ಕಲೆ ಸಾಹಿತ್ಯ ಭಾಷೆಗಳನ್ನು ಉಳಿಸಿ ಬೆಳೆಸುವುದು ಆಳುವ ಸರಕಾರದ ಜವಾಬ್ದಾರಿಯಾಗಿದೆ. ತನ್ನ ವಿಳಂಬ ಧೋರಣೆಯನ್ನು ಬದಿಗಿಟ್ಟು ಈ ಕೂಡಲೇ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಕಾತಿಗಳನ್ನು ಮಾಡಿ ತನ್ನ ಹೊಣೆಗಾರಿಕೆಯನ್ನು ಹಾಲಿ ಸರಕಾರ ನಿಭಾಯಿಸಬೇಕೆಂಬುದು ಕನ್ನಡ ನಾಡಿನ ಸಾಂಸ್ಕೃತಿಕ ಲೋಕದವರ ಒತ್ತಾಯವಾಗಿದೆ – ಶಶಿಕಾಂತ ಯಡಹಳ್ಳಿ
ಕರ್ನಾಟಕ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ಪ್ರಶಸ್ತಿಗಳು ನಾಲ್ಕು ವರ್ಷದಿಂದ ಬಾಕಿಯಾಗಿದ್ದವು. 2020-21 ಹಾಗೂ 2021-22 ನೇ ಸಾಲಿನ ಪ್ರಶಸ್ತಿಗಳು ಘೋಷಣೆಯಾಗಿ ಮೂರ್ನಾಲ್ಕು ವರ್ಷಗಳು ಕಳೆದರೂ ಬಾಕಿಯಾದ 31 ಪ್ರಶಸ್ತಿಗಳನ್ನು ಪ್ರದಾನ ಮಾಡದೇ ನಿರ್ಲಕ್ಷಿಸಲಾಗಿತ್ತು. ಹಾಗೂ 2022- 23 ನೇ ಸಾಲಿನ ಪ್ರಶಸ್ತಿಗಳ ಆಯ್ಕೆ ಪ್ರಯತ್ನವನ್ನೇ ಮಾಡಲಿಲ್ಲ. ಈಗ 2022-23 ಹಾಗೂ 2023-24 ನೇ ಸಾಲಿನ ಪ್ರಶಸ್ತಿಗಳಿಗಾಗಿ ಸಾಧಕರನ್ನು ಆಯ್ಕೆ ಮಾಡಲು ಸಮಿತಿ ರಚಿಸಿ ಸಂಭವನೀಯರ ಪಟ್ಟಿಯನ್ನೂ ಸಿದ್ದಪಡಿಸಲಾಗಿತ್ತಾದರೂ ಘೋಷಣೆ ಮಾಡಿರಲಿಲ್ಲ.
ಪ್ರಶಸ್ತಿ ಪ್ರದಾನ ಮಾಡುವಲ್ಲಾದ ವಿಪರೀತ ವಿಳಂಬವನ್ನು ಪ್ರಶ್ನಿಸಿ ಇತ್ತೀಚೆಗೆ ನಾನು ಲೇಖನವನ್ನೂ ಬರೆದಿದ್ದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಪ್ರಕಟಿತ ಲೇಖನವನ್ನು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರುಗಳಿಗೂ ಕಳುಹಿಸಲಾಗಿತ್ತು. ಬೇರೆ ಬೇರೆ ಕಡೆಗಳಿಂದಲೂ ಸರಕಾರದ ಮೇಲೆ ಒತ್ತಡ ಬರತೊಡಗಿತು. ಈಗಾಗಲೇ ಸಿದ್ದವಾಗಿರುವ, ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆ ಮಾಡಲು ಸರಕಾರವು ಮೀನಾಮೇಷ ಎಣಿಸುತ್ತಿತ್ತು.
ಅಂತಹ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನದಲ್ಲಾಗಿರುವ ವಿಳಂಬದ ಕುರಿತು ಲೇಖನ ಪ್ರಕಟವಾಯಿತು. ಈ ಲೇಖನದ ಪರೋಕ್ಷ ಪ್ರಭಾವವೋ, ಕಾಕತಾಳೀಯವೋ, ಪೂರ್ವನಿರ್ಧಾರಿತವೋ, ಸಾಂಸ್ಕೃತಿಕ ಲೋಕದ ಒತ್ತಡವೋ ಗೊತ್ತಿಲ್ಲ. ಅಂತೂ ಇಂತೂ ಎರಡು ವರ್ಷಗಳ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು. ಜೊತೆಗೆ ಘೋಷಿಸಿ ಪ್ರದಾನ ಮಾಡದೇ ಇರುವ ಪ್ರಶಸ್ತಿಗಳಿಗೂ ಮುಕ್ತಿ ದೊರಕಿಸುವ ದಿನವೂ ನಿಗದಿಯಾಯ್ತು.
ಜನವರಿ 31 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಎಲ್ಲಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜ.25 ರಂದು ಅಧಿಕೃತ ಆದೇಶ ಹೊರಡಿಸಿತು.
