹರಡುತ್ತಿರುವ ದ್ವೇಷ ಸೇವೆಯು ಫ್ಯಾಸಿಸ್ಟ್ ಶಕ್ತಿಯಾಗಿ ಪರಿವರ್ತನೆ ಹೊಂದುತ್ತಿರುವ ಅಪಾಯ ಖಾಯಂ ಆಗಿ ಎಂದೂ ದೂರವಾಗುವುದಿಲ್ಲ. ಪ್ರಜಾಪ್ರಭುತ್ವದ ಮೂಲ ಪಾಠವನ್ನು, ರಾಷ್ಟೀಯ ಚಳುವಳಿಯ ಕಾಲದಲ್ಲಿ ಚಳುವಳಿಯ ನಾಯಕರ ಅನುಭವಗಳನ್ನು ಮತ್ತೆ ಮತ್ತೆ ಮುನ್ನೆಲೆಗೆ ತರುವ ಮೂಲಕ ಮತ್ತು ದೇಶದ ಜನರ ಮುಂದಿರುವ ದಿನನಿತ್ಯದ ಸವಾಲುಗಳನ್ನು ಮುನ್ನೆಲೆಗೆ ತರುವ ಮೂಲಕ ನಾವು ಭ್ರಮೆಗೆ ಜಾರುವುದನ್ನು ತಪ್ಪಿಸಿಕೊಳ್ಳಬಹುದು. ಮೇಲಾಗಿ ಅದಕ್ಕೊಂದು ಪರಿಹಾರ ಹುಡುಕುವ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವ ಮೂಲಕ ವರ್ತಮಾನದ ನಾಯಕತ್ವ ಸತ್ವಯುತವಾಗಿ, ಪರಿಪಕ್ವವಾಗಿ ಬೆಳೆಯಬಹುದು. ಇತಿಹಾಸ ನಮಗೆ ನೀಡಬಹುದಾದ ನಿಜವಾದ ಪ್ರೇರಣೆ ಇದೇ ಆಗಿದೆ ಎನ್ನುವುದು ನನ್ನ ನಂಬಿಕೆ.
ನಮ್ಮ ನೆಲದ ನಿಜದ ಧ್ವನಿಗಳು ಮೌನವಾಗಬಾರದು, ನಾವು ನಡೆದ ಹಾದಿಯನ್ನು, ದುರಿತ ಕಾಲದಲ್ಲಿ ಹಿರಿಯರು ತೋರಿದ ದಾರಿಯನ್ನು ಮತ್ತೆ ಮತಿಗೆ ತಂದುಕೊಳ್ಳುವ ಮೂಲಕ ಹೊಸ ಹುರುಪಿನಿಂದ ಮುನ್ನಡೆಯ ಬೇಕಿದೆ. ನಮ್ಮ ಜಿಲ್ಲೆಯ ಪ್ರತಿಯೊಂದು ಊರಿನಲ್ಲಿ ನಾಡಿಗಾಗಿ ನಿಸ್ವಾರ್ಥದಿಂದ ದುಡಿದ ಜನರಿದ್ದಾರೆ, ಕುದ್ಮುಲ್ ರಂಗರಾಯರು, ಕಾರ್ನಾಡು ಸದಾಶಿವರಾಯರು, ಎನ್.ಎಸ್.ಕಿಲ್ಲೆ, ಉಲ್ಲಾಳ ಶ್ರೀನಿವಾಸ ಮಲ್ಯರು, ಉಮಾಬಾಯಿ ಕುಂದಾಪುರ, ಕಮಲಾದೇವಿ ಚಟ್ಟೋಪಾಧ್ಯಾಯ ಇಂತಹ ಅನೇಕ ಮಹನೀಯರಿದ್ದಾರೆ ಅವರನ್ನು ಮತ್ತೆ ಮತ್ತೆ ಈ ನಾಡಿನ ಯುವಕರಿಗೆ ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಈ ಜಾಗವನ್ನು ನಕಲಿ ಯೋಧರು ಆಕ್ರಮಿಸುವ ಸಾಧ್ಯತೆಗಳನ್ನು ಹೇಗೆ ಸೃಷ್ಟಿಸಲಾಗುತ್ತದೆ ಎನ್ನುವುದನ್ನು ಕಳೆದ ಕೆಲವು ವರ್ಷಗಳಲ್ಲಿ ನಾವು ನೋಡಿದ್ದೇವೆ.
