ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿತರಿಸುವ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ವಿವಾದಾತ್ಮಕ ಹೇಳಿಕೆಯಿಂದ ಕೆಎಂಎಫ್ ನಂದಿನಿ ತುಪ್ಪಕ್ಕೆ ಇನ್ನಿಲ್ಲದ ಬೇಡಿಕೆ ಹುಟ್ಟಿಕೊಂಡಿತು. ಸ್ವತಃ ತಿರುಪತಿ ತಿಮ್ಮಪ್ಪನ ದೇವಸ್ಥಾನವೇ ತುಪ್ಪದ ಬೇಡಿಕೆಯನ್ನು ದುಪ್ಪಟ್ಟು ಮಾಡಿದೆ.
ಇದರಿಂದ ಬೆಚ್ಚಿಬಿದ್ದ ಹಲವಾರು ಖಾಸಗಿ ಡೈರಿಗಳು
ಪುಟಗಟ್ಟಲೆ ಜಾಹೀರಾತು ನೀಡಬೇಕಾಯಿತು. ಚಾನೆಲ್ ಗಳಲ್ಲಿ ನಿರಂತರವಾಗಿ ನಮ್ಮದೂ ಶುದ್ಧ ತುಪ್ಪ ಎಂದು ಅಲ್ಲಿಯೂ ಜಾಹೀರಾತು ನೀಡಬೇಕಾಯಿತು.
ಹಲವು ವರ್ಷಗಳಿಂದ ಟಿಟಿಡಿ ರಾಜ್ಯದ ಕೆಎಂಎಫ್ ನಿಂದಲೇ ತುಪ್ಪ ತರಿಸಿಕೊಳ್ಳುವುದು ವಾಡಿಕೆಯಾಗಿತ್ತು. ಆದರೆ ಈ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು ಎರಡು ಮೂರು ವರ್ಷಗಳಿಂದ ಕೆಲವು ಖಾಸಗಿ ಕಂಪನಿಗಳಿಗೆ ಟೆಂಡರ್ ನೀಡಲಾಗಿತ್ತು.
ಚಂದ್ರಬಾಬು ನಾಯ್ಡು ಅವರ ಹೇಳಿಕೆಯಿಂದ ತಿಮ್ಮಪ್ಪನ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದು ಸುಳ್ಳಲ್ಲ. ಇದರಿಂದ ಎಚ್ಚೆತ್ತುಕೊಂಡ ಟಿಟಿಡಿ ಮತ್ತೆ ಕೆಎಂ ಎಫ್ ನಿಂದ ತುಪ್ಪ ತರಿಸಿಕೊಳ್ಳಲು ತೀರ್ಮಾನಿಸಿದೆ. ಈ ಬೇಡಿಕೆಯ ಅಂಗವಾಗಿ ಸೆಪ್ಟಂಬರ್ 20ರಂದು ಮುಂದಿನ ಮೂರು ತಿಂಗಳಿಗೆ 350 ಟನ್ ತುಪ್ಪವನ್ನು ಪೂರೈಕೆ ಮಾಡಲು ಟೆಂಡರ್ ನೀಡಿದೆ. ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲೇ ತಿರುಪತಿ ದೇವಸ್ಥಾನವು 250 ಟನ್ ತುಪ್ಪವನ್ನು ಬಳಸಿಕೊಂಡಿದೆ. ಹೆಚ್ಚುವರಿಯಾಗಿ 250 ಟನ್ ತುಪ್ಪವನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದೆ. ಒಂದೇ ತಿಂಗಳಲ್ಲಿ 550 ಟನ್ ತುಪ್ಪಕ್ಕೆ ಬೇಡಿಕೆ ಇಟ್ಟಿದೆ.
ಇದು ಕರ್ನಾಟಕದ ನಂದಿನಿ ತುಪ್ಪದ ಪರಿಶುದ್ಧತೆಗೆ ದ್ಯೋತಕವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಟಿಟಿಡಿ ತುಪ್ಪಕ್ಕೆ ಇಟ್ಟಿರುವ ಬೇಡಿಕೆಯನ್ನು ಕೆಎಂಎಫ್ ಖಚಿತಪಡಿಸಿದೆ. ಈ ಹಿಂದೆ ಸರಬರಾಜು ಮಾಡಿದ ದರದಲ್ಲೇ ಹೆಚ್ಚುವರಿ ಬೇಡಿಕೆಯ ತುಪ್ಪವನ್ನು ಪೂರೈಕೆ ಮಾಡುವಂತೆ ಕಳೆದ ಗುರುವಾರ ಕೇಳಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ. ಕೆ. ಜಗದೀಶ್ ಹೇಳಿದ್ದಾರೆ.
ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಗತ್ಯ ಬಿದ್ದರೆ ಮತ್ತಷ್ಟು ನಂದಿನಿ ತುಪ್ಪವನ್ನೇ ಬಳಸುತ್ತೇವೆ. ಹೆಚ್ಚುವರಿ ತುಪ್ಪವನ್ನು ಪೂರೈಕೆ ಮಾಡಲು ಟೆಂಡರ್ ಆಹ್ವಾನಿಸುತ್ತೇವೆ ಎಂದು ಟಿಟಿಡಿ ಅಧಿಕಾರಿ ಜೆ. ಶ್ಯಾಮಲ ರಾವ್ ತಿಳಿಸಿದ್ದಾರೆ.
