ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ‘ಜೀವನ ರಕ್ಷ ಯೋಜನೆ’ಯಡಿ ರೂ. 25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ ರಕ್ಷಣೆ ಒದಗಿಸುವುದಾಗಿ ಪಕ್ಷ ಘೋಷಿಸಿದೆ.
ದೆಹಲಿಯಲ್ಲಿ ಇಂದು ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದ್ದು, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಮಧ್ಯೆ ದೇಶಕ್ಕೂ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಯೋಜನೆಯು ಎಲ್ಲಾ ವರ್ಗದ ಜನರ ಆರೋಗ್ಯದ ಕಾಳಜಿಯನ್ನು ಹೊಂದಿದ್ದು, ಕುಟುಂಬಗಳ ಸಮಗ್ರ ಆರೋಗ್ಯ ರಕ್ಷಣೆಯ ಗುರಿಯನ್ನು ಹೊಂದಿದೆ. ಈ ಯೋಜನೆಯು ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳ ಚಿಕಿತ್ಸಾ ವೆಚ್ಚವನ್ನು ಒಳಗೊಂಡಿರುತ್ತದೆ. ಕಾಂಗ್ರೆಸ್ ಘೋಷಿಸಿರುವ ಎಲ್ಲಾ ಯೋಜನೆಗಳು ಜನರ ಅಗತ್ಯತೆಗಳನ್ನು ಪೂರ್ಣಗೊಳಿಸಲು ಪಕ್ಷ ಬದ್ಧವಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಇತ್ತೀಚೆಗೆ ‘ಗೃಹಲಕ್ಷ್ಮಿ’ ಮಾದರಿಯಲ್ಲಿ ‘ಪ್ಯಾರಿ ದೀದಿ ಯೋಜನೆ’ ಮೂಲಕ ದೆಹಲಿ ಮಹಿಳೆಯರಿಗೆ ಪ್ರತಿ ತಿಂಗಳು ರೂ. 2500 ನೀಡುವ ಗ್ಯಾರಂಟಿ ಭರವಸೆಯನ್ನು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದರು.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರುವರಿ 8ರಂದು ಮತ ಎಣಿಕೆ ನಡೆಯಲಿದೆ.