ಮೈಸೂರು ದಸರಾ – ಅಭಿಮನ್ಯು – ಮಾವುತನ ಬಾಂಧವ್ಯಕ್ಕೆ 25ರ ವಸಂತ: ಜಂಬೂಸವಾರಿ ಆನೆಯ ಕಥೆ ಆರ್‌ಎಫ್‌ಓ ಜೊತೆ

Most read

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ 2024 ಅಕ್ಟೋಬರ್​ 3ರಂದು ಉದ್ಘಾಟನೆಯಾಗಿದ್ದು, ಅಕ್ಟೋಬರ್ 12ರಂದು ಜಂಬೂಸವಾರಿ ನಡೆಯಲಿದೆ. ಈ ಬಾರಿಯೂ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಜಂಜೂಸವಾರಿ ನಡೆಯಲಿದ್ದು ಅಂಬಾರಿಯನ್ನು ಹೊತ್ತು ಸಾಗಲಿದೆ. ಈ ವರ್ಷದ ವಿಶೇಷವೇನೆಂದರೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅಭಿಮನ್ಯು ಹಾಗೂ ಮಾವುತರ ಬಾಂಧವ್ಯಕ್ಕೆ 25 ವರ್ಷಗಳ ವಸಂತ ಪೂರೈಸಿದೆ. ಸತತ 25 ವರ್ಷಗಳಿಂದ ಅಭಿಮನ್ಯು ಹಾಗೂ ಮಾವುತ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ರಜತ ಮಹೋತ್ಸವದ ಸಂಭ್ರಮದಲ್ಲಿ ಇದ್ದಾರೆ.

ಅಭಿಮನ್ಯು ಹಾಗೂ ಸಾರಥಿ ವಸಂತ ಬಗ್ಗೆ ಮೈಸೂರು ವಲಯ ಅರಣ್ಯಧಿಕಾರಿ (ಆರ್‌ಎಫ್‌ಓ) ಸಂತೋಷ್ ಹೂಗಾರ್ ಅವರು ಕನ್ನಡ ಪ್ಲಾನೆಟ್ ಜೊತೆ ಸುದೀರ್ಘವಾಗಿ ಮಾತಾಡಿದ್ದು, ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಆನೆ ಎಷ್ಟು ಮುಖ್ಯವೋ ಅದನ್ನು ಮುನ್ನಡೆಸುವ ಮಾವುತ ಹಾಗೂ ಕಾವಾಡಿಗರ ಪಾತ್ರವು ಅಷ್ಟೇ ಮುಖ್ಯ‌ ಎಂದು ಹೇಳುತ್ತಾರೆ..

ಮತ್ತಿಗೌಡ ಕ್ಯಾಂಪ್ ಆನೆಯಾಗಿರುವ ಅಭಿಮನ್ಯು ಈಗಿರುವ ಎಲ್ಲಾ ಆನೆಗಳ ಪೈಕಿ ಬಲಿಷ್ಠ ಆನೆ. ಅಭಿಮನ್ಯು ಆನೆಗೆ 58 ವರ್ಷ ತುಂಬಿದ್ದು, ಕರೋನಾ ನಂತರದ ದಸರಾವನ್ನು ಅಭಿಮನ್ಯು ಸಾರಥ್ಯದಲ್ಲಿ ನಡೆಸಲಾಗುತ್ತಿದೆ. 1977ರಲ್ಲಿ ನಾಗರಹೊಳೆ ಅರಣ್ಯ ಆನೆಚೌಕೂರು ಬಳಿ ಖೆಡ್ಡಾಕ್ಕೆ ಬೀಳಿಸಿ ಅಭಿಮನ್ಯುವನ್ನು ಸೆರೆ ಹಿಡಿಯಲಾಯಿತು. ಈ ಆನೆ ವಿಶೇಷತೆ ಏನೆಂದರೆ ಹುಲಿ ಬಂದರು ಸಹ ಹೆದರುವುದಿಲ್ಲ. ಸದ್ಯ ಈಗಿರುವ ಎಲ್ಲಾ ಆನೆಗಳನ್ನು ಅಭಿಮನ್ಯುವಿನಿಂದಲೇ ಸೆರೆ ಹಿಡಿಯಲಾಗಿದೆ. ಅಷ್ಟು ಬಲಿಷ್ಠ ಆನೆಯನ್ನು ನಾವು ಟ್ರೈನ್ ಮಾಡಿ ಅಂಬಾರಿ ಹೊತ್ತು ಸಾಗುವ ಆನೆಯನ್ನಾಗಿ ಮಾರ್ಪಡಿಸಿದ್ದೇವೆ ಎಂದು ಹೇಳುತ್ತಾರೆ.

