ಬರೀ ಧರ್ಮ, ದೇವರು, ಹಿಂದೂ, ಮುಸ್ಲಿಂ ಎಂಬ ಕಂದಾಚಾರದಿಂದ ಮತಗಳಿಕೆಯ ಹಿಂದೆ ಬಿದ್ದಿರುವ ಇಂದಿನ ರಾಜಕೀಯ ಪಕ್ಷಗಳು ಈ ಮಣ್ಣಿನ, ಇಲ್ಲಿನ ಜನರ ಕರುಳಿನ ಕೂಗಿಗೆ ಕಿವುಡಾಗಿದ್ದಾರೆ. ಧರ್ಮ ಎಂದು ಬೊಬ್ಬೆ ಹೊಡೆಯುವವರು ಒಂದು ಸಮುದಾಯ, ಒಂದು ಕುಟುಂಬದ ಸಾವು, ಒಂದು ಹೆಣ್ಣಿನ ತೇಜೋವಧೆಯ ಬಗ್ಗೆ ಮಾತೃ ವಾತ್ಸಲ್ಯ ತೋರದೆ ಫ್ಯೂಡಲಿಸ್ಟ್ ಹಾಗೂ ಅಧಿಕಾರಶಾಹಿಗಳಿಗೆ ಶರಣಾಗತಿಯಾದಂತಿದೆ – ಆಕಾಶ್ ಆರ್ ಎಸ್, ಪತ್ರಕರ್ತರು.
ಘಟನೆ 1: ಒಳಮೀಸಲಾತಿಯಲ್ಲಿ ಶೇ.1 ರಷ್ಟು ಮೀಸಲಾತಿ ನೀಡಿ ಎಂದು ಅಲೆಮಾರಿ ಸಮುದಾಯಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಮಾಡುತ್ತಿದ್ದಾರೆ.
ಘಟನೆ 2: ಕಾಂಗ್ರೆಸ್ ಒಳಗೊಂಡಂತೆ ಬಿಜೆಪಿ, ಜೆಡಿಎಸ್ ಪಕ್ಷಗಳು ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿ ವೀರೇಂದ್ರ ಹೆಗಡೆಯವರನ್ನು ಭೇಟಿ ಮಾಡಿದ್ದಾರೆ.
ಘಟನೆ 3: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರನ್ನು ಸರ್ಕಾರ ಆಹ್ವಾನಿಸಿದ್ದು, ಅದನ್ನು ಬಿಜೆಪಿ ವಿರೋಧಿಸುತ್ತಿದೆ.
ಈ ಮೂರು ಘಟನೆಗಳು ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ದುರಂತವೆಂದರೆ ಇದನ್ನು ವಿರೋಧಿಸುವ ಶ್ರಮಗಳೆಲ್ಲಾ ಭಿನ್ನವಾಗಿದ್ದರೂ ಅದು ಸಾಗುವ ಹಾದಿ ಮಾತ್ರ ಒಂದೇ ದಿಕ್ಕಿನಲ್ಲಿದೆ.
ಹೌದು..
ರಾಜಕೀಯದ ಪರಾಕಾಷ್ಠೆ ಇತ್ತೀಚಿನ ದಿನಗಳಲ್ಲಿ ಉತ್ತುಂಗದ ಮಟ್ಟಕ್ಕೆ ಏರಿದೆ. ಜಾತಿ, ಧರ್ಮ, ದೇವರು ಎಂಬ ಮನುಷ್ಯನ ವೈಯಕ್ತಿಕ ಆಶೆಗಳೆಲ್ಲಾ ರಾಜಕಾರಣಗೊಂಡಿವೆ. “ಮನುಷ್ಯನಿಗಾಗಿ ಧರ್ಮ, ಧರ್ಮಕ್ಕಾಗಿ ಮನುಷ್ಯನಲ್ಲ” ಎಂಬ ಅಂಬೇಡ್ಕರ್ ಮಾತು ಈ ರಾಜಕಾರಣವನ್ನು ಮತ್ತೆ ಮತ್ತೆ ಸುಳ್ಳಾಗಿಸುತ್ತಿದೆ. ಹಾಗಾಗಿಯೇ ತಮ್ಮ ಅಸ್ತಿತ್ವಕ್ಕಾಗಿ, ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಹೋರಾಡುತ್ತಿರುವ ಅಲೆಮಾರಿಗಳ ಹೋರಾಟವಾಗಲಿ, ಅನ್ಯಾಯಕ್ಕೆ ಒಳಗಾದವರ ಪರವಾಗಲಿ, ತನ್ನ ಧರ್ಮವನ್ನು ಇನ್ನೊಬ್ಬರ ಮೇಲೆ ಹೇರಬಾರದೆಂಬ ಸಂವಿಧಾನದ ಆಶಯಗಳ ಬಗ್ಗೆಯಾಗಲಿ ರಾಜಕಾರಣಿಗಳಿಗೆ ಅರಿವಿಲ್ಲದಂತಾಗಿದೆ. ಇಂತಹ ಮತಿಗೇಡಿತನಕ್ಕೆ ಯಾವುದೋ ಒಂದು ರಾಜಕೀಯ ಪಕ್ಷ ಇಳಿದಿದೆ ಎಂದರೆ ಸುಮ್ಮನಿರಬಹುದಿತ್ತೇನೋ. ಆದರೆ ಕೋಮುವಾದ ಹೋಗಲಾಡಿಸಲೆಂದು ಈ ಸಮಾಜದ ಸಮಾನ ಮನಸ್ಕರೆಲ್ಲಾ ಸೇರಿ ಗೆಲ್ಲಿಸಿ ಅಧಿಕಾರಕ್ಕೆ ತಂದ ಆಡಳಿತ ಪಕ್ಷವು ಇದರ ಹೊರತಾಗಿಲ್ಲವೆಂಬುದು ತುಂಬಾ ನೋವಿನ ಸಂಗತಿ.
ಹಾಗಾದರೆ ರಾಜಕೀಯ ಪಕ್ಷಗಳಿಗೆ ಕೇವಲ ಧರ್ಮ, ದೇವರು, ಉಳ್ಳವರು ಮಾತ್ರ ಸಾಕಾ? ಈ ನಾಡಿನ ತಬ್ಬಲಿ ಸಮುದಾಯಗಳು ಬೇಡವಾ? ಅಲೆಮಾರಿ ಸಮುದಾಯಗಳ ಕಣ್ಣೀರು ಕಾಣುತ್ತಿಲ್ಲವಾ? ವಿರೋಧ ಪಕ್ಷಗಳು ಒಂದು ಹೆಣ್ಣಿನ ಮೇಲೆ ಮಾತಿನ ದಾಳಿ ಮಾಡಲು ಹವಣಿಸುವಷ್ಟು ಅಲೆಮಾರಿಗಳಿಗಾದ ಅನ್ಯಾಯದ ಕುರಿತು ಯಾಕೆ ಸೊಲ್ಲೆತ್ತುತ್ತಿಲ್ಲ?, ಈ ದೇಶದ ತಬ್ಬಲಿ ಸಮುದಾಯ, ಮಹಿಳಾ ಸಮುದಾಯದ ಮೇಲೆ ರಾಜಕಾರಣಕ್ಕೆ ಯಾಕಿಷ್ಟು ಅಸಹನೆ?.
ಅಲೆಮಾರಿಗಳು ಮತ್ತು ರಾಜಕೀಯ ಪಕ್ಷಗಳು
ಅಲೆಮಾರಿ ಸಮುದಾಯಗಳು ತಮ್ಮ ಹಕ್ಕಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದು, ಆಡಳಿತ ಪಕ್ಷವು ಅದನ್ನು ಬಗೆಹರಿಸುವಲ್ಲಿ ಸರಿಯಾದ ನಿಲುವು ತಾಳುತ್ತಿಲ್ಲ. ಇನ್ನೊಂದೆಡೆ ವಿರೋಧ ಪಕ್ಷಗಳಾದ ಬಿಜೆಪಿ ಜೆಡಿಎಸ್ ನಮಗೆ ಸಂಬಂಧವೇ ಇಲ್ಲದಂತೆ ಇವೆ. ಹಾಗೆ ನೋಡಿದರೆ ವಿರೋಧ ಪಕ್ಷಗಳು ಕಾಂಗ್ರೆಸ್ಸನ್ನು ಮಣಿಸಲು ಇದನ್ನೊಂದು ದಾಳವಾಗಿ ಬಳಕೆ ಮಾಡುವ ಅವಕಾಶ ಇದೆ. ಆದರೆ ಅದನ್ನು ಕೈಚೆಲ್ಲಿ ಕೂತಿವೆ ಎಂದರೆ ತಪ್ಪಿಲ್ಲ. ಯಾಕೆಂದರೆ ಬಿಜೆಪಿ 2019 ರ ಚುನಾವಣೆಯಲ್ಲಿ ಇದೇ ಒಳಮೀಸಲಾತಿಯನ್ನು ಮುಂದಿಟ್ಟುಕೊಂಡು ಇಡೀ ದಲಿತರ ಮತಗಳನ್ನು ಕ್ರೋಢೀಕರಿಸಿಕೊಂಡು ಅಧಿಕಾರದ ಗದ್ದುಗೆ ಏರಿತ್ತು. ನಂತರ ಚುನಾವಣೆಯಲ್ಲಿ ಅದೇ ಕಾರಣಕ್ಕೆ ಕಾಂಗ್ರೆಸ್‌ಗೆ ಆ ಮತಗಳು ಶಿಫ್ಟ್ ಆಗಿ ಬಿಜೆಪಿ ಸೋಲುಂಡಿತ್ತು.
