(ಮುಂದುವರೆದುದು…)
ಐದು ವರ್ಷಗಳಿಗೊಮ್ಮೆ ಬದಲಾಗಿ (ಬದಲಾದರೆ) ಬರುವ ಯಾವ ಆಡಳಿತ ಪಕ್ಷವೂ ವಾಸ್ತವವನ್ನು ತೆರೆದಿಡುವುದಿಲ್ಲ. ಬೆಲೆ ಏರಿಕೆ ಬಂದ್ ಮಾಡಿಸುವ, ಪ್ರತಿಭಟನೆ ಮಾಡುವ ವಿರೋಧ ಪಕ್ಷಗಳೂ ಸತ್ಯ ಬಿಚ್ಚಿಡುವುದಿಲ್ಲ. ಇಬ್ಬರಿಗೂ ತಮ್ಮ ಕಾಲುಗಳನ್ನು ಸುತ್ತಿಕೊಳ್ಳುವ ಬಳ್ಳಿಯ ಬಗ್ಗೆಯೇ ಚಿಂತೆ. ಇವರಿಬ್ಬರ ಆತ್ಮಾಘಾತುಕ ರಾಜಕೀಯದಲ್ಲಿ ವಂಚಕರು ಪಾರು. ಯಾವುದೇ ತಪ್ಪು ಮಾಡದ ಸಾಮಾನ್ಯ ಜನರು ಶಿಕ್ಷೆ ಅನುಭವಿಸಬೇಕು – ವೃಂದಾ ಹೆಗಡೆ, ಅತಿಥಿ ಉಪನ್ಯಾಸಕರು.
ಭಾಗ 1 ಓದಿದ್ದೀರಾ?- ಭಾರತದ ʼಆರ್ಥಿಕತೆ ಏರುವಿಕೆʼಯ ಹಿಂದಿನ ಕರಾಳ ಕಥೆ
ಭಾರತ ಸರ್ಕಾರ ಮಾರಿಷಸ್ ದೇಶದ ಜೊತೆ 1983ರಲ್ಲೇ ಮಾಡಿಕೊಂಡಿದ್ದ, 1991ರವರೆಗೂ ಯಾವುದೇ ರೀತಿಯಲ್ಲಿ ಚಾಲ್ತಿಗೆ ತರದೆ ಹಾಗೇ ಇದ್ದ ಒಂದು ಒಪ್ಪಂದ. ಅದೇ ಡಬಲ್ ಟ್ಯಾಕ್ಸ್ ಅವಾಯಿಡೆನ್ಸ್ ಅಗ್ರೀಮೆಂಟ್. ಅದರ ಅನುಸಾರ ಮಾರಿಷಸ್ ಯಾವುದೇ ಕಂಪನಿಗೆ ತನ್ನ ನೆಲದಲ್ಲಿ ಇರಲು ಜಾಗ ಕೊಡುತ್ತದೆ. ತೆರಿಗೆ ವಿಧಿಸುವುದಿಲ್ಲ. ಈ ದೇಶ ಹೀಗೆ ಆಶ್ರಯ (tax haven ) ಕೊಟ್ಟಿದ್ದಲ್ಲದೆ ಆ ಕಂಪನಿಯ ಮಾಲೀಕರು ನಿಜವಾದವರೋ ಅಲ್ಲವೋ ಎಂಬುದರ ಬಗ್ಗೆ ಯಾವ ನಿಗಾವನ್ನೂ ವಹಿಸುವುದಿಲ್ಲ. ಹಾಗಾಗಿ ಪ್ರಪಂಚದೆಲ್ಲೆಡೆಯಿಂದ ಷೆಲ್ (ಬೇನಾಮಿ) ಕಂಪನಿಗಳು ಮಾರಿಷಸ್‌ನಲ್ಲಿ ಬೀಡುಬಿಟ್ಟಿದ್ದವು. ಅದೇ ಸಮಯದಲ್ಲಿ ಭಾರತ ಸರ್ಕಾರ ಉದಾರೀಕರಣವನ್ನು ಜಾರಿಗೊಳಿಸುವುದರ ಮೂಲಕ ವಿದೇಶೀ ಬಂಡವಾಳದ ಹರಿವನ್ನು