ಸದ್ಯದ ಮಟ್ಟಿಗೆ ಆಪ್ ಗೆಲುವು ಖಚಿತ ಎನ್ನಲಾಗುತ್ತಿದ್ದರೂ ಬಿಜೆಪಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕೆ ಇಳಿದಿಲ್ಲ. ಅಪಾರ ಸಂಪನ್ಮೂಲ ಹೊಂದಿರುವ ಬಿಜೆಪಿ ಮತ್ತು ಸಂಘಪರಿವಾರ ಎಂತಹ ಹುನ್ನಾರಗಳನ್ನು ಹೂಡುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪುಟಿದೆದ್ದರೆ ಚುನಾವಣಾ ಲೆಕ್ಕಾಚಾರಗಳು ಏರುಪೇರಾದರೂ ಆಗಬಹುದು – ಎಚ್ ಮಾರುತಿ, ಹಿರಿಯ ಪತ್ರಕರ್ತರು.
ದೆಹಲಿ ವಿಧಾನಸಭೆಗೆ ಫೆಬ್ರವರಿ. 5ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 8 ರಂದು ಮತಎಣಿಕೆ ನಡೆಯಲಿದೆ. ಆಮ್ ಆದ್ಮಿ ಪಾರ್ಟಿ (ಎಎಪಿ) ಹ್ಯಾಟ್ರಿಕ್ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದೆ. ತಳಮಟ್ಟದಿಂದಲೂ ಪಕ್ಷ ಬಲಿಷ್ಠವಾಗಿರುವುದರ ಜತೆಗೆ ಉತ್ತಮ ಆಡಳಿತ ನೀಡಿದ ಹಿರಿಮೆಯನ್ನೂ ಉಳಿಸಿಕೊಂಡಿದೆ. ದೆಹಲಿಯ ಎಲ್ಲ ವರ್ಗಗಳ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ನೆಲೆಸಿರುವ ಹತ್ತಾರು ರಾಜ್ಯಗಳ ಮತದಾರರ ಬ್ಯಾಂಕ್ ಸೃಷ್ಟಿಸಿಕೊಂಡಿದೆ. ಈ ಕಾರಣಗಳಿಗಾಗಿ ಈಗಲೂ ದೆಹಲಿಯಲ್ಲಿ ಆಪ್ ನಂ.1 ಸ್ಥಾನದಲ್ಲಿದೆ. ಹಾಗೆಂದು ಈ ಬಾರಿ ಆಪ್ ಹಾದಿ ಅಷ್ಟೊಂದು ಸುಲಭವಾಗಿಲ್ಲ. ಕಳೆದ ಎರಡು ಚುನಾವಣೆಗಳಿಗಿಂತ ಈ ಬಾರಿ ಸ್ಪರ್ಧೆ ಕಠಿಣವಾಗುವ ಲಕ್ಷಣಗಳಿದ್ದು, ಬಹುಮತದ ಗೆಲುವಿಗೆ ಶ್ರಮ ಹಾಕಬೇಕಿದೆ. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಬಲ ಸ್ಪರ್ಧೆಯೊಡ್ಡುವ ಸಾಧ್ಯತೆಗಳಿವೆ. ಕಾಂಗ್ರೆಸ್ ಪರಿಸ್ಥಿತಿ ಆಶಾದಾಯಕವಾಗೇನೂ ಇಲ್ಲ. ಹೆಚ್ಚೆಂದರೆ ಅಸ್ತಿತ್ವವನ್ನು ಸಾಬೀತುಪಡಿಸಲು ಹೆಣಗಾಡಬಹುದು. ಆದರೆ ಬಿಜೆಪಿ ಹಾಗಲ್ಲ, ಈ ಬಾರಿ ಶತಾಯ ಗತಾಯ ಅಧಿಕಾರ ಹಿಡಿಯಬೇಕೆಂಬ ಉಮೇದಿನಲ್ಲಿದೆ.
