ವಿಚಿತ್ರವೆಂದರೆ ಕೆಲ ವರ್ಷಗಳ ಹಿಂದೆ ಖ್ಯಾತ ಚಾನೆಲ್ಲೊಂದು ಶಿಶುಲೈಂಗಿಕತೆಯ ಅಭಿರುಚಿ ಇಟ್ಟುಕೊಂಡಿರುವವರನ್ನು ಅನುಕಂಪದ ಧಾಟಿಯಲ್ಲಿ ಸಾಕ್ಷ್ಯಚಿತ್ರವೊಂದರಲ್ಲಿ ಬಿಂಬಿಸಿತ್ತು. ಸದ್ಯ ಎಪ್ಸ್ಟೀನ್ ಹಗರಣಗಳಲ್ಲಿ ಕಾಣುತ್ತಿರುವ ಒಳಸುಳಿಗಳನ್ನು ಗಮನಿಸುತ್ತಿದ್ದರೆ, ವಿಜ್ಞಾನದ ಗುರಾಣಿಯಡಿಯಲ್ಲಿ ಈ ಬಗೆಯ ಲೈಂಗಿಕ ಅಭಿರುಚಿಯನ್ನು ನಿಧಾನವಾಗಿ ಮುಖ್ಯವಾಹಿನಿಗೆ ತರಲಾಗುತ್ತಿರುವ ಅಪಾಯಗಳೂ ದಟ್ಟವಾಗಿ ಕಾಣುತ್ತಿವೆ – ಪ್ರಸಾದ್ ನಾಯ್ಕ್, ದೆಹಲಿ.
ಬರೋಬ್ಬರಿ ಹದಿನೈದು ವರ್ಷಗಳ ನಂತರ ಸ್ಟಾನ್ಲಿ ಕುಬ್ರಿಕ್ ನಿರ್ದೇಶನದ “Eyes Wide Shut” ಚಿತ್ರವನ್ನು ಮತ್ತೆ ನೋಡುತ್ತಿದ್ದೇನೆ.
ಮೊದಲ ಬಾರಿ ಈ ಚಲನಚಿತ್ರವನ್ನು ನೋಡಿದಾಗ ಇದೊಂದು ಸಾಮಾನ್ಯ ಎರೋಟಿಕ್ ಥ್ರಿಲ್ಲರ್ ನಂತಷ್ಟೇ ನನಗೆ ಕಂಡಿತ್ತು. ಆದರೆ ಎಪ್ಸ್ಟೀನ್ ಲೈಂಗಿಕ ಹಗರಣವು ಬಹಿರಂಗವಾಗಿ, ಹಲವು ಗಣ್ಯಾತಿಗಣ್ಯರ ಬೆಡ್ರೂಮ್ ರಹಸ್ಯಗಳೆಲ್ಲ ಬೀದಿಗೆ ಬಂದ ನಂತರ ಈ ಚಿತ್ರವನ್ನು ವೀಕ್ಷಿಸುವ ದೃಷ್ಟಿಕೋನವು ಬಹುತೇಕರಲ್ಲಿ ಏಕಾಏಕಿ ಬದಲಾಗಿಬಿಟ್ಟಿದೆ. ಇದು ನನ್ನನ್ನು ಸೇರಿದಂತೆ ಹಲವು ಚಲನಚಿತ್ರ ಪ್ರಿಯರ ಅಭಿಪ್ರಾಯವೂ ಹೌದು.
ಈ ಚಿತ್ರದ ಮುಖ್ಯ ಪಾತ್ರದಲ್ಲಿರುವುದು ಡಾ. ಬಿಲ್ ಎಂಬ ಹೆಸರಿನ ಓರ್ವ ಯಶಸ್ವಿ ವೈದ್ಯ. ಬಿಲ್ ತಕ್ಕಮಟ್ಟಿಗೆ ಖ್ಯಾತನಾಮನೂ ಆಗಿರುವುದರಿಂದ ಮಹಾನಗರದ ಸಿರಿವಂತರ ವರ್ಗದ ಪಾರ್ಟಿಗಳಲ್ಲಿ ಆಗಾಗ ಕಾಣಿಸಿಕೊಳ್ಳುವವನೂ ಹೌದು. ಇಂಥದೊಂದು ಪಾರ್ಟಿಯಲ್ಲಿ ಆತನಿಗೆ ನಿಕ್ ನೈಟಿಂಗೇಲ್ ಎಂಬ ಹಳೆಯ ಗೆಳೆಯನೊಬ್ಬ ಆಕಸ್ಮಿಕವಾಗಿ ಸಿಗುತ್ತಾನೆ. ಈತ ಬಿಲ್ ಜೊತೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದರೂ, ಮುಂದೆ ಈ ಕ್ಷೇತ್ರದಲ್ಲಿ ಮುಂದುವರಿಯದೆ ಓರ್ವ ಪಿಯಾನಿಸ್ಟ್ ಆಗಿ ಜೀವನೋಪಾಯವನ್ನು ಕಂಡುಕೊಂಡವನು. ಹೀಗಾಗಿ ಈ ಪಿಯಾನಿಸ್ಟ್ ಮೇಲ್ಮಧ್ಯಮ ವರ್ಗವನ್ನೂ ತಲುಪಿರದ ಓರ್ವ ಸಾಮಾನ್ಯ ನಾಗರಿಕನೆಂದು ನಾವಿಲ್ಲಿ ಹೇಳಬಹುದು.

