ನವದೆಹಲಿ: ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಮಾಸಿಕ ರೂ. 2,500 ನೆರವು ನೀಡುವ ಯೋಜನೆ ಕುರಿತು ಚರ್ಚಿಸಲು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಎಎಪಿ ಶಾಸಕರೊಂದಿಗೆ ಸಭೆ ನಡೆಸಬೇಕು ಎಂದು ಮಾಜಿ ಸಿಎಂ ಆತಿಶಿ ಒತ್ತಾಯಿಸಿದ್ದಾರೆ. ಗುಪ್ತಾ ಅವರಿಗೆ ಪತ್ರ ಬರೆದಿರುವ ಆತಿಶಿ, ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಹೊಸ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಏಕೆ ಘೋಷಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ನೂತನ ಸರ್ಕಾರದ ಮುಖ್ಯಮಂತ್ರಿಯಾಗಿರುವ ಗುಪ್ತಾ ಹಾಗೂ ಅವರ ಸಂಪುಟದ ಸಚಿವರು ಗುರುವಾರವಷ್ಟೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಿಂದಿನ ಎಎಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಆತಿಶಿ, ತಮ್ಮ ಪಕ್ಷದ ಶಾಸಕರೊಂದಿಗೆ ಮುಖ್ಯಮಂತ್ರಿ ಗುಪ್ತಾ ಅವರನ್ನು ನಾಳೆ ಭೇಟಿ ಮಾಡಲು ಸಮಯ ಕೋರಿದ್ದಾರೆ.
ಜನವರಿ 31ರಂದು ದೆಹಲಿಯ ದ್ವಾರಕಾದಲ್ಲಿ ಪ್ರಚಾರದ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ದೆಹಲಿಯ ಸಹೋದರಿಯರು ಮತ್ತು ತಾಯಂದಿರಿಗೆ ಮಾಸಿಕ ರೂ. 2,500 ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ರಚನೆಯಾದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಮೊದಲ ಸಂಪುಟ ಸಭೆ ಫೆಬ್ರುವರಿ 20ರಂದು ನಡೆದಿದೆ. ಆದರೆ, ಯೋಜನೆ ಜಾರಿಯಾಗಿಲ್ಲ ಎಂದು ಆತಿಶಿ ಟೀಕಿಸಿದ್ದಾರೆ. ಮೋದಿಯವರ ಭರವಸೆ ನಂಬಿದ್ದ ದೆಹಲಿ ಮಹಿಳೆಯರು ವಂಚನೆಗೊಳಗಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.