ನೈತಿಕತೆಯ ಪಾತಾಳ ಕುಸಿತ ಅವನತಿಯ ಸಂಕೇತ

Most read

ಇನ್ನು ಕುಸಿಯಲಾಗದಷ್ಟು ತಳಮಟ್ಟವನ್ನು ತಲುಪಿರುವ ರಾಜ್ಯ ರಾಜಕಾರಣ-ಸಿನೆಮಾ-ಅಧ್ಯಾತ್ಮ ಮತ್ತು ವಿಶಾಲ ಸಮಾಜ, ಈ  ಪಾತಾಳದಿಂದ ಹೊರಬಂದರೆ ಸಾಕಾಗಿದೆ. ಇಲ್ಲವಾದರೆ ವರ್ತಮಾನವೂ ನಮ್ಮನ್ನು ಕ್ಷಮಿಸುವುದಿಲ್ಲ, ಭವಿಷ್ಯದ ತಲೆಮಾರು ನೆನಪಿಸಿಕೊಳ್ಳುವುದೂ ಇಲ್ಲ. ಈ ಕನಿಷ್ಠ ಎಚ್ಚರಿಕೆಯಾದರೂ ಸಮಾಜದಲ್ಲಿದ್ದರೆ ಸಾಕು – ನಾ ದಿವಾಕರ, ಚಿಂತಕರು.

ಭಾರತದ ಅಧಿಕಾರ ರಾಜಕಾರಣ ಮೌಲ್ಯರಹಿತವಾಗಿ ಬೆತ್ತಲಾಗುತ್ತಿದೆ ಸಮಾಜ ಮೌನವಾಗಿದೆ

ಒಂದು ಕಾಲದಲ್ಲಿ ಮೌಲ್ಯಾಧಾರಿತ ರಾಜಕಾರಣಕ್ಕೆ ತವರುಮನೆ ಆಗಿದ್ದ ಕರ್ನಾಟಕ ಈಗ ನಡೆಯುತ್ತಿರುವ ಹಾದಿಯನ್ನು ನೋಡಿದರೆ, ಜನಪ್ರತಿನಿಧಿಗಳು ʼಮೌಲ್ಯʼ ಎಂಬ ಪದವನ್ನೇ ಅಪಭ್ರಂಶಗೊಳಿಸಿದ್ದಾರೇನೋ ಎನಿಸುತ್ತದೆ. ಸಮಾಜದ ಹಿರಿಯ ನಾಗರಿಕರು ಒಂದು ಕಡೆ ಶಿಕ್ಷಣದಲ್ಲಿ ಮೌಲ್ಯಗಳನ್ನು ಬೋಧಿಸುವ ಬಗ್ಗೆ ಯೋಚಿಸುತ್ತಿದ್ದು, ಪ್ರಾಥಮಿಕ ಹಂತದಿಂದಲೇ ಒಂದು ಪಠ್ಯಕ್ರಮವಾಗಿ ಮೌಲ್ಯಗಳನ್ನು ಅಳವಡಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಮತ್ತೊಂದು ಬದಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಪ್ರಭಾವಿಸುವ ಮತ್ತು ವಿಶಾಲ ಸಮಾಜವನ್ನು ನಿರ್ದೇಶಿಸುವ ರಾಜಕೀಯ ವ್ಯವಸ್ಥೆ ಮೌಲಿಕವಾಗಿ ತನ್ನ ಅಂತಃಸತ್ವವನ್ನೇ ಕಳೆದುಕೊಂಡಿದ್ದು, ನೈತಿಕತೆಯ ಪಾತಾಳ ಕುಸಿತಕ್ಕೆ ಸಾಕ್ಷಿಯಾಗುತ್ತಿದೆ. ಮಿಲೆನಿಯಂ ಮಕ್ಕಳು, ಅಂದರೆ 20ರ ಹರೆಯುದ ಒಂದು ಸಮಾಜವು, ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಮಾನವೀಯ ರೀತಿ ನೀತಿಗಳಿಗಾಗಿ ಹಾತೊರೆಯುತ್ತಿರುವಾಗ, ಕರ್ನಾಟಕ ರಾಜಕಾರಣವು ಹನಿಟ್ರ್ಯಾಪ್‌ನಂತಹ ಹಗರಣಗಳಲ್ಲಿ ಸಿಲುಕಿರುವುದು ಸಾಮಾಜಿಕ ಅವನತಿಯ ಸಂಕೇತವಾಗಿದೆ.

ಒಂದು ಕಾಲದಲ್ಲಿ ಸಮಾಜಕ್ಕೆ ಸುಸಂದೇಶವನ್ನು ರವಾನಿಸುವಂತಹ ಚಲನಚಿತ್ರಗಳಿಗೆ ಹೆಸರಾಗಿದ್ದ ಕರ್ನಾಟಕದ ಚಿತ್ರರಂಗ, ಸ್ಯಾಂಡಲ್‌ವುಡ್‌ ಎಂಬ ಹೆಸರನ್ನೇ ಹೊತ್ತಿದ್ದರೂ, ಸೃಜನಶೀಲತೆಯಿಲ್ಲದ ರಜತಪರದೆಯ ಕಥಾಹಂದರಗಳು, ಜಡಗಟ್ಟಿದ ಮೌಲ್ಯಗಳನ್ನೇ ಜನರ ಮುಂದಿರಿಸುತ್ತಾ, ದುರ್ಗಂಧ ಸೂಸುತ್ತಿವೆ. ಸಿನೆಮಾ ಹೀರೋಗಳನ್ನು ನೋಡಿ ʼನಾನೂ ಇವನಂತಾಗಬೇಕು ʼ ಎಂದೋ, ಖಳನಾಯಕನ ಪಾತ್ರ ನೋಡಿ ʼ ಇಂತಹ ವ್ಯಕ್ತಿ ಮಾತ್ರ ಆಗಬಾರದು ʼ ಎಂದು ಯೋಚಿಸುತ್ತಿದ್ದ ಕಾಲವೂ ಒಂದಿತ್ತು ಎಂದರೆ, ಮಿಲೆನಿಯಂ ಮಕ್ಕಳಿಗೆ ಅಚ್ಚರಿಯಾಗಬಹುದು. ಏಕೆಂದರೆ ಸಾಮಾಜಿಕವಾಗಿ ಆಳವಾದ ಪ್ರಭಾವ ಬೀರುವ ಈ ಸಂವಹನ ಮಾಧ್ಯಮ ಇಂದು ಅತ್ಯಾಚಾರ, ಮಹಿಳಾ ದೌರ್ಜನ್ಯ, ಕೊಲೆ ಮೊದಲಾದ ಹೀನಾಪರಾಧಗಳ ನೆಲೆಯಾಗಿದೆ. ಡಾ. ರಾಜ್‌ ಒಂದು ದಂತಕಥೆಯಾಗಿ ಮತ್ತೆ ಮತ್ತೆ ನಮನ್ನು ಕಾಡುತ್ತಲೇ ಇರುತ್ತಾರೆ.

