ಹೈದರಾಬಾದ್: ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ನಡುವೆ ನಡೆದ ಪಂದ್ಯದ ನಂತರ ಕೆ.ಎಲ್.ರಾಹುಲ್ ವಿರುದ್ಧ ಉದ್ಯಮಿ ಸಂಜೀವ್ ಗೋಯೆಂಕ ನಡೆದುಕೊಂಡ ರೀತಿಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀನಾಯವಾಗಿ ಸೋಲನ್ನಪ್ಪಿತ್ತು.
ಮೊದಲು ಬ್ಯಾಟ್ ಮಾಡಿದ್ದ LSG ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ SRH ತಂಡ ಅದ್ಭುತ ಪ್ರದರ್ಶನ ತೋರಿ ಕೇವಲ 9.4 ಓವರ್ ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಜಯಭೇರಿ ಬಾರಿಸಿತ್ತು.
SRH ಪರ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಟ್ರಾವಿಸ್ ಹೆಡ್ ಕೇವಲ 30 ಎಸೆತಗಳಲ್ಲಿ 8 ಬೌಂಡರಿ, 8 ಸಿಕ್ಸರ್ ಸಿಡಿಸಿ 89ರನ್ ಗಳಿಸಿದ್ದರು. ಮತ್ತೊಂದೆಡೆ ಇಂಪ್ಯಾಕ್ಟ್ ಆಟಗಾರರಾಗಿ ಕಣಕ್ಕೆ ಇಳಿದಿದ್ದ ಯುವ ಆಟಗಾರ ಅಭಿಷೇಕ್ ಶರ್ಮಾ 8 ಬೌಂಡರಿ, 6 ಸಿಕ್ಸರ್ ಚೆಚ್ಚಿ 28 ಎಸೆತಗಳಲ್ಲಿ 75 ರನ್ ಗಳಿಸಿದರು.
LSG ಹೀನಾಯವಾಗಿ ಸೋತನಂತರ ಡ್ರೆಸಿಂಗ್ ರೂಂ ಬಳಿ ಮಾಲೀಕ ಸಂಜೀವ್ ಗೋಯೆಂಕಾ ತಂಡದ ನಾಯಕ ಕೆ.ಎಲ್.ರಾಹುಲ್ ಮೇಲೆ ರೇಗಾಡಿದ ಘಟನೆ ನಡೆಯಿತು. ರಾಹುಲ್ ತಾಳ್ಮೆಯಿಂದ ಉತ್ತರಿಸಲು ಯತ್ನಿಸಿದರೂ ಗೋಯೆಂಕಾ ಕೂಗಾಡುತ್ತಲೇ ಇದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ.ಎಲ್. ರಾಹುಲ್ ಈ ಪೀಳಿಗೆಯ ಅತ್ಯಂತ ಉತ್ತಮ ನಡವಳಿಕೆಯ ಮತ್ತು ಸಭ್ಯ ಕ್ರಿಕೆಟಿಗರಾಗಿದ್ದಾರೆ, ಅವರೊಂದಿಗಿನ ಈ ರೀತಿಯ ನಡವಳಿಕೆಯು ಸ್ವೀಕಾರಾರ್ಹವಲ್ಲ, ತಮ್ಮ ಮೇಲೆ ಆತ ದಾಳಿ ನಡೆಸುವಾಗಲೂ ಶಾಂತಚಿತ್ತರಾಗಿಯೇ ಇದ್ದ ಕೆ.ಎಲ್.ರಾಹುಲ್ ಅವರಿಗೆ ಗೌರವ ಸಲ್ಲಬೇಕು ಎಂದು ಅಭಿಮಾನಿಗಳು ಹೇಳಿದ್ದಾರೆ.