ಅರ್ಜುನ ಆನೆಯನ್ನು ಇವತ್ತು ನಾವು ಕಳೆದುಕೊಂಡಿದ್ದೇವೆ. ಆದರೆ ಅರ್ಜುನನಲ್ಲಿ ಎಷ್ಟು ಗಾಂಭೀರ್ಯ ಇತ್ತೋ, ಎಷ್ಟು ಶಿಸ್ತು ಇತ್ತೋ ಅಷ್ಟೇ ಗಾಂಭೀರ್ಯತೆ, ಶಿಸ್ತು ಅಭಿಮನ್ಯುವಿನಲ್ಲೂ ಕಾಣಬಹುದು. ಅರ್ಜುನನಷ್ಟೇ ಅಭಿಮನ್ಯು ಈಗ ಜನಮನ್ನಣೆ ಗಳಿಸಿದ್ದಾನೆ. ಸದ್ಯ 5900+ ಕೆಜಿ ತೂಕವನ್ನು ಹೊಂದಿರುವ ಅಭಿಮನ್ಯು ತಾಯಿ ಚಾಮುಂಡಿ ಹಾಗೂ ಅಂಬಾರಿಯನ್ನು ಯಶಸ್ವಿಯಾಗಿ ಹೊರಲು ಸಿದ್ದವಾಗಿದ್ದಾನೆ ಎಂದು ಹೇಳುತ್ತಾರೆ. ಸಂದರ್ಶನದ ಪೂರ್ತಿ ವಿವರ ಇಲ್ಲಿದೆ….

ಪ್ರಶ್ನೆ:  ಕಾಡಲಿದ್ದಾಗ ಅಭಿಮನ್ಯುವಿನ ಊಟದ ಪದ್ದತಿ ಬೇರೆ ಇರುತ್ತದೆ, ಆದರೆ ದಸರಾ ಸಮಯದಲ್ಲಿ ನಾಡಿನಲ್ಲಿ ಹೇಗಿರುತ್ತೆ?

ಆರ್‌ಎಫ್‌ಓ ಸಂತೋಷ್ ಹೂಗಾರ್: ಕಾಡಲ್ಲಿ ಇದ್ದಾಗ ಒಂದು ದಿನಕ್ಕೆ ರಾಗಿ ಮುದ್ದೆ ಕೊಟ್ಟು ಅರಣ್ಯಕ್ಕೆ ಮೇಯಲು ಬಿಟ್ಟು ಬಿಡುತ್ತೇವೆ. ಆದರೆ ಮೈಸೂರು ದಸರಾಗೆ ಆನೆಗಳು ಬಂದರೆ ಅವು ಸಹ ರಾಜರ ತರಹ ನೋಡಿಕೊಳ್ಳಬೇಕಾಗುತ್ತದೆ‌. ಬೆಳಿಗ್ಗೆ ವಾಕ್ ಹೋಗುವ ಮೊದಲು ಪ್ರೋಟೀನ್ ಆಹಾರವಾಗಿ ಹೆಸರಿನಕಾಳು, ಉದ್ದಿನ ಕಾಳು, ಗೋಧಿ ಮತ್ತು ಕುಚುಲಕ್ಕಿಯನ್ನು ಐದಾರು ಗಂಟೆ ಬೇಯಿಸಿ ಅದನ್ನು ಮಿಲ್ಕ್ ಶೇಕ್ ತರ ಮಾಡಿ ಕೊಡಲಾಗುತ್ತದೆ. ನಂತರ 4 ಕೆಜಿಯಷ್ಟು ತರಕಾರಿ ಮತ್ತು ಅರ್ಧ ಕೆಜಿ ಬೆಣ್ಣೆ ಕೊಡಲಾಗುತ್ತದೆ.

