ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ ಅವರಿಗೆ ಸುಪ್ರೀಂಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ವಿಚಾರಣೆಯ ವೇಳೆ, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ಸುಪ್ರೀಂಕೋರ್ಟ್ ಪೀಠವು, ದೆಹಲಿಯ ಅಬಕಾರಿ ನೀತಿ ಹಗರಣದಲ್ಲಿ ಕೆ ಕವಿತಾ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವ ಸಾಕ್ಷ್ಯ ಇದೆ ಎಂಬುದನ್ನು ತೋರಿಸಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ಕೇಳಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ತನಿಖಾ ಸಂಸ್ಥೆಗಳ ಪರವಾಗಿ ವಾದ ಮಂಡಿಸಿದ್ದು, ಕೆ ಕವಿತಾ ಅವರು ತಮ್ಮ ಮೊಬೈಲ್ ಫೋನ್ ಫಾರ್ಮ್ಯಾಟ್ ಮಾಡಿದ್ದಾರೆ. ಆಕೆಯ ನಡವಳಿಕೆಯು ಸಾಕ್ಷ್ಯವನ್ನು ಹಾಳುಮಾಡುವಂತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಆರೋಪವನ್ನು ಕವಿತಾ ಅವರ ವಕೀಲರು “ಬೋಗಸ್” ಎಂದಿದ್ದಾರೆ. ನಂತರ, ಪೀಠವು ಸಿಬಿಐ ಪರ ವಾದ ಮಂಡಿಸಿದ ವಕೀಲರಲ್ಲಿ “ಕವಿತಾ ಅವರು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ತೋರಿಸಲು ಸಾಕ್ಷ್ಯ ಯಾವುದಿದೆ ಎಂದು ಕೇಳಿದ್ದಾರೆ.
ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ಅವರ ಪುತ್ರಿ ಕೆ.ಕವಿತಾ ಮಾರ್ಚ್ 15ರಿಂದ ಬಂಧನದಲ್ಲಿದ್ದರು.