Thursday, December 12, 2024

ಹರಿಹರ ನಗರಸಭೆ ಆಯುಕ್ತರ ಮೇಲೆ ಹಲ್ಲೆಗೆ ಮುಂದಾದ ಬಿಜೆಪಿ ಶಾಸಕ ಬಿಪಿ ಹರೀಶ್!

Most read

ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿಪಿ ಹರೀಶ್​ ನಗರಸಭೆ ಆಯುಕ್ತರ ಮೇಲೆ ಹಲ್ಲೆಗೆ ಮುಂದಾದ ಘಟನೆ ಸೋಮವಾರ ನಡೆದಿದೆ.

ಹರಿಹರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಶಾಖಾ ಕಚೇರಿ ಉದ್ಘಾಟನಾ ಸಮಾರಂಭದ ವೇಳೆ ಅಧಿಕಾರಿ ಮೇಲೆ ಸಿಟ್ಟಾದ ಶಾಸಕರು, ದೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಎದಿರು ಆಯುಕ್ತರಾದ ಸುಬ್ರಮಣ್ಯ ಶೆಟ್ಟಿ ಜೊತೆ ಮಾತಿನ ಚಕಮಕಿ ನಡೆಸಿ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಹಲ್ಲೆಗೆ ಮುಂದಾಗಿದ್ದಾರೆ. ಶಾಖಾ ಕಚೇರಿ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಶಾಸಕರ ಹೆಸರು ಹಾಕದಿರುವ ವಿಚಾರವಾಗಿ ಹರೀಶ್ ಸಿಟ್ಟಾಗಿದ್ದು, ಆಯುಕ್ತರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಶಾಸಕರು, ಹಲ್ಲೆಗೆ ಮುಂದಾದ ವಿಡಿಯೋ ವೈರಲ್ ಆಗಿದೆ.

ಸಿಟ್ಟಿನಿಂದ ಶಾಸಕರು ಕೆಂಡಾಮಂಡಲವಾಗಿದ್ದು, ‘ಥೂ ಮುಖ ತೋರಿಸಬೇಡ, ಹೋಗು ಆ ಕಡೆ. ಏಯ್ ನನಗೇ ಸರಿಯಾಗಿ ಮಾತನಾಡು ಅಂತೀಯ, ಮುಚ್ಕೊಂಡಿರು. ಸಾಹುಕಾರನ ಮೆಚ್ಚಿಸೋಕೆ ಇದನ್ನೆಲ್ಲ ಮಾಡ್ತೀಯಾ? ನೀನು ಮತ್ತೆ ಮಾತನಾಡಿದರೆ ಹುಷಾರು, ನಡಿ ಆ ಕಡೆ ಹೋಗು’ ಎಂದು ಗದರಿದ್ದಾರೆ. ಸಮೀಪದಲ್ಲಿದ್ದವರು ಶಾಸಕರನ್ನು ತಡೆದಿದ್ದಾರೆ. ನಂತರ ಕಾರ್ಯಕ್ರಮಕ್ಕೆ ಹಾಜರಾಗದೆ ಶಾಸಕರು ವಾಪಸಾಗಿದ್ದಾರೆ.

More articles

Latest article