ಈಗ ನಾವು ಯಾರಿಗೇನು ಕಡಿಮೆ ಎನ್ನುವ ರೀತಿಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಹನಿಟ್ರ್ಯಾಪ್‌ʼ ಆರೋಪಗಳ ಸುಳಿಯಲ್ಲಿ ಸಿಲುಕಿದ್ದಾರೆ. “ ನನ್ನ ಮೇಲೆ ಹನಿಟ್ರ್ಯಾಪ್‌ ನಡೆದಿರುವುದು ನಿಜ. ಅದನ್ನು ಹೇಳಿಕೊಳ್ಳೋಕೆ ನನಗೆ ನಾಚಿಕೆಯೇನೂ ಇಲ್ಲ, ನಾನೇನು ಸತ್ಯ ಹರಿಶ್ಚಂದ್ರನೂ ಅಲ್ಲ ಶ್ರೀರಾಮಚಂದ್ರನೂ ಅಲ್ಲ ” (ಪ್ರಜಾವಾಣಿ 21-3-2025) ಎಂದು ಸಚಿವ ರಾಜಣ್ಣ ಹೇಳಿರುವುದು ಅವರ ಪ್ರಾಮಾಣಿಕತೆಯನ್ನು ಸೂಚಿಸುತ್ತದೆಯೇ ? ಆದರೆ ದುಷ್ಟತನವನ್ನೂ ಹೀಗೆ ಸಾರ್ವಜನಿಕವಾಗಿ ಹೇಳಿಕೊಳ್ಳುವ ಮೂಲಕ ರಾಜಕೀಯ ನಾಯಕರು ಸಮಾಜಕ್ಕೆ ಉಂಟುಮಾಡುವ ಅಪಾಯದ ಬಗ್ಗೆ ಅರಿವು ಹೊಂದಿದ್ದಾರೆಯೇ ? ಈಗಾಗಲೇ ಹಾಸನದ ಪೆನ್‌ಡ್ರೈವ್‌ ಹಗರಣ ಕರ್ನಾಟಕದ ಘನತೆಯನ್ನು ಹರಾಜು ಹಾಕಿದ್ದಾಗಿದೆ. ಅಲ್ಲಿ ಸಾಮೂಹಿಕವಾಗಿ ನಡೆದ ಅಪರಾಧಗಳು, ಹನಿಟ್ರ್ಯಾಪ್‌ ಮೂಲಕ ವ್ಯಕ್ತಿಗತ ನೆಲೆಯಲ್ಲಿ ನಡೆಯುತ್ತದೆ. ಬಾಹ್ಯ ಸಮಾಜಕ್ಕೆ ಇದರಲ್ಲಿ ವ್ಯತ್ಯಾಸವೇನೂ ಕಾಣುವುದಿಲ್ಲ ಅಲ್ಲವೇ ?

ಕರ್ನಾಟಕದ ಅಧಿಕಾರ ರಾಜಕಾರಣ ನೈತಿಕವಾಗಿ ಅಧೋಗತಿ ತಲುಪಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಹಾಗೂ ಹಾಲಿ ಕೇಂದ್ರ ಸಚಿವ ಎಚ್.‌ ಡಿ. ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆಯ ಆರೋಪಗಳು ತನಿಖೆಗೊಳಗಾಗಲು ನ್ಯಾಯಾಂಗ ಒತ್ತಡ ಹೇರಬೇಕಾಯಿತು ಎನ್ನುವುದೇ ಈ ಅಧಃಪತನಕ್ಕೆ ಸಾಕ್ಷಿಯಾಗಿ ಕಾಣುವುದಿಲ್ಲವೇ ? ಕೋಟ್ಯಧಿಪತಿ ಉದ್ಯಮಿಗಳ ಆಡುಂಬೊಲವಾಗಿರುವ ವಿಧಾನ ಸೌಧದಲ್ಲಿ ಇಂದಿಗೂ ಕಂಗೊಳಿಸುವ ಕೆಂಗಲ್‌, ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗ್ಡೆ ಮುಂತಾದ ನಾಯಕರ ಭಾವಚಿತ್ರಗಳು ಒಂದು ರೀತಿಯಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಅಣಕಿಸುತ್ತಿರುವಂತೆ ಕಾಣುತ್ತದೆ. ಸಾಲದ್ದಕ್ಕೆ ವಿಧಾನಸೌಧದ ಮುಂದೆ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಪ್ರತಿಮೆಯೂ ಇದೆ. ದಿನನಿತ್ಯ ಇದನ್ನು ನೋಡುತ್ತಲೇ ಒಳಗೆ ಹೋಗುವ ಪ್ರತಿನಿಧಿಗಳಿಗೆ, ಬಾಬಾಸಾಹೇಬರು ಮತ್ತೆಮತ್ತೆ ನೆನಪಿಸುತ್ತಿದ್ದ ಸಾಂವಿಧಾನಿಕ ನೈತಿಕತೆಯ ಅರ್ಥವಾದರೂ ಗೊತ್ತಿದೆಯೇ ?