ನಿರೀಕ್ಷಿಸಿ ತನ್ನ ಆರ್ಥಿಕ ಕುಸಿತವನ್ನು ತಡೆಯಲು ಪ್ರಯತ್ನಿಸಿತು. ಈ ಎರಡೂ ಅವಕಾಶಗಳನ್ನು ವಿಫುಲವಾಗಿ ಬಳಸಿಕೊಂಡ ಪಾರೇಖ್ ಮಾರಿಷಸ್ ನಲ್ಲಿ ತನ್ನ ಷೆಲ್ ಕಂಪನಿಯಲ್ಲಿ ಹಣ ಇಟ್ಟು ಅದನ್ನೇ ವಿದೇಶೀ ಕಂಪನಿಯ ಹೆಸರಲ್ಲಿ ಮತ್ತೆ ಭಾರತಕ್ಕೆ ತಂದ. ಇದನ್ನು ರೌಂಡ್ ಟ್ರಿಪ್ಪಿಂಗ್ ಎನ್ನುತ್ತಾರೆ. ಭಾರತೀಯ ಹೂಡಿಕೆದಾರರಿಂದ ಲೂಟಿ ಹೊಡೆದ ಹಣವನ್ನು ಮಾರಿಷಸ್ ನಲ್ಲಿ ಬೇನಾಮಿ ಹೆಸರಲ್ಲಿ ಭದ್ರವಾಗಿ ಇಟ್ಟು, ಅದನ್ನೇ ವಿದೇಶೀ ಕಂಪನಿಯ ಹೆಸರಲ್ಲಿ ಮತ್ತೆ ಭಾರತಕ್ಕೆ ತಂದು, ಇಲ್ಲಿ ಭೂಮಿ, ಸಬ್ಸಿಡಿ ಹೆಸರಲ್ಲಿ ಮತ್ತೂ ಬಾಚಿಕೊಳ್ಳುವುದು. ಇದು ಬಿಸಿನೆಸ್ ವರಸೆ!!!
ಹಣಕಾಸು ಕಾರ್ಯದರ್ಶಿಯಾಗಿದ್ದ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಮಾರಿಷಸ್ ನಿಂದ ಷೆಲ್ ಕಂಪನಿಗಳ ವಿದೇಶೀ ಮುಖವಾಡವನ್ನು ತೆಗೆದೊಗೆಯಲು ಅದರ ಜೊತೆ ಮಾಡಿಕೊಂಡ ಒಪ್ಪಂದವನ್ನು ಕೊನೆಗೊಳಿಸಲು ಶಿಫಾರಸು ಮಾಡಿದರೆ, ಸರ್ಕಾರ ( ಮನಮೋಹನ್ ಸಿಂಗ್ ಆಗ ಹಣಕಾಸು ಮಂತ್ರಿ ) ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತದೆ. ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿಯಬಹುದೆಂಬುದು ಅದರ ಹೆದರಿಕೆ. ನ್ಯಾಯಾಲಯ ಕೂಡಾ ವಿದೇಶೀ ಬಂಡವಾಳ ನಿಲ್ಲಬಹುದೆಂಬ ಶಂಕೆ ವ್ಯಕ್ತಪಡಿಸುತ್ತದೆ.!! ಸಣ್ಣ ಪುಟ್ಟ ಸೈಡ್ ಎಫೆಕ್ಟ್ ಗಳು ಎಲ್ಲಾ ಒಪ್ಪಂದಗಳಲ್ಲಿ ಇರುತ್ತದೆ ಎಂದು ಹೇಳಿಬಿಡುತ್ತದೆ.!!!