ಮೈಸೂರಿನಲ್ಲಿ ದೈನಂದಿನ ಊಟದ ವಿಷಯವನ್ನು ನೋಡೋದಾದರೆ, 150 ರಿಂದ 170 ಕೆಜಿಯಷ್ಟು ಹಸಿ ಹುಲ್ಲನ್ನು ಕೊಡಲಾಗುತ್ತದೆ‌. ಹಾಲು ಮತ್ತು ಅದರ ಪುಡಿಯ ಕೆನೆಭರಿತ ತೊಕಟೆಯನ್ನು ಅತೀ ಹೆಚ್ಚು ಆನೆಗಳು ಇಷ್ಟಪಡುವುದರಿಂದ ಅದನ್ನು ನಾವು ಮುಖ್ಯವಾಗಿ ಕೊಡುತ್ತೇವೆ. ಪ್ರತಿನಿತ್ಯ 600 ರಿಂದ 650 ಕೆಜಿಯಷ್ಟು ಆಹಾರವನ್ನು ನಾವು ಆನೆಗೆ ಕೊಡುತ್ತಿದ್ದೇವೆ.

ಮಧ್ಯಾಹ್ನದ ಸಮಯದಲ್ಲಿ ಹೊಟ್ಟೆ ಕಾಲಿ ಇರೋದು ಬೇಡ ಎಂದು ಮೂವತ್ತು ಕೆಜಿ ಭತ್ತ, ಐದಾರು ಕೊಬ್ಬರಿ ಹಾಗೂ ಕಬ್ಬನ್ನು ಕೊಡುತ್ತೇವೆ.

ಪ್ರಶ್ನೆ: ಅಭಿಮನ್ಯು ಹಾಗೂ ಇನ್ನಿತರೆ ದಸರಾ ಆನೆಯ ಆರೋಗ್ಯ ಹಾಗೂ ಸ್ವಚ್ಛತೆ ನಿರ್ವಹಣೆ ಹೇಗೆ?

ಆರ್‌ಎಫ್‌ಓ ಸಂತೋಷ್ ಹೂಗಾರ್: ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಆನೆಗಳಿಗೆ ಸ್ನಾನ ಮಾಡಿಸಲಾಗುತ್ತದೆ. ತಾಲೀಮು ಸಮಯದಲ್ಲಿ ರಸ್ತೆಯ ಮಧ್ಯೆ ಆನೆಗಳು ಯೂರಿನೇಟ್ ಮಾಡಿದರೆ ಅದೆಲ್ಲ ಆನೆಯ ಕಾಲಿಗೆ ಸಿಡಿದಿರುತ್ತದೆ‌. ಅದು ಕೀಟಾಣು ಕೂತು ಗಾಯ ಆಗುವ ಸಾಧ್ಯತೆ ಇರುತ್ತದೆ. ಅದನ್ನು ತಡೆಯಲು ನಾವು ಕಾಲಿಗೆ ಹಾಗೂ ಉಗುರಿನ ನಡುವೆ ಬೇವಿನ ಎಣ್ಣೆ, ಹೊಂಗೆ ಎಣ್ಣೆ ಹಚ್ಚಿ ಆನೆಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತದೆ‌.

ಕಾಲಿಗೆ ಅಥವಾ ಮೈಗೆ ಶಾರ್ಪ್  ಮೆಟಲ್ ಏನಾದರು ಹೊಕ್ಕಿದೆಯೆ ಎಂದು ಚೆಕ್ ಮಾಡಲು ಮೆಟಲ್ ಡಿಟೆಕ್ಟರ್ ಅನ್ನು ಬಳಸಲಾಗುತ್ತದೆ‌. ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಕಳೆದ ವರ್ಷದಿಂದ ನಾವು ಅಳವಡಿಸಿಕೊಂಡಿದ್ದೇವೆ. ಜೊತೆಗೆ ಬಿಸಿಲು ಹಾಗೂ ತಣ್ಣನೆಯ ವಾತಾವರಣವನ್ನು ಆನೆಗಳಿಗೆ ಕಲ್ಪಿಸಲು ಆನೆಯ ನೆತ್ತಿಗೆ ಹರಳೆಣ್ಣೆಯನ್ನು ಹಚ್ಚಲಾಗುತ್ತದೆ.

ಪ್ರಶ್ನೆ: ಆನೆಗಳ ತಾಲೀಮು ಸಮಯದಲ್ಲಿ ಜನಗಳು ಇರೋದಿಲ್ಲ, ಆದರೆ ದಸರಾ ಸಮಯದಲ್ಲಿ ಲಕ್ಷಾಂತರ ಜನರ ಮಧ್ಯೆ ಸಾಗಲು ಅಭಿಮನ್ಯುವನ್ನು ಹೇಗೆ ಸಿದ್ಧತೆ ಮಾಡ್ತಿರಿ?