ಶಾಸನ ಸಭೆ

ಆದರೆ ಈ ʼಶಾಸನ ಸಭೆʼ ಎನ್ನುವ ಒಂದು ಪವಿತ್ರ ತಾಣವೇ ಇಂದು ಭ್ರಷ್ಟರ, ಲಾಭಕೋರ ಉದ್ಯಮಿಗಳ, ವಿಷಯ ಲಂಪಟರ ಮತ್ತು ಸಿರಿವಂತರ ಆಡುಂಬೊಲವಾಗಿದೆ. ರಾಜಕೀಯ ನಾಯಕತ್ವ ಸಮಾಜದೊಳಗಿಂದಲೇ ಉಗಮಿಸುವ ಒಂದು ಮಾನವ ಶಕ್ತಿ. ಅದು ಸಮಾಜದ ಎಲ್ಲ ಅವಲಕ್ಷಣಗಳನ್ನೂ ಮೀರಿ ಒಂದು ಉದಾತ್ತ ಹಾದಿ ತೋರುವ ವ್ಯಕ್ತಿತ್ವದ ಸಂಕೇತವಾಗಿರುವುದು ಅಪೇಕ್ಷಿತ.  ಪ್ರಾಮಾಣಿಕತೆ-ಸತ್ಯಸಂಧತೆ-ಪ್ರಾಮಾಣಿಕತೆ-ಪಾರದರ್ಶಕತೆ ಮುಂತಾದ ಔದಾತ್ಯಗಳನ್ನು ಬದಿಗಿಟ್ಟು ನೋಡಿದಾಗಲೂ, ವಿಶಾಲ ಸಮಾಜದ ನಡುವೆ ಸದಾ ಸಕ್ರಿಯವಾಗಿರುವ ಮತ್ತು ಅದನ್ನು ನಿಯಂತ್ರಿಸುವ ರಾಜಕೀಯ ನಾಯಕತ್ವ ಕನಿಷ್ಠ ಆದರಣೀಯವಾಗಿಯಾದರೂ ಇರಬೇಕಾದ್ದು ನಾಗರೀಕತೆಯ ಲಕ್ಷಣ. ಇಂತಹ ಒಂದು ವ್ಯಕ್ತಿತ್ವವನ್ನೂ ಸಮಕಾಲೀನ ರಾಜಕಾರಣದಲ್ಲಿ ಕಾಣಲಾಗುವುದಿಲ್ಲ. ಸ್ವಾತಂತ್ರ್ಯದ ಆರಂಭಿಕ ದಿನಗಳಲ್ಲಿ ಅಲ್ಪಸ್ವಲ್ಪ ಕೊರತೆಗಳೊಂದಿಗೆ ಗುರುತಿಸಬಹುದಾಗಿದ್ದ ಇಂತಹ ನಾಯಕತ್ವಗಳು ಈಗ ದಂತಕತೆಗಳಾಗಿ ನಮ್ಮ ನಡುವೆ ಜೀವಂತವಾಗಿವೆ.