ಅಂತೂ ಕೊನೆಗೆ 2016ರಲ್ಲಿ ಬೇರೆ ಬೇರೆ ಒತ್ತಡಗಳಿಗೆ ಮಣಿದು ಭಾರತ ಸರ್ಕಾರ ಮಾರಿಷಸ್ ಒಪ್ಪಂದವನ್ನು ಕೊನೆಗೊಳಿಸುತ್ತದೆ. ಫೇಕ್ ವಿದೇಶೀ ಬಂಡವಾಳ ಹರಿವು ಮಾರಿಷಸ್ ನಿಂದ ಬರುವುದು ನಿಲ್ಲುತ್ತದೆ. ಅದನ್ನೇ ಪ್ರಧಾನಿಗಳು ಕಪ್ಪು ಹಣವನ್ನು ತಂದು ರಾಬಿನ್ ಹುಡ್ ರೀತಿಯಲ್ಲಿ ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಾಕುವೆ ಎಂದಿದ್ದು. ಇರಲಿ. ಹದಿನೈದು ಲಕ್ಷವನ್ನು ತಮಾಷೆಯೆಂದು ಮರೆತು ಬಿಡೋಣ. ಆದರೆ ಈ ಫೇಕ್ ಹೂಡಿಕೆ ನಿಂತು ಹೋಯಿತಾ ಅಂದರೆ ಉತ್ತರ ತೀರಾ ನಿರಾಶಾದಾಯಕ. ಮಾರಿಷಸ್ ಜಾಗದಲ್ಲಿ ಸಿಂಗಾಪುರ ಬಂತು. ಅದೇ ರೀತಿಯ ಒಪ್ಪಂದ ಮತ್ತು ಆಟ ಚಾಲೂ. ಅಮೇರಿಕಾ ಕೂಡಾ ಈ ಆಟದಲ್ಲಿ ಸ್ಪರ್ಧೆಗಿಳಿಯಿತು. ಈಗ ಭಾರತದ ಪ್ರಮುಖ ಬಂಡವಾಳ ಹರಿವು ಅಮೇರಿಕಾದಿಂದಲೇ ಬರುವುದು. ಅಮೆರಿಕಾ ಈಗ ಅತೀ ದೊಡ್ಡ ತೆರಿಗೆ ಆಶ್ರಯ ತಾಣ. (tax haven). ಅಮೇರಿಕಾದ ಹೂಡಿಕೆ ಬ್ಯಾಂಕುಗಳು ತೆರಿಗೆ ಆಶ್ರಯತಾಣಗಳಲ್ಲಿ ಅಂಗ ಸಂಸ್ಥೆಗಳ ದೊಡ್ಡ ಜಾಲವನ್ನೇ ಹೊಂದಿವೆ. 2011ರಲ್ಲಿ ಗೋಲ್ಡ್ ಮನ್ ಸಚ್ಸ್ ನ 905 ಅಂಗಸಂಸ್ಥೆಗಳು, ಮೋರ್ಗನ್ ಸ್ಟಾನ್ಲಿಯ 619 ಅಂಗಸಂಸ್ಥೆಗಳು ತೆರಿಗೆ ಆಶ್ರಯ ತಾಣಗಳಲ್ಲಿದ್ದವು.
