ನವದೆಹಲಿ: ದೆಹಲಿ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ಇಂದು ಚುನಾವಣೆಗೆ ದಿನಾಂಕ ಪ್ರಕಟಿಸಿದೆ. 2025ರ ಫೆಬ್ರುವರಿ 23ಕ್ಕೆ ವಿಧಾನಸಭೆಯ ಅವಧಿಯು ಕೊನೆಯಾಗಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಚುನಾವಣೆಯ ವಿವರ ನೀಡಿದರು. ಫೆ. 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಫೆ. 8ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.
ದೆಹಲಿ ವಿಧಾನಸಭೆಯಲ್ಲಿ ಒಟ್ಟು 70 ಕ್ಷೇತ್ರಗಳಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 58 ಸಾಮಾನ್ಯ ಹಾಗೂ 12 ಮೀಸಲು ಕ್ಷೇತ್ರಗಳಿವೆ. ಇದಕ್ಕಾಗಿ 13,033 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಶೇ 100ರಷ್ಟು ವೆಬ್‌ಕಾಸ್ಟಿಂಗ್ ನಡೆಸಲಾಗುವುದು. ದೆಹಲಿಯಲ್ಲಿ 1.55 ಕೋಟಿ ಮತದಾರರಿದ್ದು, 83 ಲಕ್ಷ ಪುರುಷ ಹಾಗೂ 71 ಲಕ್ಷ ಮಹಿಳಾ ಮತದಾರರಿದ್ದಾರೆ. 79 ಸಾವಿರ ಅಂಗವಿಕಲ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟವರು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಮತಗಟ್ಟೆಗೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಜನವರಿ 17 ಕೊನೆಯ ದಿನವಾಗಿದ್ದು, ಜ. 18ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜ. 20 ಕೊನೆಯ ದಿನವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಬುಧವಾರ ಮತದಾನಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಈ ಪ್ರಯತ್ನವನ್ನು ಮಹಾರಾಷ್ಟ್ರದಲ್ಲಿ ನಡೆಸಿದ್ದು ಯಶಸ್ಸಿಯಾಗಿದೆ ರಾಜೀವ್ ಕುಮಾರ್ ವಿವರಿಸಿದರು. ದೆಹಲಿಯೊಂದಿಗೆ ಫೆ. 5ರಂದು ಉತ್ತರ ಪ್ರದೇಶದ ಮಿಲ್ಕಿಪುರ ಹಾಗೂ ತಮಿಳುನಾಡಿನ ಇರೋಡ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.