ಕೋಟ್ಯಧಿಪತಿಗಳ ಆಡುಂಬೊಲವಾಗಿರುವ ದೇಶದ ವಿಧಾನಸಭೆಗಳಲ್ಲಿ ಸಾರ್ವಭೌಮ  ಜನತೆಯನ್ನು ಪ್ರತಿನಿಧಿಸುವ 4,092 ಜನಪ್ರತಿನಿಧಿಗಳ ಪೈಕಿ 1,861 ಶಾಸಕರು (ಶೇ. 45) ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ. 1,205 ಶಾಸಕರು (ಶೇ. 29) ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಇತ್ತೀಚಿನ ಎಡಿಆರ್‌ ( Association of Democratic Rights) ಸಮೀಕ್ಷೆ ಹೇಳುತ್ತದೆ. ಕರ್ನಾಟಕದ ವಿಧಾನಸಭೆಯಲ್ಲಿ 31 ಶತಕೋಟ್ಯಧಿಪತಿಗಳಿದ್ದಾರೆ ಎಂದು ಹೇಳಲಾಗಿದೆ. (ವಿವರಗಳಿಗಾಗಿ ಪ್ರಜಾವಾಣಿ ಮಾರ್ಚ್‌ 21 ನೋಡಿ). ಮಾಜಿ ಮುಖ್ಯಮಂತ್ರಿ , ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ದ ನಡೆಯುತ್ತಿರುವ ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಹೈಕೋರ್ಟ್‌ “ ಬಡವರು ಐದು ಅಡಿ ಒತ್ತುವರಿ ಮಾಡಿದರೆ ಓಡೋಡಿ ಬಂದು ತೆರವು ಮಾಡುತ್ತೀರಿ, ಬುಲ್ಡೋಜರ್‌ ತೆಗೆದುಕೊಂಡು ಹೋಗಿ ಮನೆ ಒಡೆದು ಹಾಕ್ತೀರಿ, ಭಿಕ್ಷುಕರನ್ನೂ ಬಿಡುವುದಿಲ್ಲ, ಪ್ರಭಾವಿಗಳು ಒತ್ತುವರಿ ಮಾಡಿದರೆ ಸದರವೇ ”ಎಂದು ಕೇಳಿರುವುದು ( ಪ್ರಜಾವಾಣಿ 20 ಮಾರ್ಚ್‌ 2025) ಏನನ್ನು ಸೂಚಿಸುತ್ತದೆ  ?

ಕರ್ನಾಟಕದ ಸಮಾಜವನ್ನು ಪ್ರತಿಬಿಂಬಿಸುವ ಎಲ್ಲ ಕ್ಷೇತ್ರಗಳೂ ನೈತಿಕತೆ ಕಳೆದುಕೊಂಡು ಭ್ರಷ್ಟವಾಗಿವೆ. ಅಧ್ಯಾತ್ಮ ಮಠಗಳು, ದೈವ ಸನ್ನಿಧಿಗಳು, ಅಧಿಕಾರ ಕೇಂದ್ರಗಳು, ಶೈಕ್ಷಣಿಕ ನೆಲೆಗಳು, ಚಲನಚಿತ್ರ ರಂಗ ಹೀಗೆ ಆರೋಗ್ಯ ಸಮಾಜಕ್ಕೆ ಚಿಕಿತ್ಸಕವಾಗಬೇಕಿರುವ ಎಲ್ಲ ವಲಯಗಳಲ್ಲೂ ಅತ್ಯಾಚಾರ, ಕೊಲೆ, ಮಹಿಳಾ ದೌರ್ಜನ್ಯ, ಹಣಕಾಸು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮತ್ತೊಂದು ಆಧ್ಯಾತ್ಮಿಕ ಕೇಂದ್ರದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪಗಳು ನ್ಯಾಯಾಲಯದ ವಿಚಾರಣೆಗೊಳಪಟ್ಟಿವೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಯಾವುದೇ ಸೀಮೆಗಳಿಲ್ಲ ಎನ್ನುವುದನ್ನು ಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳು ನಿರೂಪಿಸುವಾಗಲೇ, ನಮ್ಮ ರಾಜಕೀಯ ಕ್ಷೇತ್ರವೂ ʼ ನಾವು ಯಾರಿಗೇನು ಕಡಿಮೆ ʼ ಎನ್ನುವಂತೆ ಹಾಸನದ ಪೆನ್‌ ಡ್ರೈವ್‌ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಈ ಕಾಮಾತಿರೇಕ ಮತ್ತು ಪುರುಷಾಧಿಪತ್ಯದ ಮತ್ತೊಂದು ಆಯಾಮವಾಗಿ ಈಗ ʼಹನಿಟ್ರ್ಯಾಪ್‌ʼ ಪ್ರಕರಣ ತಲೆದೋರಿದೆ. ಜನಪ್ರತಿನಿಧಿಗಳ ವ್ಯಕ್ತಿಗತ ಅನೈತಿಕತೆಯನ್ನು ಬಿಂಬಿಸುವ ಈ ಪ್ರಕರಣಗಳನ್ನು ಇಡೀ ರಾಜ್ಯ ಸಮಸ್ಯೆ ಎಂದು ಬಿಂಬಿಸುವಂತೆ ವಿಧಾನಸೌಧದ ಸದನದಲ್ಲಿ ಚರ್ಚೆ ಮಾಡುವುದೇ ಚೋದ್ಯ ಎನಿಸುವುದಿಲ್ಲವೇ