ಉದಾರೀಕರಣೋತ್ತರ ನೀತಿ ನಿರೂಪಕರು ವಿದೇಶೀ ಬಂಡವಾಳವನ್ನು ಆಕರ್ಷಿಸುವ ಪ್ರಕ್ರಿಯೆಗೆ ಅತೀ ಹೆಚ್ಚು ಆಸಕ್ತಿಯನ್ನು ತೋರಿಸಲಾರಂಭಿಸಿದರು. ಕೇತನ್ ಪಾರೇಖ್ ಹಿಂದೆ ಸರಿದರೂ ಅವಕಾಶಗಳ ಬಾಗಿಲು ಬೇರೆಯವರಿಗೆ ವಿಸ್ತಾರವಾಗಿ ತೆರೆದು ಬಿದ್ದಿತ್ತು. ಗೌತಮ್ ಅದಾನಿ ಮತ್ತು ಅವರ ಕಂಪನಿಗಳ ಮೇಲಿನ ಇತ್ತೀಚಿನ ಆರೋಪ ತೋರಿಸುವುದೇನೆಂದರೆ ಥೇಟ್ ಖೇತನ್ ಪಾರೇಖ್ ಥರಾನೇ ಇವರೂ ಮಾಡಿದ್ದು ಎಂಬುದು. ಜನವರಿ 2023ರಲ್ಲಿ ಅಮೆರಿಕಾದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್ ಬರ್ಗ್ ಅದಾನಿ ಗುಂಪಿನ ಮೇಲೆ ಗುರುತರವಾದ ಆರೋಪವನ್ನು ಮಾಡಿತು – ಮಾರಿಷಸ್ ಮತ್ತು ಇತರ ತೆರಿಗೆ ಆಶ್ರಯ ತಾಣಗಳನ್ನು ಹೂಡಿಕೆಗಾಗಿ ಅವಲಂಬಿಸಿದ್ದಾರೆ ಎಂದು. ಈ ಆರೋಪವನ್ನು ಅದಾನಿ ಗುಂಪು ಬಲವಾಗಿ ನಿರಾಕರಿಸಿದರೂ ಭಾರತ ಸರ್ಕಾರ ತನ್ನ ತನಿಖಾ ಸಂಸ್ಥೆ ಸೆಬಿ (SEBI-Security and Exchange Board of India) ತನಿಖೆಗೆ ಒಪ್ಪಿಸಿತು. ಬೇರೆಲ್ಲಾ ಸಂಸ್ಥೆಗಳು ಈವರೆಗೆ ಮಾಡಿದಂತೆಯೇ ಸೆಬಿ ಕೂಡಾ ಆರೋಪ ಸಾಬೀತು ಪಡಿಸುವ ಯಾವುದೇ ಸಾಕ್ಷ್ಯಾಧಾರಗಳೂ ಅಧಿಕೃತವಾಗಿ ಸಿಗುತ್ತಿಲ್ಲವೆಂದು ಕೈ ಚೆಲ್ಲಿತು. ಷೇರುಗಳನ್ನು ಕುತಂತ್ರದಿಂದ ನಿಭಾಯಿಸುವ (manipulate ಮಾಡುವ) ಆರೋಪ ಹೊತ್ತ ಸಂಸ್ಥೆಗಳ ನಿಜವಾದ ಒಡೆತನವು ಕಂಡುಹಿಡಿಯಲಾಗದಷ್ಟು ಅಪಾರದರ್ಶಕವಾಗಿದೆ ಎಂದು ಹೇಳಿಬಿಟ್ಟಿತು. ಆಗಸ್ಟ್ ನಲ್ಲಿ OCCRP (Organised Crime and Corruption Reporting Project) ಅಪಾರದರ್ಶಕದ ಸಣ್ಣ ಭಾಗವನ್ನು ಒಡೆಯುವ ಪ್ರಯತ್ನ ಮಾಡಿತು. 2013 ರಿಂದ 2018 ರವರೆಗಿನ ಪ್ರಮಾದಕರ ಷೇರು ನಿಭಾವಣೆಯ ನಿದರ್ಶನಗಳನ್ನು ಎತ್ತಿ ತೋರಿಸಿತು. ಹಾಗೂ ನರೇಂದ್ರ ಮೋದಿ ಸರ್ಕಾರದ ಚಿತಾವಣೆಯಿಂದ ಸೆಬಿ ಬೇಕೆಂತಲೇ ಒಂದು ಪತ್ರವನ್ನು ಕಡೆಗಣಿಸಿತ್ತು ಎಂದೂ ಆರೋಪಿಸಿತ್ತು. ಆ ಪತ್ರವು ಅದಾನಿ ಗುಂಪು ಅನುಮಾನಕರ ಚಟುವಟಿಕೆಯನ್ನು ತನ್ನದೇ ಷೇರು ನಿರ್ವಹಣೆಯಲ್ಲಿ ನಡೆಸುತ್ತಿದೆ ಎಂದು ವರದಿ ಮಾಡಿತ್ತು. ಈ ಹೊಸ ಆರೋಪವನ್ನೂ ಅದಾನಿ ಗುಂಪು ಕಸ ಗುಡಿಸಿದಷ್ಟು ಸಲೀಸಾಗಿ ತಳ್ಳಿ ಹಾಕಿತು.!!!