ಹೀಗೆ ನಗರದ ಚಿಕ್ಕಪುಟ್ಟ ರೆಸ್ಟೊರೆಂಟ್ ಗಳಲ್ಲಿ ಬ್ಯಾಂಡ್ ಒಂದರ ಭಾಗವಾಗಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಈತ ಬಿಲ್ ಬಳಿ ಒಮ್ಮೆ ಸ್ವಾರಸ್ಯಕರ ಸಂಗತಿಯೊಂದನ್ನು ಹೇಳುತ್ತಾನೆ. ಅದೇನೆಂದರೆ ಆತ ಆಗಾಗ ಅಜ್ಞಾತ ಸ್ಥಳವೊಂದರಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾನೆ ಎಂಬುದು. ವಿಶೇಷವೆಂದರೆ ಈ ಅಜ್ಞಾತಸ್ಥಳಕ್ಕೆ ಆತನನ್ನು ರಹಸ್ಯವಾಗಿ ಕರೆದೊಯ್ಯಲಾಗುತ್ತದೆ. ನಂತರ ಆತನ ಕಣ್ಣಿಗೆ ಕಪ್ಪು ಬಟ್ಟೆಯೊಂದನ್ನು ಕಟ್ಟಿ ಪಿಯಾನೋ ನುಡಿಸುವಂತೆ ಹೇಳಲಾಗುತ್ತದೆ. ಹೀಗಾಗಿ ಅಲ್ಲಿ ಯಾರೆಲ್ಲ ಸೇರಿದ್ದಾರೆ, ಬಂದವರು ಏನೆಲ್ಲ ಮಾಡುತ್ತಿದ್ದಾರೆ ಎಂಬ ಕಿಂಚಿತ್ತು ಸುಳಿವೂ ಅವನಿಗಿರುವುದಿಲ್ಲ. ಆದರೆ ಒಮ್ಮೆ ಮಾತ್ರ ಅವನ ಕಣ್ಣಿಗೆ ಕಟ್ಟಿದ ಬಟ್ಟೆಯು ಕೊಂಚ ಸಡಿಲವಾಗಿ, ಆತ ಮೌನವಾಗಿಯೇ ಎಲ್ಲವನ್ನು ಗಮನಿಸುತ್ತಾನೆ. ತನಗೊಪ್ಪಿಸಿದ ಜವಾಬ್ದಾರಿಯನ್ನು ಮುಗಿಸಿದ ನಂತರ ತಾನು ಏನನ್ನೂ ಕಂಡಿಲ್ಲವೆಂಬಂತೆ ತೆಪ್ಪಗೆ ಅಲ್ಲಿಂದ ತೆರಳುತ್ತಾನೆ ಕೂಡ. “ಅಲ್ಲಿ ಎಂತೆಂಥಾ ಹೆಂಗಸರಿದ್ದರು ಗೊತ್ತಾ? ಅಲ್ಲಾಗುತ್ತಿದ್ದ ಸಂಗತಿಗಳನ್ನು ಹೇಳಲು ನನ್ನ ಬಳಿ ಪದಗಳೇ ಇಲ್ಲ ಮಾರಾಯ”, ಅಂತೆಲ್ಲ ನಿಕ್ ಅಂದು ಕಣ್ಣರಳಿಸಿ ಹೇಳುತ್ತಿದ್ದರೆ ಬಿಲ್ ನ ಕಣ್ಣುಗಳಲ್ಲಿ ಮುಗಿಯದ ಅಚ್ಚರಿ ಮತ್ತು ಕುತೂಹಲ.