ನಂದಿನಿ ತುಪ್ಪವನ್ನು ಕೇವಲ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಮಾತ್ರ ಬಳಸಲಾಗುತ್ತಿದೆ ಎಂದು ತಿಳಿಯಬೇಕಿಲ್ಲ. ರಾಜ್ಯದ ಅನೇಕ ಪ್ರಮುಖ ದೇವಾಲಯಗಳು ನಂದಿನಿ ತುಪ್ಪವನ್ನು ಬಳಸುತ್ತಿವೆ. ರಾಜ್ಯ ಸರ್ಕಾರ ಪ್ರಸಾದ ಮತ್ತು ಭೋಜನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸಬೇಕು ಎಂದು ಸುತ್ತೋಲೆ ಹೊರಡಿಸಿದ ನಂತರ ರಾಜ್ಯದ ವಿವಿಧ ದೇವಸ್ಥಾನ ಮಂಡಳಿಗಳು ಕೆಎಂಎಫ್ ಗೆ ತುಪ್ಪಕ್ಕೆ ಬೇಡಿಕೆ ಇಟ್ಟಿವೆ. ಧರ್ಮಸ್ಥಳ ಕ್ಷೇತ್ರ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳು ನಂದಿನಿ ತುಪ್ಪವನ್ನು ತರಿಸಿಕೊಳ್ಳುತ್ತಿವೆ.
ಇದರ ಜೊತೆಗೆ ಸಗಟು ಮತ್ತು ಇತರ ಉದ್ದೇಶಗಳಿಗೆ 2,500 ಟನ್ ತುಪ್ಪವನ್ನು ಬಿಡುಗಡೆ ಮಾಡಲಾಗಿದೆ. ಸಧ್ಯ ಕೆಎಂಎಫ್ ನಲ್ಲಿ 7,500 ಟನ್ ತುಪ್ಪ ಸಿದ್ದವಿದ್ದು ಎಷ್ಟೇ ಬೇಡಿಕೆ ಬಂದರೂ ಪೂರೈಕೆ ಮಾಡಲು ಕೆಎಂಎಫ್ ಸಿದ್ಧವಾಗಿದೆ.
ತುಪ್ಪಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಎಂಎಫ್ 6000 ಟನ್ ಬೆಣ್ಣೆಯನ್ನು ಉತ್ಪಾದಿಸಲು ಕ್ರಮ ಕೈಗೊಂಡಿದೆ. ಯಾವುದೇ ಕಾರಣಕ್ಕೂ ತುಪ್ಪಕ್ಕೆ ಕೊರತೆ ಉಂಟಾಗಿಲ್ಲ. ತುಪ್ಪವನ್ನು ಸುರಕ್ಷಿತವಾಗಿ ಸರಬರಾಜು ಮಾಡಲು ತುಪ್ಪದ ಟ್ಯಾಂಕರ್ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ.
ಕೆಎಂಎಫ್ ಪ್ರಸ್ತುತ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರತಿ ಕೆಜಿಗೆ 450 ರೂಪಾಯಿಯಂತೆ ಪೂರೈಕೆ ಮಾಡುತ್ತಿದೆ. ತುಪ್ಪವನ್ನು ತಯಾರಿಸಲು
ಗರಿಷ್ಠ ಪ್ರಮಾಣದ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟಗಳಿಂದ ಮಾತ್ರ ತರಿಸಿಕೊಳ್ಳಲಾಗುತ್ತಿದೆ.
ಅತ್ತ್ಯುತ್ತಮ ಗುಣಮಟ್ಟ, ಶುದ್ಧತೆ ಮತ್ತು ಉತ್ತಮ ಸ್ವಾದಕ್ಕೆ ನಂದಿನಿ ತುಪ್ಪ ಹೆಸರುವಾಸಿಯಾಗಿದೆ.
ಲಡ್ಡು ತಯಾರಿಸುವುದು ಹೇಗೆ ಗೊತ್ತಾ ?
ತಿರುಪತಿ ಲಡ್ಡು ತಯಾರಿಕೆಗೆ ಕಡಲೆ ಹಿಟ್ಟು, ಒಣ ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಸಕ್ಕರೆ ಬಳಸಲಾಗುತ್ತಿದೆ. ಇದಕ್ಕಾಗಿ ತಿರುಪತಿ ಲಡ್ಡು 2009 ರಲ್ಲಿ ಜಿ ಐ ಟ್ಯಾಗ್ ಪಡೆದುಕೊಂಡಿದೆ.
ತಿರುಪತಿಯಲ್ಲಿ ಪ್ರತಿದಿನ ಸರಾಸರಿ 2-3 ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತದೆ. 300ಕ್ಕೂ ಹೆಚ್ಚು ಬಾಣಸಿಗರು ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಪ್ರಮಾಣದ ಲಡ್ಡು ತಯಾರಿಸಲು 10 ಟನ್ ಕಡಲೆ ಹಿಟ್ಟು, 500 ಕೆಜಿ ಒಣ ದ್ರಾಕ್ಷಿ, ಗೋಡಂಬಿ, 150 ಕೆಜಿ ಏಲಕ್ಕಿ, 10 ಟನ್ ಸಕ್ಕರೆ, 300-500 ಲೀಟರ್ ತುಪ್ಪ ಬಳಸಲಾಗುತ್ತಿದೆ.