ಉತ್ತಮ ಆಡಳಿತ ಮತ್ತು ಸ್ಥಳೀಯ ನಾಯಕತ್ವ ಆಪ್ ನ ಆಧಾರ ಸ್ತಂಭವಾಗಿದೆ. ವಿದ್ಯುತ್ ಮತ್ತು ನೀರಿನ ಬಿಲ್ ನಲ್ಲಿ ನೀಡಿರುವ ಸಬ್ಸಿಡಿಯೂ ಬಡ ಮತ್ತು ಮಧ್ಯಮ ವರ್ಗದ ಮತದಾರರ ಒಲವು ಉಳಿಸಿಕೊಳ್ಳಲು ನೆರವಿಗೆ ಬರಲಿದೆ. ಇಲ್ಲಿನ ಸರ್ಕಾರಿ ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್ ಗಳು ದೆಹಲಿ ಅಥವಾ ದೇಶದ ಮಾತ್ರವಲ್ಲ, ಹತ್ತಾರು ದೇಶಗಳ ಮೆಚ್ಚುಗೆಗೂ ಪಾತ್ರವಾಗಿವೆ. ಇದೇ ಕಾರಣಕ್ಕೆ ಆಪ್ ಪಕ್ಷವು ಇತರ ಪಕ್ಷಗಳಿಗಿಂತ ಭಿನ್ನವಾಗಿ ನಂಬಿಕೆ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಇತ್ತೀಚೆಗೆ ಪಕ್ಷದ ಮುಖಂಡ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿರುವ ಎಲ್ಲ ಹಿರಿಯ ನಾಗರೀಕರಿಗೆ ಉಚಿತ ಚಿಕಿತ್ಸೆ ಒದಗಿಸುವ ಸಂಜೀವಿನ ಯೋಜನೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಯೋಜನೆಯಿಂದ ಹಿರಿಯ ನಾಗರೀಕರ ಬೆಂಬಲ ಸಾರಾಸಗಟಾಗಿ ಸಿಗಲಿದೆ ಎಂದೂ ಹೇಳಲಾಗುತ್ತಿದೆ. ʼಫಿರ್ ಲಾಯೇಂಗೆ ಕೇಜ್ರಿವಾಲ್’ ಎಂಬ ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ಆರಂಭಿಸಿದೆ.
ಕೆಲವು ಕಾರಣಗಳಿಗಾಗಿ ಕೇಜ್ರಿವಾಲ್ ಜೈಲಿಗೆ ಹೋಗಿ ಬಂದಿದ್ದರೂ ಅವರ ಜನಪ್ರಿಯತೆ ಮುಕ್ಕಾಗಿಲ್ಲ ಎನ್ನುವುದು ರಾಷ್ಟ್ರ ರಾಜಧಾನಿಯ ಮತದಾರರ ಅಭಿಪ್ರಾಯವಾಗಿದೆ. ಇವರ ಆಡಳಿತ ವೈಖರಿ ಮತ್ತು ಜನಪ್ರಿಯ ಯೋಜನೆಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಬಲವಾಗಿ ವಿರೋಧಿಸುತ್ತಾ ಬಂದಿದ್ದರೂ ದೆಹಲಿಯ ಮತದಾರ ಮಾತ್ರ ಇವರಲ್ಲಿ ಬಲವಾದ ನಂಬಿಕೆ ಇರಿಸಿದ್ದಾನೆ. ದೆಹಲಿಯಲ್ಲಿ ಪಕ್ಷಕ್ಕೆ ಬಲವಾದ ಸ್ಥಳಿಯ ನಾಯಕತ್ವ ಇದೆ. ಸರ್ಕಾರದ ಒಂದಿಲ್ಲೊಂದು ಯೋಜನೆ ಪ್ರತಿಯೊಂದು ಮನೆಯನ್ನೂ ತಲುಪಿದೆ. ತನ್ನ ಕಾರ್ಯವೈಖರಿಯನ್ನು ಮನೆ ಮನೆಗೆ ತಲುಪಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ.
ಸದ್ಯಕ್ಕೆ ಆಪ್ ಗೆ ಬಿಜೆಪಿಯೇ ಪ್ರಮುಖ ಎದುರಾಳಿ. ದೇಶದ ಮತ್ತು ಬಹುತೇಕ ರಾಜ್ಯಗಳ ಆಡಳಿತ ಚುಕ್ಕಾಣಿ ಹಿಡಿದಿರುವುದು ಮತ್ತು ಭರ್ಜರಿ ಸಂಪನ್ಮೂಲ ಹೊಂದಿರುವುದು, ಪ್ರಧಾನಿ ಮೋದಿ ಅವರ ಜನಪ್ರಿಯತೆ ಪ್ರಮುಖ ಸವಾಲಾಗಿ ಪರಿಣಮಿಸಿದೆ. ದೆಹಲಿಯ ಮತದಾರನನ್ನು ಓಲೈಸಲು ಕಾನೂನು ಮತ್ತು ಸುವ್ಯವಸ್ಥೆ, ನಗರ ಮೂಲಭೂತ ಸೌಕರ್ಯ, ರಾಷ್ಟ್ರೀಯ ಭದ್ರತೆಯಂತಹ ವಿಷಯಗಳನ್ನು ಬಿಜೆಪಿ ಪ್ರಸ್ತಾಪಿಸುತ್ತಾ ಬರುತ್ತಿದೆ.