ಅಂತೂ ಪಿಯಾನಿಸ್ಟ್ ಮಾತಿನ ಜಾಡು ಹಿಡಿದು, ಆತನನ್ನು ಪುಸಲಾಯಿಸಿ, ಹೇಗೋ ಆ ಅಜ್ಞಾತಸ್ಥಳವನ್ನು ಕಳ್ಳದಾರಿಯಲ್ಲಿ ತಲುಪುವ ಬಿಲ್ ಮುಂದೆ ಎಂತೆಂಥಾ ಸಂಗತಿಗಳಿಗೆಲ್ಲ ಸಾಕ್ಷಿಯಾಗುತ್ತಾನೆ, ವಿಷಜಾಲಗಳಲ್ಲಿ ಸಿಲುಕಿಕೊಳ್ಳುತ್ತಾನೆ ಎಂಬುದನ್ನು ತೆರೆದಿಡುತ್ತಾ ಹೋಗುತ್ತದೆ “Eyes Wide Shut”. ತಾನು ಮಹಾನಗರದ ಪ್ರತಿಷ್ಠಿತ ವೈದ್ಯರಲ್ಲೊಬ್ಬನಾಗಿದ್ದರೂ, ತನ್ನದು ಸಿರಿವಂತರ ವಲಯಗಳಲ್ಲಿ ಸಾಮಾನ್ಯವಾಗಿ ಕಾಣುವ ಪರಿಚಿತ ಮುಖವಾಗಿದ್ದರೂ ಈ ರಹಸ್ಯವು ತನಗೇಕೆ ಇಂದಿನವರೆಗೆ ಗೊತ್ತೇ ಇರಲಿಲ್ಲ ಎಂಬ ಅಚ್ಚರಿ ಅವನದ್ದು. ಮೇಲ್ನೋಟಕ್ಕೆ ಎಲ್ಲವೂ ಸಹಜವೆಂಬಂತೆ ಕಾಣುವ ಮಹಾನಗರ, ಸಮಾಜಕ್ಕೆ ಗಣ್ಯರೆಂಬಂತೆ ಕಾಣುವ ಮುಖಗಳು ಖಾಸಗಿ ಆವರಣಗಳ ಒಳಗೆ ರಹಸ್ಯವಾಗಿ ನಡೆಸುವ ವಿಚಿತ್ರ ಚಟುವಟಿಕೆಗಳು… ಹೀಗೆ ಶಹರದೊಳಗೆಯೇ ಹುಟ್ಟಿಕೊಂಡಿರುವ ರಹಸ್ಯ ದ್ವೀಪಗಳ ಬಗ್ಗೆ ತಣ್ಣಗಿನ ದನಿಯಲ್ಲಿ ಹೇಳುತ್ತದೆ ಈ ಚಿತ್ರ. ಅಸಲಿಗೆ ಇದುವೇ ಚಿತ್ರದ ಮುಖ್ಯ ಕಥಾಹಂದರವಾಗಿದ್ದರೂ ವಿವಾಹ, ನೈತಿಕತೆ-ಅನೈತಿಕತೆ, ವಾಂಛೆಯಂತಹ ಒಳಸುಳಿಗಳನ್ನು ಕೂಡ ಈ ಚಿತ್ರವು ಯಶಸ್ವಿಯಾಗಿ ಹಿಡಿದಿಟ್ಟಿರುವುದು ವಿಶೇಷ.
ಪ್ರತ್ಯೇಕತೆಗೊಂದು (Exclusivity) ಸಂಕೇತದಂತೆ ಕಾಣುವ ದ್ವೀಪವನ್ನು ನಮ್ಮ ಅದೆಷ್ಟೋ ಮಂದಿ ಕತೆಗಾರರು ಪ್ರತಿಮೆಗಳಾಗಿ ಬಳಸಿದ್ದುಂಟು. ಎಪ್ಸ್ಟೀನ್ ಲೈಂಗಿಕ ಹಗರಣವು ಇತ್ತೀಚೆಗೆ ಭುಗಿಲೆದ್ದಾಗ ಪುಟ್ಟ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಲೆಂದೇ ಐಷಾರಾಮಿ ಮಹಲುಗಳೊಂದಿಗೆ ವಿಶೇಷವಾಗಿ ಸಜ್ಜುಗೊಳಿಸಲಾಗಿದ್ದ ಲಿಟಲ್ ಸೈಂಟ್ ಜೇಮ್ಸ್ ದ್ವೀಪವು ಮತ್ತೊಮ್ಮೆ ಸುದ್ದಿಯಾಯಿತು. ಈ ಕಾರಣಗಳಿಂದಾಗಿಯೇ ಈ ದ್ವೀಪವನ್ನು “ಪೀಡೋ ಐಲ್ಯಾಂಡ್” ಎಂದು ಕರೆಯಲಾಗುತ್ತಿದ್ದಿದ್ದು, ದ್ವೀಪಕ್ಕೆ ಗಣ್ಯರ ಆಗಮನ-ನಿರ್ಗಮನಗಳಿಗೆ ಮೀಸಲಾಗಿದ್ದ ಖಾಸಗಿ ಜೆಟ್ ವಿಮಾನವು “ಲೊಲಿಟಾ ಎಕ್ಸ್-ಪ್ರೆಸ್” ಎಂಬ ಹೆಸರಿನಿಂದ ಕುಖ್ಯಾತಿಯನ್ನು ಗಳಿಸಿದ್ದು… ಹೀಗೆ ಜಗತ್ತಿನ ಸೋ-ಕಾಲ್ಡ್ ಆದರ್ಶವ್ಯಕ್ತಿಗಳೆಲ್ಲ ಸೇರಿ ಇಡೀ ವ್ಯವಸ್ಥೆಯನ್ನೇ ಒಂದು ಜೋಕ್ ಎಂದು ಕರೆದಂತಿತ್ತು.