ಈಗ ವ್ಯಕ್ತಿಗತವಾದ ತಮ್ಮ ಅನೈತಿಕತೆಯನ್ನು ಸಾರ್ವತ್ರೀಕರಿಸುವ ನಿಟ್ಟಿನಲ್ಲಿ ರಾಜಕೀಯ ನಾಯಕರು   ʼಹನಿಟ್ರ್ಯಾಪ್‌ʼ ಪ್ರಕರಣವನ್ನು ಸಮಸ್ತ ಕನ್ನಡಿಗರ ಸಮಸ್ಯೆ ಎಂಬಂತೆ ಬಿಂಬಿಸುತ್ತಿದ್ದಾರೆ. ಪರಸ್ಪರ ದೋಷಾರೋಪಣೆ ಮಾಡುತ್ತಾ ನಡುಸಂತೆಯಲ್ಲಿ ಬೆತ್ತಲಾಗಿರುವಾಗ, ಇದನ್ನು ಚರ್ಚೆ ಮಾಡಲು  ವಿಧಾನಸೌಧ ಬಳಕೆಯಾಗುತ್ತಿರುವುದು ಶತಮಾನದ ದುರಂತ.  ಡಾ. ರಾಜ್‌ ಅವರಂತಹ ವ್ಯಕ್ತಿಯನ್ನೇ ಕಾಣಲಾಗದ ಸಮಾಜದಲ್ಲಿ ಪುರಾಣದ ಶ್ರೀರಾಮ-ಹರಿಶ್ಚಂದ್ರರನ್ನು ಊಹಿಸಿಕೊಳ್ಳುವುದಾದರೂ ಹೇಗೆ ? ಲಿಂಗ ಸೂಕ್ಷ್ಮತೆ-ಮಹಿಳಾ ಸಂವೇದನೆಯ ಕೊರತೆ ನ್ಯಾಯಾಂಗದಲ್ಲೂ ಇದೆ ಎಂದು ಸಾಕ್ಷೀಕರಿಸುವಂತಹ ತೀರ್ಪುಗಳು ಹೇರಳವಾಗಿವೆ. ಇತ್ತೀಚಿನ ಪ್ರಕರಣವೊಂದರ  ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಈಗ ಚರ್ಚೆಗೊಳಗಾಗುತ್ತಿದೆ. 

ಇನ್ನು ಕುಸಿಯಲಾಗದಷ್ಟು ತಳಮಟ್ಟವನ್ನು ತಲುಪಿರುವ ರಾಜ್ಯ ರಾಜಕಾರಣ-ಸಿನೆಮಾ-ಅಧ್ಯಾತ್ಮ ಮತ್ತು ವಿಶಾಲ ಸಮಾಜ, ಈ  ಪಾತಾಳದಿಂದ ಹೊರಬಂದರೆ ಸಾಕಾಗಿದೆ. ಇಲ್ಲವಾದರೆ ವರ್ತಮಾನವೂ ನಮ್ಮನ್ನು ಕ್ಷಮಿಸುವುದಿಲ್ಲ, ಭವಿಷ್ಯದ ತಲೆಮಾರು ನೆನಪಿಸಿಕೊಳ್ಳುವುದೂ ಇಲ್ಲ. ಈ ಕನಿಷ್ಠ ಎಚ್ಚರಿಕೆಯಾದರೂ ಸಮಾಜದಲ್ಲಿದ್ದರೆ ಸಾಕು.

ನಾ ದಿವಾಕರ

ಚಿಂತಕರು

ಇದನ್ನೂ ಓದಿ- ಬೃಹತ್ ಬೆಂಗಳೂರು ಪ್ರಾಧಿಕಾರ ಮಸೂದೆ – 2024 | ಜನರ ನಿರೀಕ್ಷೆಗಳನ್ನು ಈಡೇರಿಸುತ್ತದೆಯೇ?

More articles

Latest article