ದೀರ್ಘ ಕಾಲದಿಂದ ಪ್ರಚಲಿತದಲ್ಲಿದ್ದ ರಾಷ್ಟ್ರೀಕೃತ ಬ್ಯಾಂಕುಗಳ ಹಗರಣಕ್ಕೆ ಯಾವ ಘನತೆಯ ಹೊದಿಕೆಯೂ ಇರಲಿಲ್ಲ. ಇದು ಅಧಿಕಾರ ಮತ್ತು ಭ್ರಷ್ಟತೆಯ ಸರಳ ಕಥೆ. ಬ್ಯಾಂಕಿನ ದುಡ್ಡನ್ನು ಪ್ರತಿಷ್ಟಿತ ಜನರು ತಮ್ಮ ಸ್ವಂತ ಹುಂಡಿ ಹಣದಂತೆ ಉಪಯೋಗಿಸಲು ಪ್ರಾರಂಭಿಸಿದ್ದೇ ಇಂದಿರಾ ಗಾಂಧಿಯವರು ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ ಕ್ಷಣದಿಂದ. ಪ್ರಧಾನಿ ಇಂದಿರಾರವರೇನೋ ಮಹಾತ್ಸಾಧನೆ ಮಾಡಿದೆನೆಂದು ಬೀಗಿರಬಹುದು. ಆದರೆ ಅವರ ಮಗ ಸಂಜಯ್ ಗಾಂಧಿ ತನ್ನ ಕಾರು ಉತ್ಪಾದನಾ ಕಂಪನಿಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಜಬರ್ದಸ್ತಿನಿಂದ ತೆಗೆದುಕೊಂಡ ಬಂಡವಾಳ ಮುಂದಿನ ಹಗರಣಗಾರರಿಗೆ ದಾರಿ ತೋರಿಸಿದ್ದಂತೂ ನಿಜ. ರಾಷ್ಟ್ರೀಕೃತ ಬ್ಯಾಂಕುಗಳ ಖಜಾನೆಯಿಂದ ಲೂಟಿ ಹೊಡೆಯುವ ಪ್ರಕ್ರಿಯೆ ಉದಾರೀಕರಣೋತ್ತರ ಕಾಲದ ವಿದ್ಯಮಾನ. ಕುಪ್ರಸಿದ್ಧ ವಿಜಯ್ ಮಲ್ಯ, ನೀರವ್ ಮೋದಿ, ಮೊಹುಲ್ ಚೋಕ್ಸಿ ಇವರೆಲ್ಲರೂ ಕಾನೂನಿನ ಹಿಡಿತಕ್ಕೆ ಸಿಗದೆ ಸುಲಭವಾಗಿ ನುಣುಚಿಕೊಂಡು ಹೊರದೇಶಗಳಿಗೆ ಸಲೀಸಾಗಿ ಓಡಿಬಿಟ್ಟರು. ವರ್ಷಗಟ್ಟಲೆ ಭಾರತೀಯ ಅಧಿಕಾರಿಗಳು ಈ ದುಷ್ಟರನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದೇ ಹೇಳತೊಡಗಿದರು!!!
