ದೀಪಿಕಾ ವಿದ್ಯಾರ್ಥಿ ವೇತನ’ ಲೋಕಾರ್ಪಣೆ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿಯರಿಗೆ ಪ್ರಯೋಜನ

Most read

ಬೆಂಗಳೂರು: ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಾರ್ಷಿಕ 30,000 ರೂ.ಗಳಂತೆ ಒಟ್ಟು 37,000 ವಿದ್ಯಾರ್ಥಿನಿಯರಿಗೆ ’ದೀಪಿಕಾ ವಿದ್ಯಾರ್ಥಿ ವೇತನ’ ಕಾರ್ಯಕ್ರಮದಿಂದ ಅನುಕೂಲವಾಗಲಿದೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಅವರು ಉನ್ನತ ಶಿಕ್ಷಣ ಇಲಾಖೆ ಮತ್ತು ಅಜಿಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯದ ವಿದ್ಯಾರ್ಥಿನಿಯರಿಗಾಗಿ (ದೀಪಿಕಾ) ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದರು.

ರಾಜ್ಯದ ಪ್ರತಿಷ್ಠಿತ ಐಟಿ ದಿಗ್ಗಜ ಅಜೀಂ ಪ್ರೇಂಜಿ ಅವರು ಅಜೀಂ ಪ್ರೇಂಜಿ ಫೌಂಡೇಶನ್  ಮೂಲಕ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಪೂರೈಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ  ಉನ್ನತಶಿಕ್ಷಣದಲ್ಲಿ ತೊಡಗುವಂತಾಗುವ ದೃಷ್ಠಿಯಿಂದ ‘’ದೀಪಿಕಾ ವಿದ್ಯಾರ್ಥಿ ವೇತನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದರು.

ಸರ್ಕಾರಿ ಶಾಲೆಯ 10 ಮತ್ತು 12 ನೇ ತರಗತಿ ವಿದ್ಯಾರ್ಥಿನಿಯರು ಅರ್ಹ:

ಈ ಯೋಜನೆಯಡಿ ಪದವಿ ಕೋರ್ಸ್ ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ರೂ.30,000/- ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ. ಈ ವರ್ಷ ಅಜೀಂ ಪ್ರೇಂಜಿ ಫೌಂಡೇಶನ್ ನಿಂದ ಒಟ್ಟು 37,000 ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವುದಕ್ಕೆ ವಿದ್ಯಾರ್ಥಿನಿಯರು 10 ನೇ ತರಗತಿ ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪೂರ್ಣಗೊಳಿಸಿರಬೇಕು. ಈ ಯೋಜನೆಯ ಲಾಭ ಪಡೆಯಬೇಕಾದರೆ, ವಿದ್ಯಾರ್ಥಿನಿಯರು ಪ್ರತಿ ವರ್ಷ ತಪ್ಪದೇ ಉತೀರ್ಣರಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳಾಗಿದ್ದು, ಇಂತಹ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂದರು.

ಹೆಣ್ಣುಮಕ್ಕಳು ಶಿಕ್ಷಿತರಾಗಬೇಕು:

ನಮ್ಮ ದೇಶದಲ್ಲಿ ಹಿಂದಿನಿಂದಲೂ ಶೂದ್ರರಂತೆ, ಹೆಣ್ಣುಮಕ್ಕಳೂ ಸಹ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ.  ಶಿಕ್ಷಣ ಪಡೆದ ಹೆಣ್ಣುಮಕ್ಕಳ ಸರಾಸರಿ, ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ. ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಿತರಾಗಬೇಕೆಂಬ ಸರ್ಕಾರದ ಉದ್ದೇಶದಲ್ಲಿ ಕೈಜೋಡಿಸಿರುವ ಅಜೀಂ ಪ್ರೇಮ್ ಜೀ ಅವರಿಗೆ ಅಭಿನಂದನೆಗಳನ್ನು ಮುಖ್ಯಮಂತ್ರಿಗಳು ಸಲ್ಲಿಸಿದರು.

