ರೇಣುಕಾಸ್ವಾಮಿ ಹತ್ಯೆ; ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯ; ಅ.14ಕ್ಕೆ ಆದೇಶ

Most read


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂ 2 ಆಗಿರುವ ಚಿತ್ರ ನಟ ದರ್ಶನ್ ಅವರ ಜಾಮೀನು ಅರ್ಜಿ ಕುರಿತ ಸುದೀರ್ಘ ವಿಚಾರಣೆ ಮುಕ್ತಾಯವಾಗಿದೆ. ವಿಚಾರಣೆ ನಡೆಸಿದ 52 ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶ ಜೈ ಶಂಕರ್ ಅವರು ಅಕ್ಟೋಬರ್ 14ಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.


ಬಿಡುಗಡೆಯ ನಿರೀಕ್ಷೆಯಲ್ಲಿದ್ದ ದರ್ಶನ್ ಗೆ ನಿರಾಸೆಯಾಗಿದ್ದು, ಬಳ್ಳಾರಿ ಜೈಲಿನಲ್ಲಿಯೇ ಆಯುಧ ಪೂಜೆ ಆಚರಿಸಬೇಕಿದೆ.


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ದರ್ಶನ್ ಅವರ ಜಾಮೀನು ಅರ್ಜಿ ಕುರಿತು ವಾದ ಪ್ರತಿವಾದ ಜೋರಾಗಿಯೇ ನಡೆಯಿತು. ದರ್ಶನ್ ಪರವಾಗಿ ಖ್ಯಾತ ಕ್ರಿಮಿನಲ್ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದರೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರೂ ಸಹ ಸಮರ್ಥವಾಗಿ ವಾದಿಸಿ ದರ್ಶನ್ ಜಾಮೀನಿಗೆ ಹೇಗೆ ಅನರ್ಹ ಎಂದು ವಾದಿಸಿದರು.


ನಾಗೇಶ್ ಅವರು ದರ್ಶನ್ ಅವರ ಸಾಮಾಜಿಕ ಚಟುವಟಿಕೆಗಳನ್ನು ಪ್ರಸ್ತಾಪಿಸಿದರೆ ಎಸ್ ಪಿ ಪಿ ಅವರು ದರ್ಶನ್ ಅವರ ಕ್ರೌರ್ಯದ ಮುಖವನ್ನು ಅನಾವರಣಗೊಳಿಸಿದರು.


ಪೊಲೀಸರು ನಕಲಿ ಡಯಾಗ್ರಂ ಸೃಷ್ಟಿಸಿದ್ದಾರೆ. ಉಪಗ್ರಹ ಆಧಾರಿತ ಫೋಟೋ ಗಳನ್ನೂ ತೆಗೆದಿದ್ದರೂ ಆರೋಪಿಗಳ ಭಾವಚಿತ್ರ ಸಿಗಲು ಹೇಗೆ ಸಾಧ್ಯ. ಠಾಣೆಯಲ್ಲಿ ಕುಳಿತು ಅಂಟಿಸಿದ್ದಾರೆ ಎಂದು ನಾಗೇಶ್ ಹೇಳಿದರು. ಸಿಮ್ ಗಳು ಕೂಡ ಆರೋಪಿಗಳ ಹೆಸರಲ್ಲಿ ಇರಲಿಲ್ಲ. ಆದ್ದರಿಂದ ಕೊಲೆ ನಡೆದ ಶೆಡ್ ನಲ್ಲಿ ಇವರೇ ಇದ್ದರು ಎಂದು ಹೇಗೆ ಹೇಳಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ದರ್ಶನ್ ಬಳಸುವ ಸಿಮ್ ಹೇಮಂತ್ ಹೆಸರಲ್ಲಿತ್ತು. ಪೊಲೀಸ್ ಠಾಣೆಯಲ್ಲಿ ದರ್ಶನ್ ಫೋಟೋ ತೆಗೆಯಲಾಗಿದೆ. ಆ ಫೋಟೋಗಳನ್ನೇ ಸ್ಕೆಚ್ ನಲ್ಲಿ ಎಡಿಟ್ ಮಾಡಲಾಗಿದೆ ಎಂದು ಆರೋಪ ಮಾಡಿದರು. ಇಂತಹ ಸಾಕ್ಷಿಗಳನ್ನು ಪರಿಗಣಿಸಬಾರದು ಎಂದು ವಾದಿಸಿದರು.