ಕಾಂಗ್ರೆಸ್ ಇನ್ನೂ ಪುಟಿದೆಳುವ ಲಕ್ಷಣಗಳು ಗೋಚರಿಸಿಲ್ಲವಾದರೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಹವಣಿಸುತ್ತಿದೆ. ತನ್ನ ಸಾಂಪ್ರದಾಯಿಕ ಅಲ್ಪಸಂಖ್ಯಾತ ಮತ್ತು ದಲಿತ ಮತಗಳನ್ನು ಸೆಳೆಯುವಲ್ಲಿ ಅದು ಯಶಸ್ವಿಯಾದರೆ ಬಿಜೆಪಿಯ ಗೆಲುವಿನ ಸಾಧ್ಯತೆಗಳನ್ನು ಹೆಚ್ಚಿಸುತ್ತಾ ಹೋಗುತ್ತದೆ. ಈ ಮೂಲಕ ಬಿಜೆಪಿಗೆ ಪರೋಕ್ಷವಾಗಿ ನೆರವಾಗುವ ಸಾದ್ಯತೆಗಳಿವೆ.
ದೆಹಲಿಯಲ್ಲಿ ಕೈ ಪಡೆಗೆ ನಾಯಕರೇ ಇಲ್ಲವಾಗಿದ್ದಾರೆ. ದುರ್ಬಲ ನಾಯಕತ್ವದ ಕಾರಣಕ್ಕಾಗಿ ಪಕ್ಷದಲ್ಲಿ ಚೈತನ್ಯ ಕುಂದಿಹೋಗಿದೆ. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಆಪ್ ಗೆ ಸವಾಲು ಒಡ್ಡುವಷ್ಟು ಪ್ರಬಲರಾಗಿಲ್ಲ ಎನ್ನುವುದೂ ಅಷ್ಟೇ ಸತ್ಯ. ಆದರೂ ಕಾಂಗ್ರೆಸ್ ಈ ಬಾರಿ ತನ್ನ ಮತಗಳಿಕೆ ಮತ್ತು ಎರಡಂಕಿ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ಮೂರನೇ ಬಾರಿಗೂ ಆಪ್ ಪಕ್ಷವನ್ನು ಬೆಂಬಲಿಸಲು ದೆಹಲಿಯ ಮತದಾರರಿಗೆ ಹತ್ತಾರು ಕಾರಣಗಳಿವೆ. ಮೇಲೆ ಹೇಳಿದ ಕಲ್ಯಾಣ ಕಾರ್ಯಕ್ರಮಗಳ ಜತೆಗೆ ನಗರ ಕೇಂದ್ರಿತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. ಸಾರ್ವಜನಿಕ ಸಾರಿಗೆ ಸುಧಾರಣೆ ಮತ್ತು ವಸತಿ ಯೋಜನೆಗಳು ನಗರವಾಸಿಗಳಿಗೆ ನೆರವಾಗಿದ್ದು, ಆಪ್‌ಗೆ ವರದಾನವಾಗಿದೆ ಹಾಗೂ ಮತದಾನದ ಹರವು ವಿಸ್ತಾರಗೊಂಡಿದೆ.
ಮತ್ತೆ ಎದುರಾಗುತ್ತಿರುವ ಚುನಾವಣೆಗೆ ಕೇಜ್ರಿವಾಲ್ ಮತ್ತಷ್ಟು ಕನಸುಗಳನ್ನು ಬಿತ್ತಿದ್ದಾರೆ. ಅವುಗಳನ್ನು ಸಾಕಾರಗೊಳಿಸುವ ಭರವಸೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಇನ್ನಿಲ್ಲದಂತೆ ಕಲುಷಿತಗೊಂಡಿರುವ ಯಮುನಾ ನದಿಯನ್ನು ಸ್ವಚ್ಚಗೊಳಿಸುವುದು ಅವರ ಹೊಸ ಕನಸು. ಇದು ಮತದಾರರನ್ನು ಆಕರ್ಷಿಸುತ್ತಿದೆ.
ವಿಪಕ್ಷಗಳ ಟೀಕೆ ಟಿಪ್ಪಣಿಗಳ ನಡುವೆಯೂ ಆಪ್ ನ ಉಚಿತ ಕೊಡುಗೆಗಳು ದೆಹಲಿಯ ಮತದಾರರಲ್ಲಿ ಜನಪ್ರಿಯಗೊಂಡಿರುವುದಂತೂ ಸುಳ್ಳಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣ, ವಿದ್ಯುತ್ ಮತ್ತು ನೀರಿನ ಬಿಲ್ ನಲ್ಲಿ ಸಬ್ಸಿಡಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗಳು, ನೇರವಾಗಿ ಮತದಾರರ ಜೀವನದಲ್ಲಿ ಬದಲಾವಣೆಗೆ ಕಾರಣವಾಗಿವೆ.