ಈ ಹೋರಾಟದಲ್ಲಿ ಅಲೆಮಾರಿ ಸಮುದಾಯಗಳು ಮಾತ್ರವಲ್ಲ ಅವರ ಪರವಾಗಿ ಮಾದಿಗ ಸಮುದಾಯಗಳು ಕೂಡ ಬೀದಿಗಿಳಿದು ಪ್ರತಿಭಟಿಸುತ್ತಿವೆ. ಆದರೆ ಬಿಜೆಪಿ ಇದ್ಯಾವುದರ ಪರಿಜ್ಞಾನವಿಲ್ಲದೆ ಧರ್ಮಸ್ಥಳದ ಫ್ಯೂಡಲಿಸ್ಟ್ ಗೆ ಶರಣಾಗಿದೆ. ವೀರೇಂದ್ರ ಹೆಗಡೆಯವರನ್ನು ಓಲೈಸಲೋ, ಮುಂದಿನ ಚುನಾವಣೆಗೆ ಫಂಡ್ ಪಡೆಯಲೋ ಅಥವಾ ಇದನ್ನೇ ಇಟ್ಟುಕೊಂಡು ಮತಗಳಿಸಲೋ ಪಾದಯಾತ್ರೆ ಮಾಡಿದೆ. ಇದರ ಅರ್ಧ ಭಾಗದಷ್ಟಾದರೂ ಮುತುವರ್ಜಿಯನ್ನು ಅಲೆಮಾರಿಗಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ವಿಧಾನಸಭೆ, ವಿಧಾನ ಪರಿಷತ್ ಅಥವಾ ಮಾಧ್ಯಮಗಳ ಮುಂದೆಯಾಗಲಿ ಧ್ವನಿ ಎತ್ತಿದ್ದರೆ ಸ್ವಲ್ಪವಾದರೂ ತಮ್ಮ ಮೇಲಿನ ಕಳಂಕ ಕಳಚಿಕೊಳ್ಳಬಹುದಿತ್ತೇನೋ, ಈ ನಾಡಿನ ಜನ ಅವರನ್ನು ಗೌರವಯುತವಾಗಿ ಕಾಣುತ್ತಿದ್ದರೇನೋ. ಆದರೆ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಇಂತಹ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ತನ್ನ ಹಳೆಯ ಫಾರ್ಮುಲವಾದ ಧರ್ಮ, ದೇವರ ಹಿಂದೆ ಬಿದ್ದಿದೆ. ಇನ್ನೂ ಜೆಡಿಎಸ್ ಇದರಲ್ಲಿ ಅಪ್ರಸ್ತುತವೇ ಬಿಡಿ. ಯಾಕೆಂದರೆ ತಮ್ಮದೇ ಹಾಸನ ಕ್ಷೇತ್ರದಲ್ಲಿನ ಅನ್ಯಾಯದ ಬಗ್ಗೆಯೇ ಸೊಲ್ಲೆತ್ತದವರು ಯಾವುದೇ ನ್ಯಾಯದ ಪರವಾಗಿ ನಿಲ್ಲುತ್ತಾರೆ ಎಂದು ನಿರೀಕ್ಷಿಸುವುದೇ ಮೂರ್ಖತನ.