ಕಾಲಮಿತಿಯಲ್ಲಿ ಸಾಧಕರಿಗೆ ಪ್ರಶಸ್ತಿ ಕೊಡಬೇಕು ಎನ್ನುವುದನ್ನು ಕಾಡಿ ಬೇಡಿ ಒತ್ತಾಯಿಸಿ ಹೇಳಬೇಕಾದ ಅನಿವಾರ್ಯತೆಯನ್ನು ಸರಕಾರಗಳು ಸೃಷ್ಟಿ ಮಾಡಿವೆ. ಸರಕಾರ ಯಾವುದೇ ಪಕ್ಷದ್ದಾಗಿರಲಿ ಸಾಂಸ್ಕೃತಿಕ ಕ್ಷೇತ್ರದ ವಾರ್ಷಿಕ ಪ್ರಶಸ್ತಿಗಳು ಆಯಾ ವರ್ಷದಲ್ಲೇ ಘೋಷಣೆಯಾಗಿ ಪ್ರದಾನ ಮಾಡುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ತವ್ಯವಾಗಿದೆ. ಅದಕ್ಕಾಗಿಯೇ ಬಜೆಟ್ ನಲ್ಲಿ ಇಲಾಖೆಗೆ ಅನುದಾನ ಮಂಜೂರಾಗಿರುತ್ತದೆ. ಇಲಾಖೆ ಮತ್ತು ಸರಕಾರ ಕಾಲಮಿತಿಯಲ್ಲಿ ಪ್ರಶಸ್ತಿ ಕೊಡಬೇಕಾದ ತನ್ನ ಕರ್ತವ್ಯವನ್ನು ನಿರ್ಲಕ್ಷಿಸಿದಾಗ ಅದಕ್ಕಾಗಿ ಒತ್ತಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಪ್ರಶಸ್ತಿಗಳನ್ನು ಘೋಷಿಸಿ ಕೊಡದೇ ಸತಾಯಿಸಿದಾಗ ಸಾಧಕರ ಮಾನಸಿಕ ವೇದನೆ ಅಸಹನೀಯ. ಪ್ರಶಸ್ತಿಯ ನಿರೀಕ್ಷೆಯಲ್ಲಿಯೇ ನೊಂದು ಮರಣ ಹೊಂದಿದ ಸಾಧಕರೂ ಇದ್ದಾರೆ. ಸರಕಾರಗಳ ಈ ವಿಳಂಬ ನೀತಿ ಅಕ್ಷಮ್ಯ. ಸರಕಾರ ಯಾವುದೇ ಬಂದರೂ ಪ್ರಶಸ್ತಿಗಳು ಆಯಾ ವರ್ಷವೇ ಘೋಷಣೆ ಮಾಡಿ ಪ್ರದಾನ ಮಾಡಬೇಕು ಎನ್ನುವ ನಿಯಮ ಜಾರಿಮಾಡಬೇಕಿದೆ.
ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಆದೇಶವೂ ಆದ ಸಾಂಸ್ಕೃತಿಕ ನೀತಿಯಲ್ಲಿ ಈ ನಿಯಮ ಕಡ್ಡಾಯವಾಗಿದೆ. ಆದರೆ ಸಾಂಸ್ಕೃತಿಕ ನೀತಿ ಆದೇಶವಾಗಿ ಆರು ವರ್ಷಗಳೇ ಕಳೆದರೂ ಇನ್ನೂ ಅನುಷ್ಠಾನಕ್ಕೆ ಬರದೇ ಇರುವುದೇ ಈ ರೀತಿಯ ವಿಳಂಬಗಳಿಗೆ ಕಾರಣವಾಗಿದೆ. ಈಗಲಾದರೂ ಈ ಸರಕಾರ ಮುತುವರ್ಜಿ ವಹಿಸಿ ತಾನೇ ಆರು ವರ್ಷಗಳ ಹಿಂದೆ ಆದೇಶ ಮಾಡಿದ ಸಾಂಸ್ಕೃತಿಕ ನೀತಿಯನ್ನು ಜಾರಿಗೆ ತರುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಬೇಕಿದೆ.
ಕಳೆದ ಒಂದು ವರ್ಷದಿಂದ ಸಂಸ್ಕೃತಿ ಇಲಾಖೆಯ ಕೃಪಾಪೋಷಣೆಯಲ್ಲಿ ಬರುವ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷರು ಸದಸ್ಯರ ಆಯ್ಕೆಯನ್ನೇ ಮಾಡಿಲ್ಲ. ರಂಗಸಮಾಜಕ್ಕೆ ಸದಸ್ಯರನ್ನು ನೇಮಿಸಿಲ್ಲ. ಆರೂ ರಂಗಾಯಣಗಳಿಗೆ ನಿರ್ದೇಶಕರ ಆಯ್ಕೆಯಾಗಿಲ್ಲ. ಈ ಎಲ್ಲಾ ಸರಕಾರಿ ಸಂಸ್ಥೆಗಳು ಇದ್ದೂ ಇಲ್ಲದಂತಾಗಿದ್ದು ನಿಷ್ಕ್ರಿಯವಾಗಿವೆ. ಅವುಗಳಿಗೆ ಸೂಕ್ತವಾದವರನ್ನು ಬೇಗನೇ ನೇಮಕ ಮಾಡಿ ಸಾಂಸ್ಕೃತಿಕ ಕ್ಷೇತ್ರದ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸವನ್ನು ಈ ಸರಕಾರ ಶೀಘ್ರವಾಗಿ ಮಾಡಬೇಕಾಗಿದೆ. ಈ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸರಕಾರಿ ಸಂಸ್ಥೆಗೆ ನೇತಾರರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವ ನಿರೀಕ್ಷೆ ಮುಂದೂಡುತ್ತಲೇ ಬಂದಿದೆ. ಇನ್ನೂ ವಿಳಂಬವಾದರೆ ಈ ಸರಕಾರವೂ ಸಾಂಸ್ಕೃತಿಕ ಲೋಕದ ವಿರೋಧಿ ಎಂಬುದು ಖಾತ್ರಿಯಾಗುತ್ತದೆ.
