ದೆಹಲಿಯಲ್ಲಿ ಇಂದು ದಾಖಲೆ ಪ್ರಮಾಣದ ಮಳೆ

Most read

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಶನಿವಾರ ಬೆಳಗ್ಗೆ ಸುರಿದ ಭಾರಿ ಮಳೆ 101 ವರ್ಷಗಳ ದಾಖಲೆಯನ್ನು ಮುರಿದಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಹವಾಮಾನ ಇಲಾಖೆ ದೆಹಲಿಯಲ್ಲಿ ಶನಿವಾರ ಬೆಳಗ್ಗೆ 8.30 ರವರೆಗೆ ಭಾರಿ ಮಳೆ ಸುರಿದಿದ್ದು, 24 ಗಂಟೆಗಳಲ್ಲಿ ಬರೊಬ್ಬರಿ 41.2 ಮಿಮೀ ಮಳೆಯಾಗಿದೆ. ಇದು ಡಿಸೆಂಬರ್‌ನಲ್ಲಿ ಕಳೆದ 101 ವರ್ಷಗಳಲ್ಲಿ ಸುರಿದ ಒಂದು ದಿನದ ಅತಿ ಹೆಚ್ಚು ಮಳೆಯಾಗಿದೆ ಎಂದು ಹೇಳಿದೆ.

ದೆಹಲಿಯ ಸಫ್ದರ್‌ ಜಂಗ್ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಇದು 1901 ರ ನಂತರ ಇ ಪ್ರದೇಶದಲ್ಲಿ ಸುರಿದ ಎರಡನೇ ಅತಿ ಹೆಚ್ಚು ಪ್ರಮಾಣದ ಮಳೆಯಾಗಿದೆ. ಏತನ್ಮಧ್ಯೆ, ಶನಿವಾರ ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಹವಾಮಾನ ಇಲಾಖೆಯು ಹಗುರದಿಂದ ಮಧ್ಯಮ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಹಳದಿ ಅಲರ್ಟ್ ಅನ್ನೂ ಘೋಷಿಸಿದೆ
ಪಶ್ಚಿಮದ ಸಕ್ರಿಯ ವಾಯುಭಾರ ಕುಸಿತದ ಪರಿಣಾಮ ದೆಹಲಿ-ಎನ್‌ಸಿಆರ್ ಸೇರಿದಂತೆ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಹಗುರದಿಂದ ಮಧ್ಯಮ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಶನಿವಾರ ಕನಿಷ್ಠ ತಾಪಮಾನವು 12.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದು ಋತುವಿನ ಸರಾಸರಿಗಿಂತ ಆರು ಡಿಗ್ರಿ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನು ದೆಹಲಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಕೊಂಚ ಮಟ್ಟಿಗೆ ಸುಧಾರಿಸಿದೆ. ಗರಿಷ್ಠ ಪ್ರಮಾಣದಲ್ಲಿದ್ದ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ‘ಮಧ್ಯಮ’ಕ್ಕೆ ಸುಧಾರಿಸಿದೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಎಕ್ಯೂಐ 152 ಕ್ಕೆ ಇಳಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ತಿಳಿಸಿದೆ. 0 ಮತ್ತು 50 ರ ನಡುವಿನ ಎಕ್ಯೂಐ ಅನ್ನು ‘ಉತ್ತಮ’, 51 ಮತ್ತು 100 ‘ತೃಪ್ತಿಕರ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ತುಂಬಾ ಕಳಪೆ’ ಮತ್ತು 401 ಮತ್ತು 500 ‘ಗಂಭೀರ’ ಎಂದು ಪರಿಗಣಿಸಲಾಗುತ್ತದೆ.

More articles

Latest article