ಬ್ಯಾಂಕುಗಳಿಗೆ ಕನ್ನ ಹಾಕುವ ಕ್ರಿಯೆ ಜಾಸ್ತಿಯಾಗುತ್ತಲೇ ಹೋಯಿತು. ಇದು ಒಂದು ಸಾಮಾನ್ಯ ಸಂಗತಿಯಾಗಿ ಹೋಯಿತು. ಮಲ್ಯರಂಥಾ ವರ್ಣರಂಜಿತರೇ ಆಗಬೇಕೆಂದಿಲ್ಲ. ಕಂಡಕಂಡವರೆಲ್ಲಾ ಈ ದಂಧೆಗೆ ಇಳಿದರು. ಏಪ್ರಿಲ್ 2015ರಲ್ಲಿ ರಿಸರ್ವ್ ಬ್ಯಾಂಕಿನ ಆಗಿನ ಗವರ್ನರ್ ರಘುರಾಮ್ ರಾಜನ್ ರವರು ಇಂಥಾ ಕಳ್ಳರ ಒಂದುದ್ದ ಪಟ್ಟಿಯನ್ನೇ ಮೋದಿ ಸರ್ಕಾರಕ್ಕೆ ಕಳಿಸಿ ಕಠಿಣ ಕ್ರಮ ಕೈಗೊಳ್ಳಲೇಬೇಕೆಂದು ಆಗ್ರಹಿಸುತ್ತಾರೆ. ಆದರೆ ಸೆಪ್ಟೆಂಬರ್ 2018ರಲ್ಲಿ ವಿಷಾದದಿಂದ ಹೀಗೆ ಬರೆಯುತ್ತಾರೆ “ಈ ವ್ಯವಸ್ಥೆ ಒಬ್ಬನೇ ಒಬ್ಬ ವಂಚಕನನ್ನು ಹಿಡಿಯಲು ಶಕ್ತವಾಗಿಲ್ಲ.!! ಹಾಗಾಗಿ ವಂಚನೆ ನಿರಂತರವಾಗಿ ಮುಂದುವರೆದಿದೆ. ತಡೆಯುವ ಪ್ರಯತ್ನಗಳೇ ಇಲ್ಲ “
ನಂತರ ತೆರಿಗೆದಾರರಿಂದ ಈ ಹಗರಣಗಳನ್ನು ಮುಚ್ಚಿಹಾಕುವ ಹುನ್ನಾರ. ಹಗರಣಗಳಿಂದಾದ ನಷ್ಟದ ಮೊತ್ತ ಎಷ್ಟು ಎಂಬುದು ತೆರಿಗೆದಾರರಿಗೆ ತಿಳಿಯದಂತೆ ಮುಚ್ಚಿಡುವುದು. ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಪಡೆದು ಸರ್ಕಾರಕ್ಕೆ ಕ್ರಮ ತೆಗೆದುಕೊಳ್ಳಲು ಆಗ್ರಹಿಸುವ ಸಮಾಜ ಕಾರ್ಯಕರ್ತ (whistle blowers)ರ ಕಥೆ ಏನಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈಗ ಮುಚ್ಚಿದ ವ್ರಣವನ್ನು ಸರಿಪಡಿಸಬೇಕಲ್ಲಾ, ಅದಕ್ಕೆ ನಾಟಕ. ಹೇಗೆಂದರೆ ಮರುಪಾವತಿಯಾಗದ ದೊಡ್ಡ ಸಾಲಗಳನ್ನು ಮನ್ನಾ ಮಾಡುವುದು. (write off). ಹೀಗೆ ಮಾಡಿದಾಗ ನ್ಯಾಯಬದ್ಧವಾಗಿ ಬ್ಯಾಂಕ್ ಅದನ್ನು ತುಂಬಿಕೊಡಬೇಕು. ಆದರೆ ತುಂಬಿಕೊಡಲು ಹೋದರೆ ಖಜಾನೆ ಸಂಪೂರ್ಣ ಖಾಲಿಯಾಗುವುದರಲ್ಲಿ ಸಂಶಯವಿಲ್ಲ. ವಂಚಕರಿಂದ ವಸೂಲಿ (recovery) ಆಗಬೇಕು. ಅದು ಸಾಧ್ಯವಾಗದ ಮಾತು. ದೊಡ್ಡ ಸಾಲದ ಅತೀ ಸಣ್ಣ ಭಾಗ ವಸೂಲಿಯಾಗಬಹುದು.!!! ಹಾಗಾದರೆ ತುಂಬಿಕೊಡುವುದು ಹೇಗೆ?