ಟವರ್ ಲೊಕೇಷನ್ ಮತ್ತು ತಾಂತ್ರಿಕ ಸಾಕ್ಷಿಗಳನ್ನು ತಿರುಚಲು ಅವಕಾಶ ಇದೆ. ನಾನು ಕಚೇರಿಯಿಂದ ನೇರವಾಗಿ ಕೋರ್ಟ್‌ಗೆ ಬಂದಿದ್ದೇನೆ. ಆದರೆ ತಂತ್ರಜ್ಞಾನ ಬಳಸಿಕೊಂಡು ನಾನು ನನ್ನ ಕಚೇರಿಯಿಂದ ಎಸಿಪಿ ಚಂದನ್ ಕುಮಾರ್ ಕಚೇರಿಗೆ, ನಂತರ ವಿಧಾನಸೌಧಕ್ಕೆ ಹೋಗಿದ್ದಾಗಿ ಎಡಿಟ್ ಮಾಡಬಹುದು. ಗೂಗಲ್ ಮ್ಯಾಪ್ ಅನ್ನು ಎಡಿಟ್ ಮಾಡಲೂ ಅವಕಾಶವಿದೆ ನಾಗೇಶ್ ಹೇಳಿದರು.


40 ಲಕ್ಷ ರೂಪಾಯಿ ಹಣವನ್ನು ಮುಂಚಿತವಾಗಿಯೇ ನೀಡಲಾಗಿದ್ದು ಶೂಟಿಂಗ್ ಗೆ ಪಡೆಯಲಾಗಿದೆ. ಕೊಲೆ ಮುಚ್ಚಿ ಹಾಕಲು ಅಲ್ಲ. 500 ಕುಟುಂಬಗಳು ದರ್ಶನ್ ಸಿನಿಮಾ ಮೇಲೆ ಅವಲಂಬಿತವಾಗಿವೆ. ಈಗ ಅವರಿಗೆ ಕೆಲಸ ಇಲ್ಲ. ಆದ್ದರಿಂದ ದರ್ಶನ್ ಗೆ ಜಾಮೀನು ನೀಡಬೇಕು ಎಂದರು.
ಪ್ರತಿವಾದ ಮಂಡಿಸಿದ ಪ್ರಸನ್ನ ಕುಮಾರ್ ಅವರು,
ಗೂಗಲ್ ಮ್ಯಾಪ್ ನಲ್ಲಿ ಯಾರು ಎಲ್ಲಿಯೋ ಇದ್ದಾರೆ ಹೇಗೆ ಬೇಕಾದರೂ ಸೃಷ್ಟಿ ಮಾಡಬಹುದು ಎಂಬುದನ್ನು ಒಪ್ಪುತ್ತೇನೆ. ಆದರೆ ಆರೋಪಿ ನಂ 14,
ಸಾಕ್ಷ್ಯ ನಾಶ ಕುರಿತು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾನೆ. ಪೊಲೀಸರು ಹೇಗೆ ಲೊಕೇಶನ್ ಹುಡುಕುತ್ತಾರೆ ಎಂದು ಹುಡುಕಿದ್ದಾನೆ. ಕೃತ್ಯದಲ್ಲಿ ಭಾಗಿಯಾಗಿಲ್ಲ ಎನ್ನುವುದಾದರೆ ಏಕೆ ಹುಡುಕುತ್ತಿದ್ದ ಎಂದರು.


ಹೇಮಂತ್ ಹೆಸರಿನಲ್ಲಿದ್ದ ಸಿಮ್ ಅನ್ನು ದರ್ಶನ್ ಬಳಸುತ್ತಿದ್ದರು. ಪವಿತ್ರ ಅವರು ಐ ಲವ್ ಯು ಚಿನ್ನು ಮುದ್ದು ಎಂದು ಹೇಮಂತ್ ಗೆ ಎಂದು ಮೆಸೇಜ್ ಮಾಡಿದ್ದಾರೆ ಎಂದು ಹೇಳಲು ಸಾಧ್ಯವೇ ? ದರ್ಶನ್ ಮತ್ತು ಪವಿತ್ರಾ ನಡುವೆ ಮಾತುಕತೆ ಇತ್ತು ಎನ್ನುವುದಕ್ಕೆ ಇಷ್ಟು ಸಾಕು. ಸಂಬಂಧ ಕಡಿದುಕೊಂಡಿದ್ದರು ಎನ್ನುವುದು ಸುಳ್ಳು ಎಂದು ಹೇಳಿದರು. ಟೈಮ್ ಲೈನ್ ನಲ್ಲಿ ಲೋಕಷನ್ ಬದಲಾಯಿಸಬಹುದು. ಆದರೆ ಪೊಲೀಸರು ಟೈಮ್ ಲೈನ್ ಆಧರಿಸಿ ತನಿಖೆ ನಡೆಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.


ಆರ್ಥಿಕ ಅಪರಾಧಿ ಸುಬ್ರತೋ ರಾಯ್ ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರಲಿಲ್ಲ. ಆದ್ದರಿಂದ ದರ್ಶನ್ ಗೂ ಜಾಮೀನು ಬೇಡ ಎಸ್ ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.

More articles

Latest article