ಹೆಣ್ಣುಮಕ್ಕಳು ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಸಮಸ್ಯೆ, ಪೋಕ್ಸೋ ಸಮಸ್ಯೆಗಳು, ಬಾಲ ಕಾರ್ಮಿಕ ಪದ್ಧತಿಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಮಹಿಳೆಯರು ಸ್ವಾವಲಂಬಿಗಳಾಗಲು ವಿದ್ಯೆ ಅತ್ಯವಶ್ಯ. ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತದೆ. ಮಹಿಳೆಯರಿಗೆ ಶಿಕ್ಷಣ ದೊರೆತರೆ, ಸಮಾಜದ ಸವಾಲುಗಳನ್ನು ಎದುರಿಸಲು ಸಮರ್ಥರಾಗುತ್ತಾರೆ ಎಂದರು.

ಸಮಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಆಧಾರ:

ಸಮಾಜದಲ್ಲಿನ ಅಸಮಾನತೆಯನ್ನು ನಿವಾರಿಸದ ಹೊರತು ಸಮಸಮಾಜದ ನಿರ್ಮಾಣ ಸಾಧ್ಯವಿಲ್ಲ. ಸಮಾಜದಲ್ಲಿ ಮೂಢನಂಬಿಕೆ ಹಾಗೂ ಮೌಢ್ಯಗಳ ನಿವಾರಣೆಯಾಗಲು ವೈಚಾರಿಕತೆ ಹಾಗೂ ವೈಜ್ಞಾನಿಕ ಶಿಕ್ಷಣ ಅಗತ್ಯ. ಇಂತಹ ಅಜ್ಞಾನದ ಲಾಭವನ್ನು ಪಟ್ಟಭದ್ರಹಿತಾಸಕ್ತಿಗಳು ಪಡೆಯುತ್ತಿದ್ದು,  ಇದರಿಂದ ಪಾರಾಗಲು ಶಿಕ್ಷಣವಿರಬೇಕು. ಆದ್ದರಿಂದ ನಮ್ಮ ಸರ್ಕಾರ , ವಿದ್ಯಾರ್ಥಿಗಳು ಸಂವಿಧಾನಪೀಠಿಕೆಯನ್ನು ಓದಿಸುವ ಪರಿಪಾಠವನ್ನು ಪ್ರಾರಂಭಿಸಿದೆ. ವೈರುಧ್ಯತೆಗಳಿರುವ ಸಮಾಜದಲ್ಲಿ ವೈಚಾರಿಕತೆ ಅಳವಡಿಸಿಕೊಳ್ಳಲು ಶಿಕ್ಷಣ ಪಡೆಯುವುದು ಅನಿವಾರ್ಯ. ಬಸವಣ್ಣ, ಅಂಬೇಡ್ಕರ್, ಮಹಾತ್ಮಾಗಾಂಧಿ ಕಂಡ ಸಮಸಮಾಜದ ಕನಸನ್ನು ಸಾಕಾರಗೊಳಿಸಲು ಶಿಕ್ಷಣ ಮೂಲ ಆಧಾರವಾಗಿದೆ ಎಂದರು.

ಅಜೀಂ ಪ್ರೇಂಜಿ ಅವರ ಸಾಮಾಜಿಕ ಕಳಕಳಿಯನ್ನು ಅಭಿನಂದಿಸಿದ ಸಿಎಂ:

ಮಹಾತ್ಮಾ ಗಾಂಧೀಜಿಯವರು ‘ನೀವು ಗಳಿಸಿದ ಸಂಪತ್ತು ಸಮಾಜಕ್ಕೆ ಒಳಿತಿಗೆ ಬಳಕೆಯಾಗಬೇಕು’ ಎಂದಂತೆ ಅಜೀಂಪ್ರೇಂ ಜಿ ಯವರು ತಾವು ಗಳಿಸಿದ ಸಂಪತ್ತನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿರುವುದು ಸ್ವಾಗತಾರ್ಹ. ಕರ್ನಾಟಕದಲ್ಲಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮೊಟ್ಟೆ ಕೊಡುವ 1,500 ಕೋಟಿ ರೂಪಾಯಿಗಳ ಯೋಜನೆಗೆ ಕಳೆದ ವರ್ಷ ಒಡಂಬಡಿಕೆ ಮಾಡಿಕೊಂಡಿದ್ದೆವು. ಈ ವರ್ಷ ಉನ್ನತ ಶಿಕ್ಷಣಕ್ಕೆ ಬರುವ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನದ ರೂಪದಲ್ಲಿ ನೆರವು ನೀಡಲು ಮುಂದೆ ಬಂದಿದ್ದಾರೆ. ಇದು ಸಂತೋಷದ ವಿಷಯ ಎಂದು ತಿಳಿಸಿದರು.

More articles

Latest article