Tuesday, September 17, 2024

ದರ್ಶನ್ ಪೊಲೀಸ್ ಕಸ್ಟಡಿ ಮುಕ್ತಾಯ: ಮತ್ತಷ್ಟು ಸೆಕ್ಷನ್ ಹೇರಿದ ಪೊಲೀಸರು

Most read

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಬಂಧಿತರಾಗಿರುವ ಚಿತ್ರನಟ ದರ್ಶನ್ ಮತ್ತು ಸಹಚರರ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯವಾಗುತ್ತಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದರೂ ಮತ್ತಷ್ಟು ವಿಚಾರಣೆಗಾಗಿ ಇನ್ನೂ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನ್ಯಾಯಾಲಯದ ಮುಂದೆ ವಿನಂತಿಸುವ ಸಾಧ್ಯತೆ ಇದೆ. ಒಂದು ವೇಳೆ ಮತ್ತೆ ಪೊಲೀಸ್ ಕಸ್ಟಡಿಗೆ ಆರೋಪಿಗಳನ್ನು ನ್ಯಾಯಾಲಯ ನೀಡದೇ ಇದ್ದಲ್ಲಿ ದರ್ಶನ್ ಮತ್ತು ಸಹಚರರು ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಭೇದಿಸಿದ ನಂತರ ಪೊಲೀಸರು ಪವಿತ್ರಗೌಡ, ದರ್ಶನ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಸೆಕ್ಷನ್ 201ರ ಅಡಿಯಲ್ಲಿ ಸಾಕ್ಷ್ಯನಾಶದ ಆರೋಪವನ್ನೂ ಮಾಡಲಾಗಿತ್ತು. ತನಿಖೆಯಲ್ಲಿ ಸಾಕಷ್ಟು ವಿಷಯಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣದಲ್ಲಿ ಮತ್ತಷ್ಟು ಸೆಕ್ಷನ್ ಗಳನ್ನು ಸೇರಿಸಲಾಗಿದೆ.

ಐಪಿಸಿ ಸೆಕ್ಷನ್ 364-ಕಿಡ್ನಾಪ್, 384-ಸುಲಿಗೆ, 355-ಕ್ರಿಮಿನಲ್ ಬಲ ಪ್ರಯೋಗ, 120(B), ಒಳಸಂಚು, 143-ಕಾನೂನು ಬಾಹಿರ ಸಭೆ, 147-ಗಲಭೆ, 148-ಮಾರಣಾಂತಿಕ ಆಯುಧಗಳಿಂದ ಹಲ್ಲೆ, R/W 149 ಸೆಕ್ಷನ್ ಗಳನ್ನು ಹೊಸದಾಗಿ ಸೇರಿಸಲಾಗಿದೆ.

ಹೊಸದಾಗಿ ಸೇರಿಸಿರುವ ಸೆಕ್ಷನ್ ಗಳು ಗಂಭೀರವಾಗಿದ್ದು, ಜಾಮೀನುರಹಿತ ಅಪರಾಧಗಳನ್ನು ಸೂಚಿಸುತ್ತವೆ. ಹೀಗಾಗಿ ದರ್ಶನ್ ವಿರುದ್ಧದ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ.

ಈ ನಡುವೆ ದರ್ಶನ್ ವಿರುದ್ಧ ರೌಡಿಶೀಟ್ ತೆರೆಯುವ ಎಲ್ಲ ಸಿದ್ಧತೆಗಳನ್ನೂ ಪೊಲೀಸರು ನಡೆಸುತ್ತಿದ್ದು, ಈ ಸಂಬಂಧ ಔಪಚಾರಿಕವಾಗಿ ದರ್ಶನ್ ಗೆ ನೋಟಿಸ್ ನೀಡುವ ಸಂಭವವಿದೆ.

More articles

Latest article