ಬೆಂಗಳೂರು: ರೇಷ್ಮೆ ಸೀರೆಗಳಿಗೂ ಮಹಿಳೆಯರಿಗೂ ಅವಿನಾಭಾವ ಸಂಬಂಧ. ಅದರಲ್ಲೂ ರೇಷ್ಮೆ ಸೀರೆ ಎಂದರೆ ಮಹಿಳೆಯರಿಗೆ ಮೈಸೂರು ಸಿಲ್ಕ್ ಸೀರೆಯೇ ಆಗಬೇಕು. ಉತ್ತಮ ಗುಣಮಟ್ಟದ ಉತ್ತಮ ಜರಿ ಹೊಂದಿರುವ ಶುದ್ದ ರೇಷ್ಮೆ ಸೀರೆ ಎಂದರೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್ ಐಸಿ) ಸೀರೆಗಳೇ ಸರ್ವಶೇಷ್ಠ ಎಂದು ಭಾವಿಸಲಾಗಿದೆ.
ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಕೆಎಸ್ ಐಸಿ ಮಳಿಗೆಯ ಮುಂದೆ ಬೆಳಗ್ಗೆಯೇ ಸೀರೆಗಳ ಖರೀದಿಗಾಗಿ ಮಹಿಳೆಯರು ಸರತಿ ಸಾಲಿನಲ್ಲಿ ಕುಳಿತಿದ್ದಾರೆ. ಮಳಿಗೆಯ ಒಳಗೆ ಸ್ಥಳಾವಕಾಶ ಇಲ್ಲದ ಕಾರಣ ಮಹಿಳೆಯರು ಅಂಗಡಿಯ ಮುಂದೆ ಗುಂಪಿನಿಲ್ಲಿ ನಿಂತಿದ್ದಾರೆ. ಇಂದು ನಾಲ್ಕನೇ ಶನಿವಾರವಾಗಿದ್ದು ಸರ್ಕಾರಿ ನೌಕರರಿಗೆ ರಜೆ. ಐಟಿ ಬಿಟಿ ಕಂಪನಿಗಳಿಗೂ ರಜೆ ಇದ್ದು ಗ್ರಾಹಕರ ಸಂಖ್ಯೆ ಹೆಚ್ಚು ಎಂದು ಹೇಳಲಾಗುತ್ತಿದೆ. ಕೇವಲ ಬೆಂಗಳೂರು ಮಾತ್ರವಲ್ಲ, ಇಡೀ ರಾಜ್ಯಾದ್ಯಂತ ಇರುವ ಎಲ್ಲ ಕೆಎಸ್ ಐಸಿ ಮಳಿಗೆಗಳಲ್ಲಿ ಬಿರುಸಿನ ವ್ಯಾಪಾರ ನಡೆಯುತ್ತಿದೆ. ಬೇಡಿಕೆ ಇರುವಷ್ಟು ರೇಷ್ಮೆ ಸೀರೆಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದೂ ಹೇಳಲಾಗುತ್ತಿದೆ.