ಗಾಂಧೀಜಿಯವರು 1920, 1927 ಮತ್ತು 1934 ಹೀಗೆ ಮೂರು ಬಾರಿ ಮಂಗಳೂರಿಗೆ ಭೇಟಿ ನೀಡಿದಾಗ ಅವರ ಉದ್ದೇಶ 1. ಹಿಂದೂ ಮುಸಲ್ಮಾನ ಏಕತೆ, 2. ಸ್ವರಾಜ್ಯ-ಸ್ವಾವಲಂಬನೆ-ಖಾದಿ ಮತ್ತು 3. ಅಸ್ಪ್ರಶ್ಯತೆಯನ್ನು ತೊಡೆದು ಹಾಕಿ ದಲಿತರನ್ನು ಘನತೆಯಿಂದ ಬದುಕುವಂತೆ ಮಾಡುವುದು. ಅವರ ಭೇಟಿಯ 104 ವರ್ಷಗಳ ನಂತರ ಈ ವಿಷಯಗಳಿಗೆ ಸಂಬಂಧಿಸಿದಂತೆ ಏನು ಪ್ರಗತಿಯಾಗಿದೆ? ಆಗದಿದ್ದರೆ ಯಾಕೆ ಆಗಿಲ್ಲ? ಈ ಸವಾಲನ್ನು ನಾವು ಹೇಗೆ ಸ್ವೀಕರಿಸಬಹುದು ಎನ್ನುವ ಕುರಿತು ಕೆಲವು ವಿಚಾರಗಳನ್ನು ಚರ್ಚಿಸುವುದು ಈ ಲೇಖನದ ಉದ್ದೇಶ.
ಅಂದು ಗಾಂಧೀಜಿಯವರು ನೀಡಿದ ಹಿಂದೂ, ಮುಸ್ಲಿಂ ಐಕ್ಯತೆಯ ಸಂದೇಶ ಶತಮಾನಗಳ ನಂತರ ಇಂದಿಗೂ ಪ್ರಸ್ತುತ ಅಥವಾ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. 1951 ರಿಂದ 1993 ರ ವರೆಗೂ ಬಲಪಂಥೀಯ ರಾಜಕೀಯ ನಿಲುವುಗಳನ್ನು ಜನ ಒಪ್ಪಿಕೊಳ್ಳಲೇ ಇಲ್ಲ. ಹೊಸ ತಲೆಮಾರಿನ ಯುವ ಸಮುದಾಯದ ಆಲೋಚನೆಗಳನ್ನು ಭಾವನಾತ್ಮಕವಾಗಿ ಬಡಿದೆಬ್ಬಿಸಿ, ಕೋಮು ವಿಷಯವನ್ನು ವಿಷವನ್ನಾಗಿ ಪರಿವರ್ತಿಸಿ ಮೂವತ್ತು ವರ್ಷಗಳ ಕಾಲ ರಾಜಕೀಯ ಅಧಿಕಾರವನ್ನು ಬಿಜೆಪಿ ಅನುಭವಿಸಿತು. ಈ ಅವಧಿಯುದ್ದಕ್ಕೂ ಜನಪರವಾದ, ಬಡವರ ಬದುಕು ಸುಧಾರಿಸುವ ಯಾವ ಮಹತ್ವದ ಕೆಲಸವನ್ನೂ ಮಾಡಲಿಲ್ಲ. ಇದು ಸಹಜವೂ ಆಗಿದೆ. ಯಾಕೆಂದರೆ ಬಲಪಂಥೀಯರಿಗೆ ಕೆಡಹುವುದು ಗೊತ್ತೇ ವಿನಹ ಕಟ್ಟುವುದು ಗೊತ್ತಿಲ್ಲ. ಸಮುದಾಯಗಳ ಮಧ್ಯೆ ಇರುವ ಅಸಹನೆ, ಅಜ್ಞಾನ, ಅಸುರಕ್ಷತೆಯನ್ನು ದಾಳವಾಗಿ ಬಳಸಿಕೊಂಡು ರಾಜಕೀಯ ಅಧಿಕಾರ ಹಿಡಿಯುವ ಒಂದು ಅಜೆಂಡಾ ಬಿಟ್ಟರೆ ಜನರ ಜೀವನ ಸುಧಾರಿಸುವ ಸಾಮಾಜಿಕ ಪಿಡುಗುಗಳನ್ನು ನಿವಾರಿಸುವ ಬೇರೆ ಯಾವುದೇ ಚಿಂತನೆಗಳು ಇಲ್ಲ.
