ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ನಿನ್ನೆ ಸಂಜೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿರುವ ನಟ ದರ್ಶನ್ ಅವರಿಗೆ ರಾಜಕೀಯದಲ್ಲೂ ಉಜ್ವಲ ಭವಿಷ್ಯವಿದೆ ಎಂದು ಅರ್ಜುನ್ ಅವಧೂತ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು ನಟ ದರ್ಶನ್ ರಾಜಕೀಯ ಪ್ರವೇಶ ಖಚಿತ ಅವರು ಯಾರ ಮನೆ ಬಳಿಯೂ ಹೋಗಬೇಕಾಗಿಲ್ಲ. ರಾಜಕೀಯ ಪಕ್ಷಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ. 2025 ರಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ. ದರ್ಶನ್ ಬಿಡುಗಡೆ ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಪತ್ನಿ ವಿಜಯಲಕ್ಷ್ಮಿ ಅವರ ತಪಸ್ಸು, ದಿನಕರ್ ತೂಗುದೀಪ ಅವರ ಪ್ರಯತ್ನ ಹಾಗೂ ಅಭಿಮಾನಿಗಳ ಪ್ರಾರ್ಥನೆಯಿಂದ ಅವರು ಬಿಡುಗಡೆಯಾಗಿದ್ದಾರೆ ಎಂದು ಅರ್ಜುನ್ ಅವಧೂತ ಗುರೂಜಿ ಹೇಳಿದ್ದಾರೆ.
ಚಿತ್ರ ರಂಗದಲ್ಲೂ ಅವರು ಮುಂದುವರೆಯುತ್ತಾರೆ. ದರ್ಶನ್ ಗೆ ಸ್ತ್ರೀ ದೋಷ ಇಲ್ಲ. ಕೆಟ್ಟ ಸಮಯ ಹಾಗೂ ಕೆಟ್ಟ ನಿರ್ಧಾರಗಳಿಂದ ಈ ರೀತಿಯಾಗಿದೆ. ಅನೇಕ ಮಂದಿಗೆ ದರ್ಶನ್ ಸಹಾಯ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಸೇವೆ ಸಲ್ಲಿಸಿದ್ದಾರೆ. ಕಲ್ಲಿಗೆ ಏಟು ಬಿದ್ದರೆ ಮಾತ್ರ ವಿಗ್ರಹವಾಗುತ್ತದೆ. ದರ್ಶನ್ ಅವರಿಗೂ ಅಷ್ಟೇ, ಈಗ ಸಾಕಷ್ಟು ಏಟು ಬಿದ್ದಿದ್ದು, ವಿಗ್ರಹವಾಗಿ ಹೊರ ಬಂದಿದ್ದಾರೆ ಎಂದರು.
ಯಾರನ್ನೂ ಯಾರೂ ದ್ವೇಷ ಮಾಡಬೇಡಿ. ನಾನು, ನಾನು ಎಂದು ಮೆರೆಯಬೇಡಿ. ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡಿ. ಕನ್ನಡ ಬೆಳೆಸಿ, ನೀವು ಬೆಳೆಯಿರಿ ಎಂದು ಯುವ ನಟರಿಗೆ ಅರ್ಜುನ್ ಗುರೂಜಿ ಕರೆ ನೀಡಿದರು.
ಬೇಲ್ ಸಿಗುವ ಮುನ್ನಾ ಏನಾಗತ್ತದೆ ಎಂದು ದರ್ಶನ್ ಸಹೋದರ ದಿನಕರ್ ಕರೆ ಮಾಡಿ ಕೇಳಿದ್ದರು. ಸಂಜೆ ಸಿಹಿ ತೆಗೆದುಕೊಂಡು ಬನ್ನಿ ಎಂದು ಉತ್ತರಿಸಿದ್ದೆ ಎಂದರು.