ಇದನ್ನೂ ಓದಿ-ಪದ್ಮಶ್ರೀ ಸೋಮಣ್ಣ ಮತ್ತು ಪ್ರಶಸ್ತಿಯ ಸಾಂಕೇತಿಕತೆ
ಕಲೆ ಸಾಹಿತ್ಯ ಭಾಷೆಗಳನ್ನು ಉಳಿಸಿ ಬೆಳೆಸುವುದು ಆಳುವ ಸರಕಾರದ ಜವಾಬ್ದಾರಿ ಯಾಗಿದೆ. ತನ್ನ ವಿಳಂಬ ಧೋರಣೆಯನ್ನು ಬದಿಗಿಟ್ಟು ಈ ಕೂಡಲೇ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಕಾತಿಗಳನ್ನು ಮಾಡಿ ತನ್ನ ಹೊಣೆಗಾರಿಕೆಯನ್ನು ಹಾಲಿ ಸರಕಾರ ನಿಭಾಯಿಸಬೇಕೆಂಬುದು ಕನ್ನಡ ನಾಡಿನ ಸಾಂಸ್ಕೃತಿಕ ಲೋಕದವರ ಒತ್ತಾಯವಾಗಿದೆ.
ಈಗಾಗಲೇ ಸಂಭಾವ್ಯರ ಆಯ್ಕೆ ಪಟ್ಟಿ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ ತಲುಪಿದೆ. ಅಂತಿಮ ಪಟ್ಟಿಯೂ ಸಿದ್ದವಾಗಿ ಮುಖ್ಯಮಂತ್ರಿಗಳ ಅನುಮತಿಗಾಗಿ ಕಾಯುತ್ತಿದೆ. ಆದರೆ ಘೋಷಣೆ ಮಾಡುವಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ರಾಜಕೀಯ ಕಾರಣಗಳು ಏನೇ ಇರಲಿ, ಸಾಂಸ್ಕೃತಿಕ ಸಂಸ್ಥೆಗಳನ್ನು ಹೀಗೆ ನಿರ್ಲಕ್ಷಿಸದೇ ಇರಲಿ. ತಕ್ಷಣವೇ ಎಲ್ಲಾ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಪದಾಧಿಕಾರಿಗಳ ನೇಮಕಾತಿ ಘೋಷಣೆಯಾಗಲಿ. ಅಕಾಡೆಮಿ ಪ್ರಾಧಿಕಾರಗಳು ಕೊಡಮಾಡುವ ವಾರ್ಷಿಕ ಪ್ರಶಸ್ತಿಗಳೂ ಸಹ ಎರಡು ಮೂರು ವರ್ಷಗಳಿಂದ ಬಾಕಿಯಾಗಿವೆ. ನೇಮಕಾತಿ ಆದ ತಕ್ಷಣ ಅರ್ಹ ಸಾಧಕರನ್ನು ಪ್ರಶಸ್ತಿಗಳಿಗೆ ಅಕಾಡೆಮಿ, ಪ್ರಾಧಿಕಾರಗಳು ಆಯ್ಕೆ ಮಾಡಿ ಪ್ರಧಾನ ಮಾಡಲಿ. ಸಾಧಕರನ್ನು ಗುರುತಿಸಿ ಪ್ರಶಸ್ತಿಗಳ ಮೂಲಕ ಗೌರವಿಸುವುದು ನಾಗರೀಕ ಸಮಾಜ ಹಾಗೂ ಸರಕಾರದ ಜವಾಬ್ದಾರಿ. ಸಂಸ್ಕೃತಿ ಉಳಿದರೆ ನಾಡು ಉಳಿಯುತ್ತದೆ. ಸಂಸ್ಕೃತಿ ಶ್ರೀಮಂತವಾದಷ್ಟೂ ನಾಗರೀಕತೆಗೆ ಅರ್ಥಬರುತ್ತದೆ. ಇದನ್ನೆಲ್ಲಾ ಆಳುವ ಸರಕಾರಗಳು ಹೇಳಿಸಿಕೊಳ್ಳದೇ ಅರ್ಥಮಾಡಿಕೊಂಡು ಈ ನಾಡಿನ ಜನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ, ಪತ್ರಕರ್ತರು