ಸಾಂದರ್ಭಿಕವಾಗಿ ಒಂದು ಮಾತನ್ನು ಇಲ್ಲಿ ದಾಖಲಿಸಲೇಬೇಕು. ಸದಾ ವ್ಯಾಪಾರ ಸಂಬಂಧ ಸಂಚಾರಿಗಳಾಗಿದ್ದ ಮುಸ್ಲಿಂ ಸಮುದಾಯವು ಭಾರತೀಯ ಉಪಖಂಡದ ಜನರ ಜೀವನ ಮತ್ತು ಇಲ್ಲಿಯ ಉತ್ಪನ್ನಗಳನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಕೂಡಾ. 12ನೇ ಶತಮಾನದಲ್ಲಿ ಇರಾನ್‍ನಿಂದ ಓಡಿ ಬಂದು ಮಂಗಳೂರಿನಲ್ಲಿ ನೆಲೆ ನಿಂತ “ಬೆನ್ ಇಜು” ಎನ್ನುವ ವ್ಯಾಪಾರಿಯೊಬ್ಬನ ಪ್ರತಿನಿಧಿಯಾಗಿ ತುಳುನಾಡಿನ ಬೊಮ್ಮ (ಬೊಮ್ಮಯ) ಬಗ್ದಾದಿಗೆ, ಈಜಿಪ್ಟ್‌ಗೆ ಹೋಗಿ ವಹಿವಾಟು ಮಾಡಿಕೊಂಡು ಬಂದಿರುವ ಉಲ್ಲೇಖಗಳಿವೆ. (ನೋಡಿ ಅಮಿತಾವ ಘೋಷ್ ಅವರ ‘ ಇನ್ ಆನ್ ಆಂಟಿಕ್ ಲ್ಯಾಂಡ್ ‘ ಎನ್ನುವ ಐತಿಹಾಸಿಕ ಕಾದಂಬರಿ) ನಾವು ನೆನಪಿಡಬೇಕಾದ ಪ್ರಮುಖ ಅಂಶವೆಂದರೆ ವ್ಯಾಪಾರಿಗಳಾಗಿರುವ ಒಂದು ಸಮುದಾಯ ಯಾವಾಗಲೂ ಚಲನಶೀಲವಾಗಿರುತ್ತದೆ ಮತ್ತು ಎಲ್ಲರೊಂದಿಗೂ ಸೌಹಾರ್ದವಾಗಿರ ಬಯಸುತ್ತದೆ. ವ್ಯಾಪಾರ ಏನಿದ್ದರೂ “ನಗುಮುಖದವನಿಗೆ ಹೊರತು ಬಿಗುಮುಖದವನಿಗಲ್ಲ”. ಭಾರತದಲ್ಲಿರುವ ಸಂಪತ್ತಿನಿಂದ ಆಕರ್ಷಿತರಾಗಿ ಬಂದ ವ್ಯಾಪಾರ, ರಾಜಕೀಯ ಅಧಿಕಾರ ಮುಂತಾದ ಕಾರಣಗಳಿಗಾಗಿ ಬಂದವರು ಬಹಳಷ್ಟು ಅನಾಹುತಗಳನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಅನಾಹುತಗಳನ್ನು ನಮ್ಮಲ್ಲಿಯೂ ನಮ್ಮವರೇ ನಿರಂತರ ಮಾಡುತ್ತ ಬಂದಿದ್ದರು ಮತ್ತು ಇಂದಿಗೂ ಈ ವೈರಸ್ ಜೀವಂತವಿದೆ. ಇಂತಹ ಪ್ರವ್ರೃತ್ತಿಗೆ ನ್ಯಾಯ ಅನ್ಯಾಯದ ಬದಲು ಮಾನವೀಯತೆ, ಅಮಾನವೀಯತೆಯ ಬದಲು ಜಾತಿ, ಧರ್ಮದ ಲೇಬಲ್ ಅಂಟಿಸುವುದು ಎಷ್ಟು ಸರಿ?
