ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚಿತ್ರನಟ ದರ್ಶನ್, ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಹಿಂತಿರುಗಿದ್ದಾರೆ. ಬೆನ್ನು ನೋವಿನ ಸಂಬಂಧ ವೈದ್ಯರನ್ನು ಭೇಟಿಯಾಗಿದ್ದರು. ಆಸ್ಪತ್ರೆಯಲ್ಲಿ ದರ್ಶನ್‌ಗೆ ಎಕ್ಸ್ ರೇ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಮತ್ತೊಬ್ಬ ಚಿತ್ರನಟ ಧನ್ವೀರ್ ದರ್ಶನ್ ಜತೆಗಿದ್ದರು. ಕೇವಲ 15 ನಿಮಿಷಗಳಲ್ಲಿ ತಪಾಸಣೆ ಮುಗಿಸಿಕೊಂಡು ದರ್ಶನ್ ತಮ್ಮ ಪಾರ್ಮ್ ಹೌಸ್ ಗೆ ಮರಳಿದ್ದಾರೆ.
ದರ್ಶನ್ ಕುವೆಂಪುನಗರದಲ್ಲಿರುವ ಕಾಮಾಕ್ಷಿ ಆಸ್ಪತ್ರೆಗೆ ಭೇಟಿ ನೀಡುವ ವಿಷಯ ತಿಳಿದ ಅವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ಪತಿಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ನಿನ್ನೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಹರಕೆ ಸಲ್ಲಸಿದ್ದರು.