ಪರಿವರ್ತನ್ ಹೆಸರಿನಲ್ಲಿ ಬಿಜೆಪಿ 26 ವರ್ಷಗಳ ನಂತರ ಅಧಿಕಾರಕ್ಕೆ ಮರಳಲು ಹವಣಿಸುತ್ತಿದೆ. ಆಪ್ ಸರ್ಕಾರದ ಅಬಕಾರಿ ನೀತಿ ಹಗರಣವನ್ನೇ ಮುಂದಿಟ್ಟುಕೊಂಡು ಬಿಜೆಪಿ ಮತದಾರನ ಮುಂದೆ ಹೋಗುತ್ತಿದೆ. ಈ ಹಿಂದೆ 1993ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ 1998ರಲ್ಲಿ ಅಧಿಕಾರ ಕಳೆದುಕೊಂಡಿತು. ಚುನಾವಣೆಯ ಜವಾಬ್ದಾರಿ ಹೊರಲೆಂದು ಮುಖ್ಯಮಂತ್ರಿ ಸ್ಥಾನವನ್ನು ಆತಿಶಿ ಅವರಿಗೆ ಬಿಟ್ಟು ಕೊಟ್ಟ ಕೇಜ್ರಿವಾಲ್ ಮತದಾರರ ಮನವೊಲಿಕೆಯಲ್ಲಿ ನಿರತರಾಗಿದ್ದಾರೆ.
ಮಹಿಳೆಯರಿಗೆ ಮಾಸಿಕ ರೂ.2,100 ಗೌರವಧನ ನೀಡುವ ಆಪ್ ಸರ್ಕಾರದ ಘೋಷಣೆಗೆ ಪರ್ಯಾಯವಾಗಿ ಕಾಂಗ್ರೆಸ್, ‘ಪ್ಯಾರಿ ದೀದಿ’ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ರೂ. 2,500 ನೀಡುವುದಾಗಿ ಪ್ರಕಟಿಸಿದೆ.
ಬಿಜೆಪಿಯ ಏಕಮುಖ ಓಲೈಕೆಗೆ ಅಥವಾ ಹಿಂದುತ್ವದ ಪ್ರತಿಪಾದನೆಗೆ ಎದುರಾಗಿ ಆಪ್ ನ ಕೋಮು ಸೌಹಾರ್ದ, ಒಳಗೊಳ್ಳುವಿಕೆ, ಶಿಕ್ಷಿತರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ತಳ ಮಟ್ಟದಲ್ಲಿ ಆಡಳಿತ ಸುಧಾರಣೆ ಮತ್ತು ಉತ್ತಮ ಆಡಳಿತ ನೀಡುವುದು ಆಪ್ ನಿಂದ ಮಾತ್ರ ಸಾಧ್ಯ ಎನ್ನುವುದು ಬಹುತೇಕ ಮತದಾರರ ಅಭಿಪ್ರಾಯವಾಗಿದೆ.
ಸದ್ಯದ ಮಟ್ಟಿಗೆ ಆಪ್ ಗೆಲುವು ಖಚಿತ ಎನ್ನಲಾಗುತ್ತಿದ್ದರೂ ಬಿಜೆಪಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕೆ ಇಳಿದಿಲ್ಲ. ಅಪಾರ ಸಂಪನ್ಮೂಲ ಹೊಂದಿರುವ ಬಿಜೆಪಿ ಮತ್ತು ಸಂಘಪರಿವಾರ ಎಂತಹ ಹುನ್ನಾರಗಳನ್ನು ಹೂಡುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪುಟಿದೆದ್ದರೆ ಚುನಾವಣಾ ಲೆಕ್ಕಾಚಾರಗಳು ಏರುಪೇರಾದರೂ ಆಗಬಹುದು. ಒಂದು ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ನ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಆಪ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದರೂ ಏರಬಹುದು.
ಎಚ್ ಮಾರುತಿ
ಹಿರಿಯ ಪತ್ರಕರ್ತರು
ಇದನ್ನೂ ಓದಿ- ದೆಹಲಿ ಚುನಾವಣೆ: ರೂ. 25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ ಘೋಷಿಸಿದ ಕಾಂಗ್ರೆಸ್