ಹದಿನೈದನೆಯ ಶತಮಾನದ ನಂತರ ಭಾರತಕ್ಕೆ ಬಂದ ಯುರೋಪ್ ಮೂಲದ ವಸಾಹತು ಶಕ್ತಿಗಳ ಉದ್ದೇಶವಿದ್ದದ್ದೂ ವ್ಯಾಪಾರ ಮತ್ತು ಇಲ್ಲಿಯ ಸಂಪತ್ತಿನ ಬಗೆಗಿನ ತೀವ್ರವಾದ ವ್ಯಾಮೋಹ. ಅವರ ಮೊದಲ ಶತ್ರುಗಳು ಈಗಾಗಲೇ ವ್ಯಾಪಾರ ವಹಿವಾಟಿನಲ್ಲಿ ಗಟ್ಟಿಯಾಗಿ ಬೇರೂರಿದ್ದ ಅರಬ್ ಮತ್ತು ಮುಸ್ಲಿಂ ವರ್ತಕರು. ಇದನ್ನು ಹೊರತು ಪಡಿಸಿ ತಮ್ಮ ನೆಲೆ ವಿಸ್ತರಿಸಿಕೊಳ್ಳುವ ಹೊತ್ತಲ್ಲಿ ಭಾರತದ ಜನರ ವಿರೋಧ ಪ್ರತಿರೋಧಗಳನ್ನು ಹತ್ತಿಕ್ಕಲು ಅವರು ಬಳಸಿದ ಹಲವು ಆಯುಧಗಳಲ್ಲಿ ಬಹಳ ಪರಿಣಾಮಕಾರಿ ಆಯುಧವೆಂದರೆ ‘ಹಿಂದೂ ಮುಸ್ಲಿಂ’ ದ್ವೇಷ ಮತ್ತು ವಿಭಾಜಕ ಮನೋಭಾವ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡ ಕಾರಣದಿಂದಲೇ ಗಾಂಧೀಜಿಯವರು ಕೋಮು ಸಾಮರಸ್ಯದ ಬಗ್ಗೆ ಇನ್ನಿಲ್ಲದ ಮಹತ್ವ ನೀಡಿದ್ದಾರೆ. ಆದ್ದರಿಂದಲೇ ದೇಶ ಮುನ್ನಡೆಯ ಬೇಕಾದರೆ, ಜನರ ಜೀವನ ಸುಧಾರಿಸಬೇಕಿದ್ದರೆ ಹಿಂದುಗಳು ಮತ್ತು ಮುಸ್ಲಿಂಮರು ಪರಸ್ಪರ ಪ್ರೀತಿ ಗೌರವದಿಂದ ಬದುಕಬೇಕಿದೆ ಎಂದು ಒತ್ತು ನೀಡಿರಬಹುದು. ಶತಮಾನಗಳ ನಂತರವೂ ಈ ವಿಷಯ ಪ್ರಸ್ತುತವಾಗಿದೆ. ಇದರ ಬಗ್ಗೆ ಇನ್ನಷ್ಟು ಅಧ್ಯಯನ, ವಿಮರ್ಶೆ ನಡೆಯಬೇಕಿದೆ. ಈಗಲೂ ಬಲಪಂಥೀಯ ನಾಯಕರು ಮುಸ್ಲಿಂ ವರ್ತಕರೊಟ್ಟಿಗೆ ಯಾವ ಜಗಳವನ್ನೂ ಮಾಡುವುದಿಲ್ಲ, ಅವರೊಂದಿಗೆ ಬಹಳ ಪ್ರೀತಿಯಿಂದಲೇ ಇದ್ದಾರೆ. ಅಂತೆಯೇ ಮುಸ್ಲಿಂ ರಾಜಕೀಯ ಮುಖಂಡರು ಹಿಂದುಗಳೊಂದಿಗೆ ವ್ಯಾಪಾರ ವಹಿವಾಟು ಪರಸ್ಪರ ಕೊಡುಕೊಳ್ಳುವಿಕೆಯ ಸಂಬಂಧವನ್ನು ಹೊಂದಿಕೊಂಡೇ ಮುಂದುವರಿಯುತ್ತಿದ್ದಾರೆ. ಪವಿತ್ರವಾಗಿರುವ ಗೋಮಾತೆ “ರಾಜಕೀಯ ವಿಷಯವಾಗಿರುವುದು ಒಂದು ಕಡೆ ಆದರೆ ಗೋಮಾಂಸ ರಫ್ತು ವಹಿವಾಟಿನಲ್ಲಿ ಲಾಭ ಮಾಡಿಕೊಳ್ಳುತ್ತಿರುವವರ ಪಟ್ಟಿ ನೋಡಿದರೆ ಬೇರೆಯೇ ಸಂಗತಿ ತಿಳಿದು ಬರುತ್ತದೆ. ವರ್ತಮಾನದ ಎಲ್ಲ ಘಟನೆಗಳನ್ನು ವಿಶ್ಲೇಷಿಸಿದರೆ ಬಹಳ ಸ್ಪಷ್ಟವಾಗುವ ಅಂಶವೆಂದರೆ ಬಲಪಂಥೀಯ ಸಂಘಟನೆಗಳು ಕೇವಲ ಅಧಿಕಾರ ಹಿಡಿಯಲು ರಚಿಸಿದ ವಿನ್ಯಾಸವೇ ಕೋಮು ದ್ವೇಷ, ಲವ್ ಜಿಹಾದ್, ಹಲಾಲ್-ಜಟಕಾ, ಹೊರತು ಇನ್ನೇನೂ ಅಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದದ ಪರಂಪರೆಯೇ ಇದೆ. ರಾಣಿ ಅಬ್ಬಕ್ಕ ದೇವಿಯ ಸ್ವಾಭಿಮಾನದ ಹೋರಾಟದ ಸಮಯದಲ್ಲಿ ಜಾತಿ ಎಂದಿಗೂ ಅಡ್ಡ ಬರಲಿಲ್ಲ. ಮೂಲ್ಕಿಯ ಬಪ್ಪ ಬ್ಯಾರಿಯ ಸೇವೆಯನ್ನು ದೇವರು ಎಂದಿಗೂ ನಿರಾಕರಿಸಿಲ್ಲ. ಶೃಂಗೇರಿ ಮಠದ ಮೇಲೆ ಮರಾಠರ ಶಿವಾಜಿ ದಾಳಿ ಮಾಡಿದಾಗ ಹಿಂದೂ ಪೀಠದ ರಕ್ಷಣೆಗೆ ಟಿಪ್ಪು ಮುಂದಾದಾಗ, ಧರ್ಮದ ಜಾತಿಯ ಪ್ರಶ್ನೆ ಎದುರಾಗಲೇ ಇಲ್ಲ. ಎಲ್ಲ ಜಾತ್ರೆ, ಉತ್ಸವಗಳಲ್ಲಿ ಗರ್ನಾಲ್, ಕದೋನಿ, ಸಿಡುಮದ್ದು ಸೇವೆಯನ್ನು ಬ್ಯಾರಿಗಳು ಒದಗಿಸಿದಾಗ ಯಾವ ಅಸಮಾಧಾನವೂ ಸಿಡಿಯಲಿಲ್ಲ. ಬಹಳಷ್ಟು ಕಡೆ ನದಿ ದಾಟಿಸುವ, ದೋಣಿ ನಡೆಸುವವರು ಬ್ಯಾರಿಗಳಾದದ್ದು ಅಸಹನೆಯ ಸಂಗತಿಯಾಗಿರಲಿಲ್ಲ. ಮನುಷ್ಯ ಸಹಜ, ಆಸೆ, ದುರಾಸೆ, ಲಂಪಟತನ, ಸಹನೆ, ಸಹಾಯ, ಸಹಕಾರ ಎಲ್ಲವೂ ದಿನನಿತ್ಯದ ಬದುಕಿನಲ್ಲಿ ಇದ್ದೇ ಇತ್ತು. ಅದಕ್ಕೆ ದೌರ್ಬಲ್ಯದ ಹಂಗು ಇತ್ತೇ ಹೊರತು, ಧರ್ಮದ ಲೇಪನವಿರಲಿಲ್ಲ. ಅಬ್ದುಲ್ ರಹಮಾನ್ ಮತ್ತು ಕೊರಗಪ್ಪನವರ ನಡುವಿನ ಬಾಂಧವ್ಯದ ಕತೆ ದಿನ ನಿತ್ಯದ ಬದುಕಿನ ಸವಾಲುಗಳಿಗೆ ಬೆನ್ನು ಹಾಕಿ ಕೋಮು ಬೆಂಕಿಗೆ ಬಲಿಯಾಗುತ್ತಿರುವ ನಮ್ಮ ಜನಸಾಮಾನ್ಯರಿಗೆ ಪಾಠವಾಗಬೇಕಿದೆ.
ಒಂದು ಶತಮಾನ ಕಳೆದರೂ ಅಂದು ಗಾಂಧೀಜಿಯವರು ನಮ್ಮ ಸಮಾಜಕ್ಕೆ ನಿಗದಿಪಡಿಸಿದ ಗುರಿಯತ್ತ ನಾವಿನ್ನೂ ಸಾಗಲು ಬಹಳಷ್ಟು ಬಾಕಿ ಇದೆ ಅನಿಸುತ್ತದೆ. ದಲಿತರ ಉದ್ಧಾರದ ಕುರಿತಂತೆ ಅಂಬೇಡ್ಕರ ಅವರು ಆಶಿಸಿದ ಸಂವಿಧಾನದ ಆಶಯದ ಕಾರಣದಿಂದ ಬದಲಾವಣೆಗಳ ಆರಂಭ ಆಗಿದೆಯಾದರೂ, ದಲಿತೇತರರಿಗೆ ಈ ಬದಲಾವಣೆ ಚಾರಿತ್ರಿಕ ನ್ಯಾಯ ಒದಗಿಸುವ ದಿಸೆಯಲ್ಲಿ ಅಪೇಕ್ಷಣೀಯ ಎಂದು ಮನವರಿಕೆ ಆಗಿದೆಯೇ? ಎನ್ನುವ ಪ್ರಶ್ನೆ ನಮ್ಮೆದುರಿಗೆ ಇದೆ. ಅದರೊಂದಿಗೇನೇ ಕೇವಲ ಸಂವಿಧಾನದ ಆಶಯ ಒಂದೇ ಆಸರೆಯಾಗಲಾರದು ಮತ್ತು ಆಗಬಾರದು, ಎನ್ನುವ ತಿಳುವಳಿಕೆಯೂ ಸಮಾಜದಲ್ಲಿ ಮೂಡಬೇಕಿದೆ ಎನ್ನುವುದು ನನ್ನ ಅಭಿಪ್ರಾಯ. ನಾವು ಸ್ವಾತಂತ್ರ್ಯವೇನೋ ಪಡೆದೆವು, ಆದರೆ ಸ್ವರಾಜ್ಯದ ಕನಸು, ಕಲ್ಪನೆಗಳ ಸ್ಥಿತಿಗತಿ ಏನಾಗಿದೆ? ಸ್ಥಳೀಯವಾಗಿ ಮಾನವ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಸದ್ಭಳಕೆ ಸಾಧ್ಯವಾಗುತ್ತಿದೆಯೇ? ಇದ್ದರೆ ಹೇಗಾಗುತ್ತಿದೆ? ಇಲ್ಲದಿದ್ದರೆ ಯಾವ ಕಾರಣದಿಂದ ಆಗುತ್ತಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನು ಮತ್ತೆ ಮುನ್ನೆಲೆಗೆ ತಂದು ಚರ್ಚಿಸುವ ಅಗತ್ಯ ತುಂಬಾ ಇದೆ ಎನ್ನುವುದು ನನ್ನ ಭಾವನೆ.