ಆರ್‌ಎಫ್‌ಓ ಸಂತೋಷ್ ಹೂಗಾರ್: ಹೌದು, ಈ ಕಾರಣಕ್ಕೆ ನಾವು 40 ದಿನಗಳ ಮುಂಚಿತವಾಗಿಯೇ ಮೈಸೂರಿಗೆ ಬಂದು ತೂಕದ ತಾಲೀಮು ನಡೆಸುತ್ತೇವೆ. ಒಂದೇ ಆನೆಯ ಮೇಲೆ ನಾವು ಅವಲಂಬಿತ ಆಗೋದಿಲ್ಲ. ನಾಲ್ಕೈದು ಆನೆಗಳನ್ನು ನಾವು ಆಯ್ಕೆಯಾಗಿ ಇಟ್ಟುಕೊಂಡಿದ್ದೇವೆ. ಒಂದೊಂದೇ ಆನೆಗೆ ನಾವು ತೂಕವನ್ನು ಹಾಕಿ ತಾಲೀಮು ನಡೆಸುತ್ತೇವೆ. ಅಲ್ಲಿ ಯಾವುದು ಉತ್ತಮವಾಗಿ ಪ್ರದರ್ಶನ ಕಾಣುತ್ತೋ ಅದನ್ನು ಆಯ್ಕೆ ಮಾಡುತ್ತೇವೆ. ಸದ್ಯ ಈಗ ಅಭಿಮನ್ಯು ಎಲ್ಲಾ ಆನೆಗಳಿಗಿಂತ ಬಲಿಷ್ಠನಾಗಿದ್ದು, ಅಂಬಾರಿ ತೂಕಕ್ಕಿಂತ ಹೆಚ್ಚುವರಿ ತೂಕವನ್ನು ಆತ ಹೊತ್ತು ಸಾಗುತ್ತಿದ್ದಾನೆ‌.

ಈ ವರ್ಷ ಅಂಬಾರಿ ಸಾಗುವ ಮಾರ್ಗದಲ್ಲಿ ಹೆಚ್ಚುವರಿಯಾಗಿ ಕೆಲ ದಾರಿ ಸೇರ್ಪಡೆಯಾಗಿದೆ. ಅರಮನೆ ಮುಂಭಾಗದ ಜನರಿಗೆ ಅಂಬಾರಿ ಸಾಗುವುದು ಕಾಣುತ್ತಿತ್ತು ಆದರೆ ಹಿಂಬಾಗದಲ್ಲಿ ಇರುವ ಜನರಿಗೆ ಕಾಣುತ್ತಿರಲಿಲ್ಲ. ಈಗ ಅಲ್ಲಿಗೂ ಅಂಬಾರಿ ಈ ವರ್ಷ ಹೋಗಲಿದೆ. ಅದರಿಂದಾಗಿ ಹೆಚ್ಚುವರಿ 1.5 ಕಿಲೋಮೀಟರ್ ಜಾಸ್ತಿಯಾಗಿದೆ. ಅದಕ್ಕೂ ಸಹ ನಾವು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ.

ಪ್ರಶ್ನೆ: ಕಾಡಿನ ಆನೆ ಮತ್ತು ಕಾಡಿನ ಜನರ ಜೊತೆ ನಗರದ ಜನ ಬೆರೆಯುವುದು ಎಷ್ಟು ಮುಖ್ಯ?

