ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಮತ್ತಿತರ ಆರೋಪಿಗಳ ರೆಗ್ಯುಲರ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ಇಂದು ನಡೆಯಿತು. ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಇಂದು ತಮ್ಮ ವಾದವನ್ನು ಪೂರ್ಣಗೊಳಿಸಿದರು. ನ್ಯಾಯಮೂರ್ತಿಗಳು ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ನಾಳೆ ಪ್ರಾಸಿಕ್ಯೂಷನ್ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ವಾದ ಮಂಡಿಸಲಿದ್ದಾರೆ. ಇವರ ವಾದಕ್ಕೂ ಮುನ್ನ ಇತರ ಆರೋಪಿಗಳ ಪರ ವಕೀಲರು ವಾದ ಮಂಡಿಸಲಿದ್ದಾರೆ.
ಪ್ರತ್ಯಕ್ಷ ದರ್ಶಿಗಳ ಹೇಳಿಕೆ ಆಧರಿಸಿ ವಾದ ಮಂಡಿಸಿದ ವಕೀಲ ಸಿ.ವಿ. ನಾಗೇಶ್ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಗಮನಿಸಿದರೆ ಇಬ್ಬರೂ ಕೂಡಾ ಸ್ಥಳದಲ್ಲಿ ಇರಲಿಲ್ಲ ಎಂದು ಭಾಸವಾಗುತ್ತಿದೆ. ಪ್ರತ್ಯಕ್ಷದರ್ಶಿ ಹೇಳಿಕೆ ವಿಳಂಬದಿಂದ ಜಾಮೀನು ಕೊಟ್ಟ ಹಲವು ಕೇಸ್ ಗಳಿವೆ. ಕೇಸ್ ಡೈರಿಯಲ್ಲಿ ಹೇಳಿಕೆ ನಮೂದಿಸಬೇಕಿರುವ ಅಗತ್ಯ ಇದೆ. ಸಿಆರ್ ಪಿಸಿ 167 ಅಥವಾ 172 ಅಡಿಯಲ್ಲಿ ಪ್ರಕ್ರಿಯೆ ಪಾಲಿಸಬೇಕು. ಕೋಕಾ, UAPA, NIA ಕಾಯ್ದೆಯಡಿಯಲ್ಲಿ ಮಾತ್ರ ವಿನಾಯಿತಿ ಇದೆ. ಈ ಕೇಸ್ ಗಳಲ್ಲಿ ವಿನಾಯಿತಿ ಇಲ್ಲ ಎಂದು ಹೇಳಿದರು.
ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಗಳಲ್ಲಿ ವೈರುಧ್ಯಗಳಿವೆ. ಮರ್ಮಾಂಗಕ್ಕೆ ಹೊಡೆದ ಬಗ್ಗೆ ಮತ್ತೊಂದು ಹೇಳಿಕೆಯಲ್ಲಿ ಉಲ್ಲೇಖವಿಲ್ಲ. ಹೇಳೀಕೆ 161 ಕ್ಕೂ ಹೇಳಿಕೆ 164 ಕ್ಕೂ ಅಪಾರ ವ್ಯತ್ಯಾಸಗಳಿವೆ. 161 ನೇ ಹೇಳಿಕೆ ಪಡೆದಾಗ ಕೇಸ್ ಡೈರಿಯಲ್ಲಿ ನಮೂದಿಸಬೇಕು. ಅದರ ಪ್ರತಿಯನ್ನು ಮ್ಯಾಜಿಸ್ಟ್ರೇಟ್ಗೆ ನೀಡಬೇಕು. ಈ ಪ್ರಕ್ರಿಯೆಗಳನ್ನು ತನಿಖಾಧಿಕಾರಿ ಪಾಲಿಸಿಲ್ಲ. ಮೊದಲ ರಿಮಾಂಡ್ ಅರ್ಜಿಗಳಲ್ಲಿ ಸಾಕ್ಷಿಗಳ ಹೇಳಿಕೆ ಉಲ್ಲೇಖವಿಲ್ಲ. ಜೂನ್ 22ರ ರಿಮಾಂಡ್ ಅರ್ಜಿಯಲ್ಲಿ ಮಾತ್ರ ಉಲ್ಲೇಖವಿದೆ. ಪ್ರಕರಣದಲ್ಲಿ ಪ್ರತ್ಯಕ್ಷ, ಪರೋಕ್ಷ ಸಾಕ್ಷಿದಾರರ ಹೆಸರುಗಳನ್ನು ನಮೂದಿಸಿಲ್ಲ ಎಂದು ಸಿ.ವಿ. ನಾಗೇಶ್ ವಾದಿಸಿದರು.
ಜೂನ್ 9 ರಂದು ರೇಣುಕಾಸ್ವಾಮಿ ಹತ್ಯೆ ಕುರಿತು ಗಮನಕ್ಕೆ ಬಂದಿರುತ್ತದೆ. ಆದರೆ ಪ್ರತ್ಯಕ್ಷದರ್ಶಿ ಹೇಳಿಕೆ ದಾಖಲಾಗುವುದು ಜೂ. 21ರಂದು. ಅಷ್ಟು ದಿನಗಳ ಕಾಲ ತನಿಖಾಧಿಕಾರಿಗಳು ಏನ್ ಮಾಡುತ್ತಿದ್ದರು ಎಂದು ನಾಗೇಶ್ ಪ್ರಶ್ನಿಸಿ ವಾದ ಮುಗಿಸಿದರು.
ದರ್ಶನ್ ಮ್ಯಾನೇಜರ್ ನಾಗರಾಜ್ ಪರ ವಾದ ಮಂಡಿಸಿದ ವಕೀಲ ಸಂದೇಶ ಚೌಟ ಆರೋಪಿಗಳ ಬಂಧನಕ್ಕೆ ಕಾರಣಗಳನ್ನು ನೀಡದಿರುವುದು ಗಂಭೀರ ಪ್ರಮಾದವಾಗಿದೆ. ಈ ಕಾರಣಕ್ಕೆ ಜಾಮೀನು ನೀಡಬೇಕೆಂದು ವಾದಿಸಿದರು.
ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ. ಆದರೆ ರೆಗ್ಯುಲರ್ ಬೇಲ್ಗಾಗಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಾತ್ರ ನಡೆಯುತ್ತಿದೆ.