ಸರಳವಾಗಿ ಹೇಳಬೇಕೆಂದರೆ ತೆರಿಗೆದಾರರು ತುಂಬಿಸುತ್ತಾರೆ.!!!!!!!!!
ಈ ವಾಕ್ಯ ಬಹಳ ಮಹತ್ವದ್ದು. ಸಾಮಾನ್ಯ ಜನರಿಂದ ಮರೆಮಾಚಲ್ಪಡುವ ಕಟು ವಾಸ್ತವ. ಐದು ವರ್ಷಗಳಿಗೊಮ್ಮೆ ಬದಲಾಗಿ (ಬದಲಾದರೆ) ಬರುವ ಯಾವ ಆಡಳಿತ ಪಕ್ಷವೂ ಈ ವಾಸ್ತವವನ್ನು ತೆರೆದಿಡುವುದಿಲ್ಲ. ಬೆಲೆ ಏರಿಕೆ ಬಂದ್ ಮಾಡಿಸುವ, ಪ್ರತಿಭಟನೆ ಮಾಡುವ ವಿರೋಧ ಪಕ್ಷಗಳೂ ಸತ್ಯ ಬಿಚ್ಚಿಡುವುದಿಲ್ಲ. ಇಬ್ಬರಿಗೂ ತಮ್ಮ ಕಾಲುಗಳನ್ನು ಸುತ್ತಿಕೊಳ್ಳುವ ಬಳ್ಳಿಯ ಬಗ್ಗೆಯೇ ಚಿಂತೆ. ಇವರಿಬ್ಬರ ಆತ್ಮಾಘಾತುಕ ರಾಜಕೀಯದಲ್ಲಿ ವಂಚಕರು ಪಾರು. ಯಾವುದೇ ತಪ್ಪು ಮಾಡದ ಸಾಮಾನ್ಯ ಜನರು ಶಿಕ್ಷೆ ಅನುಭವಿಸಬೇಕು. ಇದು ‘ಜಗದ ನಿಯಮ’ ಆಗಿಹೋಗಿದೆ. ಅಪಾಯಕರ ಯಾವುದೆಂದರೆ ಇವೆಲ್ಲವನ್ನು ಮರೆಮಾಚಲು ತಂದು ಹಾಕಿರುವ ದ್ವೇಷ ರಾಜಕಾರಣ. ವಿವೇಚನಾ ಶಕ್ತಿ ಕಳೆದುಕೊಂಡ ಸಾಮಾನ್ಯ ಜನರು ಇದಕ್ಕೆ ಈಡಾಗುವುದು. ಮತ್ತು ಸುಲಭಕ್ಕೆ ಸಮೂಹ ಸನ್ನಿಗೆ ಒಳಗಾಗುವುದು.
ಬೆಲೆ ಏರಿಕೆ, ಸಾಲದ ಬಡ್ಡಿ ದರ ಏರಿಕೆ, ಠೇವಣಿ ಬಡ್ಡಿ ದರ ಇಳಿಕೆ, ಕನಿಷ್ಠ ವೇತನ ಕೊಟ್ಟು ದುಡಿಸುವುದು, ವ್ಯಾಟ್, ಜಿಎಸ್ಟಿ ಮುಂತಾದ ತೆರಿಗೆಗಳು, ಸಬ್ಸಿಡಿ ರದ್ದು, ಖಾಸಗೀಕರಣ (ಸರ್ಕಾರಿ ನೌಕರಿಗಳನ್ನು ಹೊರಗುತ್ತಿಗೆ ಕೊಡುವುದು, ಗುತ್ತಿಗೆ ಆಧಾರದ ಮೇಲೆ ಸರ್ಕಾರವೇ ದುಡಿಸುವುದು, (ಅದರ ಮುಖಾಂತರ ನೌಕರರಿಗೆ ಕೊಡಬೇಕಾದ ಪೂರ್ಣ ಪ್ರಮಾಣದ ವೇತನ, ರಜಾ ಸವಲತ್ತುಗಳು, ಪಿಎಫ್ ಇವ್ಯಾವುವನ್ನೂ ಕೊಡದೆ ಕೋಟ್ಯಂತರ ಹಣ ಉಳಿಸುವುದು) ಹೀಗೇ ಸಾಗುತ್ತದೆ ಸರ್ಕಾರಗಳ ಹೊಂಡ ತುಂಬಿಸುವ ಉಪಾಯಗಳು. ಪರಿಣಾಮ ನಾಯಿಕೊಡೆಗಳಂತೆ ಅನಧಿಕೃತ ಮೈಕ್ರೋಫೈನಾನ್ಸ್ ಕಂಪನಿಗಳು ಹುಟ್ಟಿಕೊಳ್ಳುವುದು, ನಾನ್ ಬ್ಯಾಂಕಿಂಗ್ ಫೈನಾನ್ಸ್‌ಗಳು ವ್ಯವಹಾರ ಮಾಡುವುದು, ಅವುಗಳು ಲೂಟಿ ಹೊಡೆಯುವುದು…, ದೂರು ಏಳುವುದು, ಸ್ವಲ್ಪ ದಿನ ಕೂಗಾಟ, ಕಿರುಚಾಟ, ಮತ್ತೆ ಅದೇ ದಿನಗಳು. ಸೂರ್ಯ ಹುಟ್ಟುವುದು, ಮುಳುಗುವುದು.. ಮೂಲ ಕಾರಣದತ್ತ ನೋಡದಂತೆ ಕೋಮುವಾದದ ಮುಸುಕು ಹಾಕುವುದು. ಸಾಮಾನ್ಯ ಜನರು ವಿವೇಕಶೂನ್ಯರಾಗಿ ಝಗಮಗಿಸುವ ಕೋಮುವಾದದ ಬೆಂಕಿಗೆ ದೀಪಕ್ಕೆ ಅಡರುವ ಹುಳುಗಳಂತೆ ಎರಗಿ ಸಾಯುವುದು. ಒಬ್ಬರು ಇನ್ನೊಬ್ಬರ ತಲೆ ಒಡೆದು ಬದುಕಲು ನೋಡುವುದು. ತನ್ನಂತೆಯೇ ಬಲಿಪಶುವಾದವರನ್ನೇ ತಿನ್ನಲು (ಮೋಸಗೊಳಿಸಲು, ಕದಿಯಲು) ನೋಡುವುದು. Cannibalism ಅಂದರೆ ಇದೇ. ಸಾಮಾನ್ಯ ಜನರು ಕ್ಯಾನಿಬಾಲ್ಸ್ ಆಗುವುದಕ್ಕೆ ಹತಾಶೆ ಮತ್ತು ಮೂಲ ಕಾರಣದ ಬಗ್ಗೆ ಇರುವ ಅಜ್ಞಾನವೇ ಕಾರಣ.
ಹೀಗಿರುವಾಗ ವಿವೇಚನಾ ಸಂವತ್ಸರ ಪ್ರಾರಂಭವಾಗುವುದೆಂದೋ???!!!
ವೃಂದಾ ಹೆಗಡೆ
ಅತಿಥಿ ಉಪನ್ಯಾಸಕರು
ಇದನ್ನೂ ಓದಿ- “ಷೇರು ಪೇಟೆಯ ಹಗರಣಗಳು ಮತ್ತು ಮತ ಬೇಟೆಯ ಹೂರಣಗಳು”