ನಮ್ಮ ದಿನನಿತ್ಯದ ಬದುಕಿಗೆ ಸಂಬಂಧಿಸಿದ ನೂರಾರು ವಿಷಯಗಳ ಮೇಲೆ ಧರ್ಮ, ಜಾತಿ, ಕೋಮು ಎನ್ನುವ ಭ್ರಮೆಗಳ ಪರದೆ ಎಳೆದು ಅಧಿಕಾರದ ರಾಜಕಾರಣ ಮಾಡುತ್ತಿರುವ ಶಕ್ತಿಗಳ ಬಗ್ಗೆ ನಾಡು ಎಚ್ಚರವಾಗಬೇಕಿದೆ. ನಮ್ಮ ನುಡಿ ನಮ್ಮ ಅನ್ನದ ಪ್ರಶ್ನೆಯನ್ನು ಕುರಿತ ಚರ್ಚೆಯ ಕಡೆಗೆ ಇರಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಂದೇಶಗಳನ್ನು ನೆನಪಿಸುವುದು ಮತ್ತು ಭ್ರಮೆಯನ್ನು ಬಿಟ್ಟು ಬದುಕಿಗೆ ಮುಖಾಮುಖಿಯಾಗುವುದೇ ನಮ್ಮೆದುರು ಇರುವ ಬಹುದೊಡ್ಡ ಸವಾಲು. ಹೊಟ್ಟೆಗಾಗಿ ದುಡಿಯುವ ರಟ್ಟೆಗಳಿಗೆ ಸದಾ ಮಿಡಿಯುವ ಮನಸ್ಸುಗಳು ಈ ಪ್ರಜ್ಞೆಯನ್ನು ಮೂಡಿಸಿದರೆ, ದಾರಿ ದೂರವಿರಬಹುದು ಆದರೆ ಗುರಿ ಮುಟ್ಟುವುದು ಅಸಾಧ್ಯವೇನಲ್ಲ. ಎಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗಳು ಪ್ರಜೆಗಳಿಂದ ತಮ್ಮ ಭೌತಿಕ ಅಗತ್ಯಗಳ ಕುರಿತು ಶ್ರಮ ಮತ್ತು ನೈತಿಕ ಜವಾಬ್ದಾರಿಗಳ ಕುರಿತು ಪ್ರಜ್ಞೆ ಹೊಂದಿರುವುದನ್ನು ಅಪೇಕ್ಷಿಸುತ್ತವೆ.
ಡಾ.ಉದಯ ಕುಮಾರ ಇರ್ವತ್ತೂರು,
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ- ನಾಡಿನ ಮಹಿಳೆಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೃದಯಸ್ಪರ್ಶಿ ಪತ್ರ