ಶಿವಮೊಗ್ಗ, ಮೇ 16 : ಜಿಲ್ಲೆಯಲ್ಲಿ ಮೂರು ದಿನಗಳ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಏರ್ಪಡಿಸಿರುವುದರಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಒಳಗೊಂಡ ಶಾಲಾ ಕಾಲೇಜುಗಳಿಗೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಿ, ಕ್ರೀಡಾಕೂಟಕ್ಕೆ ಆಗಮಿಸುವ ಸರ್ಕಾರಿ ನೌಕರರಿಗೆ ವಸತಿ ಕಲ್ಪಿಸಲು ಹಾಸ್ಟೆಲ್ ಬಳಕೆ ಮಾಡಲು ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ಆದೇಶ ಹೊರಡಿಸಿದ್ದನ್ನು ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರು ಹಾಗೂ ವಿದ್ಯಾರ್ಥಿಗಳ ತಂಡ ಇಂದು ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ನಿಲಯ ಬದಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಮನವಿ ಪತ್ರ ನೀಡಿ ಆಗ್ರಹಿಸಿದರು.
ಕ್ರೀಡಾಕೂಟವು ಇದೇ ತಿಂಗಳ ಮೇ 18ರಿಂದ 20ರವರೆಗೆ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ಆಗಮಿಸುವ ಸರ್ಕಾರಿ ನೌಕರರಿಗೆ ವಸತಿ ಕಲ್ಪಿಸಲು ಶಾಲಾ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಕಾಯ್ದಿರಿಸುವ ತಮ್ಮ ಆದೇಶದಿಂದ ದೂರದ ಊರುಗಳಿಂದ ಬಂದು ಶಿವಮೊಗ್ಗ ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ನಿಲಯದಿಂದ ಹೊರಗೆ ಹಾಕಿದರೆ ಈ 3 ದಿನಗಳ ಕಾಲ ಓದುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗಲಿದೆ. 3 ದಿನ ಊರಿಗೆ ಹೋಗಿ ಬರುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಅನುಭವಿಸುವಂತಾಗಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ವಿದ್ಯಾರ್ಥಿ ಮುಖಂಡರು ಮನವಿ ಸಲ್ಲಿಸಿ ಮನವರಿಕೆ ಮಾಡಿಕೊಟ್ಟರು.
ಇದನ್ನೂ ಓದಿ : https://kannadaplanet.com/wp-admin/post.php?post=36210&action=edit
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು “ಬೇರೆ ಊರುಗಳಿಂದ ಬಂದು ಶಿವಮೊಗ್ಗ ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ, ವಿದ್ಯಾರ್ಥಿಗಳನ್ನು ಕಳಿಸುವಂತಿಲ್ಲ, ಹಾಸ್ಟೆಲ್ ನಲ್ಲಿರುವ ಯಾವ ವಿದ್ಯಾರ್ಥಿಗಳಿಗೆ ಬಲವಂತವಾಗಿ ಖಾಲಿ ಮಾಡಿಸುವಂತಿಲ್ಲ, ಅವರು ಹಾಸ್ಟೆಲ್ ನಲ್ಲಿ ಇರಬಹುದು ಮತ್ತು ಪಿಯುಸಿ ಪರೀಕ್ಷೆ ಮುಗಿದ ಕಾರಣ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ರಜೆ ಇದ್ದು, ಜಿಲ್ಲೆಯ ವಿದ್ಯಾರ್ಥಿಗಳಿಗೆ ಮೂರು ದಿನದ ರಜೆ ನೀಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸೂಚನೆಗಳನ್ನು ಹಾಸ್ಟೆಲ್ ವಾರ್ಡನ್ ಗಳ ಮೂಲಕ ತಿಳಿಸಲಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪರಿಷತ್ ಮುಖಂಡರು, ವಿದ್ಯಾರ್ಥಿಗಳಿಗೆ ಗೊಂದಲ ನಿವಾರಣೆಗೆ ಈ ಕುರಿತು ಮತ್ತೊಂದು ಆದೇಶವನ್ನು ಹೊರಡಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಶೀಘ್ರವೇ ಮತ್ತೊಂದು ಆದೇಶ ಹೊರಡಿಸುವ ಭರವಸೆಯನ್ನು ನೀಡಿದರು.