ಯಾದಗಿರಿ : ಜಿಲ್ಲೆಯ ಭೀಮಾ ನದಿ ಪಾತ್ರದ ಗ್ರಾಮೀಣ ಮತ್ತು ನಗರ ಪ್ರದೇಶದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ತಕ್ಷಣ ಮಹಾರಾಷ್ಟ್ರದ ಉಜಿನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಲು ಮಹಾರಾಷ್ಟ್ರ ಸರಕಾರಕ್ಕೆ ರಾಜ್ಯ ಸರಕಾರ ಒತ್ತಡ ಹೇರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮಾನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಭೀಮಾನಾಯಕ ಅವರು, ಬೇಸಿಗೆ ಆರಂಭದಿಂದಲೂ ಈ ಭಾಗದಲ್ಲಿ ಪ್ರಖರ ಬಿಸಿಲಿನಿಂದಾಗಿ ನದಿ, ಹಳ್ಳ, ಕೊಳ್ಳ, ಕೆರೆಗಳು ಒಣಗಿ ಹೋಗಿವೆ. ಇದರಿಂದ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ತತ್ತರಿಸುತ್ತಿವೆ. ಇಂತಹ ನೀರಿನ ಹಾಹಾಕಾರದ ನಡುವೆಯೂ ರಾಜಕಾರಣಿಗಳು ಜನಹಿತ ಮರೆತು ಚುನಾವಣೆಯ ಪ್ರಚಾರದಲ್ಲಿ ಮುಳುಗಿ ಹೋಗಿದ್ದಾರೆ.
ಬಚಾವತ್ ತೀರ್ಪಿನಂತೆ ಭೀಮಾನದಿಗೆ ರಾಜ್ಯದ ಪಾಲಿನ 15 ಟಿಎಂಸಿನೀರನ್ನು ಮಹಾರಾಷ್ಟ್ರ ಕೊಡಬೇಕು. ಅದನ್ನು ಹರಿಸಲು ಮಹಾರಾಷ್ಟ್ರ ರಾಜ್ಯ ಸರಕಾರಕ್ಕೆ ರಾಜ್ಯದ ನೀರಾವರಿ ಮಂತ್ರಿಗಳು, ಹಾಗೂ ಮುಖ್ಯಮಂತ್ರಿಗಳು ಒತ್ತಡ ಹೇರಬೇಕು. ತೀವ್ರ ಬರದ ಇದುವರೆಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚಣೆಯಾಗಿಲ್ಲ. ಜಿಲ್ಲಾ ಮಂತ್ರಿ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಸೇರಿ ಸಭೆ ನಡೆಸಿ ಪರಿಣಿತರ ಅಭಿಪ್ರಾಯ ಸಂಗ್ರಹಿಸಿ ಸರಕಾರಕ್ಕೆ ವರದಿ ಸಲ್ಲಿಸಿಲ್ಲ. ಹೀಗೆ ಮುಂದುವರಿದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತರದೆ ಹೋದರೆ ಕರವೇ ತೀವ್ರ ಸ್ವರೂಪದ ಹೋರಾಟ ರೂಪಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಈ ಆಗ್ರಹಕ್ಕೆ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ಅಂಬ್ರೇಷ್ ಹತ್ತಿಮನಿ, ವಿಶ್ವರಾಜ ಹೊನಿಗೇರಿ, ಅರ್ಜುನ ಪವಾರ್, ಶರಣಬಸಪ್ಪ ಯಲ್ಹೇರಿ, ಸುರೇಶ ಬೆಳಗುಂದಿ, ಕಾಶಿನಾಥ ಇನ್ನೂ ಅನೇಕರು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.
ಉಜಿನಿಯಿಂದ ನೀರು ಹರಿಸುವಂತೆ ಸಿಎಂ ಪತ್ರ
ಜಿಲ್ಲೆಯಾದ್ಯಂತ ನೀರಿನ ಅಭಾವ ತೀವ್ರಗೊಳ್ಳುತ್ತಿದ್ದಂತೆ ಇದೇ ತಿಂಗಳ 7ನೇ ತಾರೀಖಿನಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಪತ್ರ ಬರೆದಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ನೀರಿನ ತೀವ್ರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಮತ್ತು ಉಜಿನಿ ಜಲಾಶಯದಿಂದ ಭೀಮಾನದಿಗೆ ನೀರು ಹರಿಸುವಂತೆ ಮುಖ್ಯಮಂತ್ರಿಗಳು ಮನವಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಕಲಬುರಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.