ಇದು ಕೇವಲ ಬಿಜೆಪಿ, ಜೆಡಿಎಸ್ ಕಥೆಯಲ್ಲ. ಕಾಂಗ್ರೆಸ್ ಕಥೆಯೂ ಹೀಗೆಯೇ. ನ್ಯಾಯ ಒದಗಿಸುವ ದಿಸೆಯಲ್ಲಿ ಕೆಲಸ ಮಾಡುವ ಬದಲು ಬಿಜೆಪಿ, ಜೆಡಿಎಸ್ ನ್ನು ಕಟ್ಟಿ ಹಾಕಲು ಅವರ ಹಾದಿಯಲ್ಲೆ ಸಾಗುತ್ತ ತಬ್ಬಲಿ ಸಮುದಾಯಗಳನ್ನು ಬೀದಿಗೆ ತಳ್ಳಿದ್ದಾರೆ. ಜತೆಗೆ ಇದುವರೆಗೂ ಅಲೆಮಾರಿಗಳಿಗಾದ ಅನ್ಯಾಯದ ಪರವಾಗಿ ಈ ಮೂರು ಪಕ್ಷದಲ್ಲಿನ ದಲಿತ ನಾಯಕರು ಧ್ವನಿ ಎತ್ತದೆ ಮೌನವಹಿಸಿರುವುದು ಕೂಡ ಭವಿಷ್ಯದ ಸಾಮಾಜಿಕ ನ್ಯಾಯದ ಅಧಃಪತನಕ್ಕೆ ಮುನ್ನುಡಿಯಾಗಿದೆ.
ಮಹಿಳೆಯರು ಮತ್ತು ಬಿಜೆಪಿ
ದೇಶದ ಮಹಿಳೆಯರ ಮೇಲೆ ಯಾರಿಗೂ ಇಲ್ಲದಷ್ಟು ಅಸಹನೆ ಬಿಜೆಪಿ ಪಕ್ಷಕ್ಕಿದೆ ಎಂದರೆ ತಪ್ಪಿಲ್ಲ. ಬಿಜೆಪಿ ಮಹಿಳಾ ವಿರೋಧಿ ಎಂದು ಕಾಲ ಕಾಲದಿಂದ ಸಾಬೀತು ಮಾಡಿಕೊಂಡು ಬಂದಿದ್ದು, ಗೋದ್ರಾ ಹತ್ಯಾಕಾಂಡ ಸಮಯದಲ್ಲಿನ ಬಿಲ್ಕೀಸ್ ಬಾನು ಪ್ರಕರಣದಿಂದ ಕರ್ನಾಟಕದ ಈಗಿನ ದಸರಾ ಉದ್ಘಾಟನೆವರೆಗೂ ಮತ್ತಷ್ಟು ಮುಂದುವರೆಸಿದೆ. ಇದನ್ನು ದೊಡ್ಡದಾಗಿ ಪ್ರಚುರ ಪಡಿಸಲು ಮತಿಗೇಡಿಗಳ ಮುಂದೆ ಸೋ ಕಾಲ್ಡ್ ಮಾಧ್ಯಮಗಳು ಮೈಕ್ ಹಿಡಿದು, ವಿಷಕಾರಲು ತಮ್ಮ ಚಾನೆಲ್‌ಗಳಲ್ಲಿ ಅವರಿಗಾಗಿ ಉತ್ತಮ ವೇದಿಕೆ ನಿರ್ಮಾಣ ಮಾಡಿಕೊಟ್ಟಿವೆ. ಹಾಗೇ ನೋಡುವುದಾದರೆ ಬಿಜೆಪಿ ನಾಯಕರ ಡಿಎನ್‌ಎಯಲ್ಲೆ ಅಂತಹದೊಂದು ಅಂಶವಿದೆ. ಯಾಕೆಂದರೆ ಅದರ ಮಾತೃಸಂಸ್ಥೆ ಆರ್‌ಎಸ್‌ಎಸ್ ಮನುಸ್ಮೃತಿಯ ಮೂಲಕ ಅದನ್ನು ಚೆನ್ನಾಗಿ ಪಾಲಿಸಿಕೊಂಡು ಬಂದಿದೆ.
ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ವಕ್ತಾರೆ ಮಾಳವಿಕ ಅವಿನಾಶ್ ರಾಜ್ಯದ ಯಾವುದೇ ಮೂಲೆಯಲ್ಲಿ ಒಂದು ಹೆಣ್ಣಿಗೆ ಅನ್ಯಾಯವಾದಾಗ ಧ್ವನಿ ಎತ್ತದವರು ದಸರಾ ಉದ್ಘಾಟನೆ ವಿಚಾರದಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಬಾನು ಮುಷ್ತಾಕ್ ನಮ್ಮಂತೆ ಹೆಣ್ಣು ಕುಲಕ್ಕೆ ಸೇರಿದವರು ಎಂದು ಮನಗಾಣದೆ ಧರ್ಮ ದೃಷ್ಟಿಯಿಂದ ತೇಜೋವಧೆ ಮಾಡುತ್ತಿದ್ದಾರೆ.
