ಬೆಂಗಳೂರು: ಖಾಸಗಿ ನೀರಿನ ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರದ ಎಲ್ಲ ನಿವಾಸಿಗಳಿಗೂ ಸರಳವಾಗಿ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆರಂಭಿಸಿರುವ ಸಂಚಾರಿ ಕಾವೇರಿ ಮತ್ತು ಸರಳ ಕಾವೇರಿ ಯೊಜನೆಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿದರು.
ವಿಧಾನಸೌಧದ ಎದುರು ನಡೆದ ಸಮಾರಂಭದಲ್ಲಿ ಕಾವೇರಿ ನೀರನ್ನು ಪೂರೈಕೆ ಮಾಡುವ ಟ್ಯಾಂಕರ್ ನೀರನ್ನು ಕುಡಿಯುವ ಮೂಲಕ ಚಾಲನೆ ನೀಡಿದರು. 1000 ರೂ ಪಾವತಿಸಿರುವ ಸಣ್ಣ ಮನೆಯ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡುವ ಮೂಲಕ ಸರಳ ಕಾವೇರಿ ಯೋಜನೆಯನ್ನು ಉದ್ಘಾಟಿಸಿದರು.
ʼಸಂಚಾರಿ ಕಾವೇರಿ’ಯ ಮೂಲಕ ಟ್ಯಾಂಕರ್ ನೀರನ್ನು ಜಲಮಂಡಳಿಯ ವೆಬ್ ಸೈಟ್ ಮತ್ತು ಆ್ಯಪ್ ಮೂಲಕ ಬುಕ್ಕಿಂಗ್ ಮಾಡಬಹುದು. ಬೇಡಿಕೆ ಸಲ್ಲಿಸಿದ 24 ಗಂಟೆಯೊಳಗೆ ಬಿಎಸ್ ಐ ಪ್ರಮಾಣಿತ ಶುದ್ಧ ಕಾವೇರಿ ಕುಡಿಯುವ ನೀರು ಗ್ರಾಹಕರ ಮನೆ ಬಾಗಿಲಿಗೆ ತಲುಪಲಿದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ವಿನೂತನ ಯೋಜನೆಯನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಕಾವೇರಿ ಸಂಪರ್ಕ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸುವುದು ಕಷ್ಟ ಎಂದು ಅಪಾರ್ಟ್ ಮೆಂಟ್ ನಿವಾಸಿಗಳು ಅಳಲು ತೋಡಿಕೊಂಡಿದ್ದರು. ಅವರ ಅನುಕೂಲಕ್ಕಾಗಿ 12 ಕಂತುಗಳ ಮೂಲಕ ಕಾವೇರಿ ಸಂಪರ್ಕ ಶುಲ್ಕವನ್ನು ತುಂಬುವಂತಹ ಸರಳ ಕಾವೇರಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಒಟ್ಟು ಶುಲ್ಕದ ಶೇ. 20 ರಷ್ಟು ಹಣವನ್ನು ಪಾವತಿಸಿ ಕಾವೇರಿ ಸಂಪರ್ಕ ಪಡೆದು, ಬಾಕಿ ಮೊತ್ತವನ್ನು 12 ಕಂತುಗಳಲ್ಲಿ ಪಾತಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ 600 ಚ.ಅಡಿ ಅಳತೆಯಲ್ಲಿ ವಾಸಿಸುವ ಸಣ್ಣ ಮನೆಯವರಿಗೆ ರೂ.₹1000 ಪಾವತಿಸಿ ಕಾವೇರಿ ಸಂಪರ್ಕ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಶಾಸಕರಾದ ರಿಜ್ವಾನ್ ಅರ್ಷದ್, ಎಸ್.ಟಿ.ಸೋಮಶೇಖರ್, ಶ್ರೀನಿವಾಸ್, ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹಾಜರಿದ್ದರು.