ಸನಾ: ಭಾರತ ಮತ್ತು ಯೆಮೆನ್ ದೇಶಗಳ ಅಧಿಕಾರಿಗಳ ಪ್ರಯತ್ನದ ಫಲವಾಗಿ ಕೇರಳದ ಶುಶ್ರೂಷಕಿ ನಿಮಿಷಾ ಪ್ರಿಯಾ ಅವರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಯೆಮೆನ್ ಸರ್ಕಾರ ರದ್ದುಗೊಳಿಸಿದೆ ಎಂದು ಗ್ಲೋಬಲ್ ಪೀಸ್ ಇನ್‌ಷಿಯೇಟಿವ್ ಸಂಸ್ಥಾಪಕ ಮತ್ತು ಧಾರ್ಮಿಕ ಗುರು ಡಾ. ಕೆ.ಎ. ಪೌಲ್ ಹೇಳಿದ್ದಾರೆ. ಜುಲೈ 16ರಂದು ಮರಣದಂಡನೆಗೆ ನಿಗದಿಯಾಗಿದ್ದ ದಿನಾಂಕವನ್ನು ಯೆಮೆನ್ ಮುಂದೂಡಿತ್ತು.
ಈ ಸಂಬಂಧ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, ಯೆಮೆನ್ ನಾಯಕರ ಪರಿಣಾಮಕಾರಿ ಮತ್ತು ಪ್ರಾರ್ಥನಾಪೂರ್ವಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ನಿಮಿಷ ಪ್ರಿಯಾ ಅವರ ಪ್ರಾಣ ಉಳಿಸಲು ಕಳೆದ ಹತ್ತು ದಿನಗಳಲ್ಲಿ ನಾಯಕರು ಅಪಾರ ಶ್ರಮ ಪಟ್ಟಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲಾ ನಾಯಕರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದರಲ್ಲಿ ಭಾರತದ ಪ್ರಯತ್ನವೂ ಇದೆ. ದೇವರ ದಯೆಯಿಂದ ಪ್ರಿಯ ಬಿಡುಗಡೆಯಾಗಲಿದ್ದಾರೆ. ನಿಮಿಷ ಅವರನ್ನು ಕಾನೂನುಬದ್ಧವಾಗಿ ಮತ್ತು ಸುರಕ್ಷಿತವಾಗಿ ಕರೆದುಕೊಂಡು ಹೋಗಬಹುದಾಗಿದೆ ಎಂದು ಹೇಳಿದ್ದಾರೆ.
ಸನಾ ಜೈಲಿನಲ್ಲಿರುವ ನಿಮಿಷ ಅವರನ್ನು ಒಮಾನ್, ಜೆಡ್ಡಾ, ಈಜಿಪ್ಟ್, ಇರಾನ್ ಅಥವಾ ಟರ್ಕಿಗೆ ಕರೆದೊಯ್ಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಿರುವ ಭಾರತಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಿಯಾ ಅವರ ಪರವಾಗಿ ಯೆಮೆನ್ ನಲ್ಲಿ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ವಕೀಲರನ್ನು ನೇಮಕ ಮಾಡಲಾಗಿದೆ. ಷರಿಯಾ ಕಾನೂನಿನಲ್ಲಿ ಕ್ಷಮೆಗೆ ಇರುವ ಮಾರ್ಗಗಳನ್ನು ಇವರು ಪರಿಶೀಲಿಸಲಿದ್ದಾರೆ. ಇದೊಂದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಎಲ್ಲಾ ಆಯಾಮಗಳಿಂದ ಲಭ್ಯವಿರುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಭಾರತ ಸರ್ಕಾರದ ವಕ್ತಾರ ರಣಧೀರ ಜೈಸ್ವಾಲ್ ಹೇಳಿದ್ದರು.