ದಸರಾ ಉದ್ಘಾಟನೆಯನ್ನು ಬಾನು ಮುಷ್ತಾಕ್ ಮಾಡಬಾರದೆಂದು ಹೈಕೋರ್ಟ್ ನಿಂದ ಸ್ಟೇ ತರಲು ಮುಂದಾಗಿರುವ ಪ್ರತಾಪ್ ಸಿಂಹನಿಗೆ ಇಂತಹ ಸ್ಟೇ ಗಳು ಹೊಸದೇನಲ್ಲ. 2019 ರಲ್ಲಿ ಯುವತಿಯೊಡನೆ ಸೆಕ್ಸ್ ಚಾಟ್ ಆಂಡ್ ಆಡಿಯೋ ಬಿಡುಗಡೆಯಾಗಿ ಸಿಕ್ಕಿಬಿದ್ದಾಗ, ಮಾಧ್ಯಮಗಳಿಗೆ ಕೋರ್ಟ್ ನಿಂದ ಸ್ಟೇ ತಂದಿದ್ದನ್ನು ಈ ರಾಜ್ಯದ ಜನರು ಗಮನಿಸಿದ್ದಾರೆ. ಯದುವೀರ್ ಒಡೆಯರ್ ವಿಚಾರವಂತೂ ಹೇಳತೀರದು. ಅವರಲ್ಲಿ ಮೈಸೂರು ಸಂಸ್ಥಾನದ ಇತಿಹಾಸ ಬಗೆಗಿನ ಕೊರತೆ ಎದ್ದು ಕಾಣುತ್ತಿದೆ. ಅವರು ಬಿಜೆಪಿ ತೊಗಲು ಗೊಂಬೆಯಾಗದೆ ನಾಲ್ವಡಿಯವರ ಆಶಯಗಳನ್ನು ಇನ್ನಷ್ಟು ಚೆನ್ನಾಗಿ ಅರಿತರೆ ಘನತೆಯಿಂದ ಬದುಕಬಹುದಾಗಿದೆ.
ಬರೀ ಧರ್ಮ, ದೇವರು, ಹಿಂದೂ, ಮುಸ್ಲಿಂ ಎಂಬ ಕಂದಾಚಾರದಿಂದ ಮತಗಳಿಕೆಯ ಹಿಂದೆ ಬಿದ್ದಿರುವ ಇಂದಿನ ರಾಜಕೀಯ ಪಕ್ಷಗಳು ಈ ಮಣ್ಣಿನ, ಇಲ್ಲಿನ ಜನರ ಕರುಳಿನ ಕೂಗಿಗೆ ಕಿವುಡಾಗಿದ್ದಾರೆ. ಧರ್ಮ ಎಂದು ಬೊಬ್ಬೆ ಹೊಡೆಯುವವರು ಒಂದು ಸಮುದಾಯ, ಒಂದು ಕುಟುಂಬದ ಸಾವು, ಒಂದು ಹೆಣ್ಣಿನ ತೇಜೋವಧೆಯ ಬಗ್ಗೆ ಮಾತೃ ವಾತ್ಸಲ್ಯ ತೋರದೆ ಫ್ಯೂಡಲಿಸ್ಟ್ ಹಾಗೂ ಅಧಿಕಾರಶಾಹಿಗಳಿಗೆ ಶರಣಾಗತಿಯಾದಂತಿದೆ. ಧರ್ಮ, ದೇವರು, ಸತ್ಯ, ನ್ಯಾಯ ಉಳ್ಳವರ ಮನೆಯ ಕಾವಲು ನಾಯಿಯಾಗಿದೆ.
ಆಕಾಶ್.ಆರ್.ಎಸ್
ಪತ್ರಕರ್ತ
ಇದನ್ನೂ ಓದಿ- http://ಒಳ ಮೀಸಲಾತಿ ಒಡೆದ ಮನಸುಗಳಾಗದಿರಲಿ…https://kannadaplanet.com/may-internal-reservations-not-lead-to-broken-hearts/