ಆರ್‌ಎಫ್‌ಓ ಸಂತೋಷ್ ಹೂಗಾರ್: ನಾಡಿನ ಜನರು ಕಾಡಿನ ಜನ ಹಾಗೂ ಆನೆಗಳ‌ ಜೊತೆ ಬೆಸೆತುಕೊಂಡರೆ ತುಂಬಾ ಒಳ್ಳೆಯದು. ನಾವು ಈಗ ಆನೆಗಳಿಗೆ ಆಹಾರವನ್ನು ಟೆಂಡರ್ ಮೂಲಕ ತರಿಸಿಕೊಳ್ಳುತ್ತಿದ್ದೇವೆ. ಆದರೆ ಮೊದಲೆಲ್ಲಾ ಆನೆಗಳಿಗೆ ಮತ್ತು ಕಾಡಿನ ಜನರಿಗೆ ನಾಡಿನ ಜನಗಳೇ ಆಹಾರವನ್ನು ಕೊಡುತ್ತಿದ್ದರು ಅದು ಎಷ್ಟು ವೈಭವದಿಂದ ಹಾಗೂ ಜನಸಾಮಾನ್ಯರ ದಸರಾ ಆಗಿತ್ತು. ಹಾಗಂತ ದಂತ ಹಿಡಿದು, ಕಾಲು ಹಿಡಿದು ಪೋಟೋ ತೆಗೆದುಕೊಳ್ಳುವುದು ತಪ್ಪು. ದೂರದಿಂದಲೇ ಪ್ರಾಣಿಗಳನ್ನು ನೋಡಿ ಅದನ್ನು ಅರ್ಥ ಮಾಡಿಕೊಳ್ಳಬೇಕು. ಕಾಡಿನ ಜನರ ಬಳಿ ಅವರ ಜೀವನ ಶೈಲಿ ನಮ್ಮ ಜೀವನ ಶೈಲಿ ಬಗ್ಗೆ ಮಾತಾಡಿಸಿ ತಿಳಿದುಕೊಳ್ಳಬೇಕು. ಅಂತಹ ದಸರಾವನ್ನು ಯಾವುದೇ ನಾಡಿನ ಜನ ಕಳೆದುಕೊಳ್ಳಬಾರದು. ಮುಂದಿನ ದಿನಗಳಲ್ಲಿ ಇಷ್ಟು ಕಠಿಣ ರೂಲ್ಸ್ ಇರದಂತೆ ಜನಸಾಮಾನ್ಯರು ನಡೆದುಕೊಂಡರೆ, ಕಾಡು ಮತ್ತು ನಾಡು ಎರಡು ಬೆರೆಯುವ ವಾತಾವರಣ ದಸರಾ ಸಮಯದಲ್ಲಿ ಸೃಷ್ಟಿಯಾಗುತ್ತದೆ.

ಪ್ರಶ್ನೆ: ಮೈಸೂರು RFO ಆಗಿ ಸತತ ಮೂರನೇ ವರ್ಷ ನೀವು ದಸರಾ ಹಬ್ಬವನ್ನು ನಿರ್ವಹಿಸುತ್ತಿದ್ದೀರಿ? ಹೇಗನ್ನಿಸುತ್ತದೆ?

ಆರ್‌ಎಫ್‌ಓ ಸಂತೋಷ್ ಹೂಗಾರ್: ಗದಗ ಜಿಲ್ಲೆ ರೋಣ ತಾಲೂಕಿನ ಪುಟ್ಟ ಗ್ರಾಮದಿಂದ ಬಂದ ನಾನು ಇಂತಹ ಜವಾಬ್ದಾರಿ ತೆಗೆದುಕೊಂಡು ನಿರ್ವಹಣೆ ಮಾಡ್ತಿನಿ ಅಂತ ನಾನು ಊಹಿಸಿಕೊಂಡಿರಲಿಲ್ಲ. ಜಗತ್ತಿನಲ್ಲಿ ದಸರಾ ಒಂದೇ, ಆ ದಸರಾದಲ್ಲಿ ರೇಂಜ್ ಆಫೀಸರ್ ಕೂಡ ಒಬ್ಬರೇ, ಇಂತಹ ನಾಡಹಬ್ಬದಲ್ಲಿ ರೇಂಜ್ ಆಫೀಸರ್ ಆಗಿ ಕಾರ್ಯನಿರ್ವಹಿಸಲು ನನಗೆ ಅವಕಾಶ ಸಿಕ್ಕಿದ್ದೆ ದೊಡ್ಡ ವಿಷಯ. ನಾಡದೇವತೆ ಚಾಮುಂಡೇಶ್ವರಿ ಆಶೀರ್ವಾದ, ನಾಡಿನ ಜನರ ಹಾರೈಕೆ ಮೂರು ವರ್ಷ ದಸರಾವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ದಸರಾ ಮುಗಿದ ನಂತರ ನಾನು ಮಡಿಕೇರಿ ವಿಭಾಗದ ರೇಂಜ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಲಿದ್ದೇನೆ.. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು..

More articles

Latest article