ಎಪ್ಸ್ಟೀನ್ ನಂತಹ ವ್ಯಕ್ತಿಗಳ ಬಗ್ಗೆ, ಶತಕೋಟ್ಯಾಧಿಪತಿಗಳು ಕಳೆದ ಹಲವು ದಶಕಗಳಿಂದ ವ್ಯವಸ್ಥಿತವಾಗಿ ನಡೆಸುತ್ತಿರುವ ರಹಸ್ಯ ಚಟುವಟಿಕೆಗಳ ಬಗ್ಗೆ ಇಂತಹ ಸಿನೆಮಾ-ಕಾದಂಬರಿಗಳು ತೋರಿಸುವುದು ಒಂದು ಚಿಕ್ಕ ಭಾಗ ಮಾತ್ರ. ಸದ್ಯ ಅಮೆರಿಕನ್ ಸರಕಾರವು ಬಿಡುಗಡೆಗೊಳಿಸಿರುವ ರಹಸ್ಯ ಕಡತಗಳ ಅಸಲಿ ಸಂಖ್ಯೆಯೂ ಇಷ್ಟೇ. ಸಾಗರದಲ್ಲೊಂದು ಹನಿ ಎಂಬಷ್ಟು. ಆದರೆ ಎಪ್ಸ್ಟೀನ್ ಹಗರಣದಲ್ಲಿ ಇದೇ ಮೊದಲಬಾರಿ ಅಧಿಕೃತವಾಗಿ ಬೆಳಕಿಗೆ ಬಂದಿರುವ ಸಂಗತಿಗಳು ಯಾವುದೇ ಕತೆ-ಕಾದಂಬರಿ-ಸಿನೆಮಾಗಳಲ್ಲಿ ಬಂದುಹೋಗಿರುವ ಕಲ್ಪನೆಗಳಿಗಿಂತ ಸಾವಿರಾರು ಪಟ್ಟು ಹೆಚ್ಚು ಭಯಾನಕವಾಗಿವೆ. ಅತಿಮಾನುಷ ಶಕ್ತಿಗಳನ್ನು ಗಳಿಸಲು ನಡೆಸಲಾಗುವ ವಿಕ್ಷಿಪ್ತ ಪ್ರಯೋಗಗಳು, ಮಾನವ ಮಾಂಸಭಕ್ಷಣೆ, ವಿಕೃತಕಾಮ-ಚಿತ್ರಹಿಂಸೆಯ ಕಲ್ಪನೆಗಳನ್ನು ಮನರಂಜನೆಯ ಆಟವಾಗಿಸುವ ಪರಿ, ಇಂತಹ ಪ್ರಯೋಗಗಳಲ್ಲಿ ನಿರಂತರ ಬಲಿಪಶುಗಳಾಗುತ್ತಿರುವ ಸಾವಿರಾರು ಅಪ್ರಾಪ್ತ ವಯಸ್ಸಿನ ಅಮಾಯಕ ಮಕ್ಕಳು, ತಮ್ಮ ಅಮೂಲ್ಯ ಬಾಲ್ಯವನ್ನು ಶಾಶ್ವತವಾಗಿ ಕಳೆದುಕೊಂಡು ಸಿರಿವಂತ ಗಣ್ಯರಿಗಾಗಿ ಲೈಂಗಿಕ ಗುಲಾಮರಂತೆ ಬದುಕು ಸವೆಸುತ್ತಿರುವ ನತದೃಷ್ಟರು… ಇವುಗಳೆಲ್ಲವೂ ಕೂಡ ಮೇಲ್ನೋಟಕ್ಕೆ ಸರಳವಾಗಿ ಕಾಣುವ ನಮ್ಮ ಸಮಾಜದಲ್ಲಿ ಸದಾ ಇದ್ದ ಮತ್ತು ದಿನಗಳೆದಂತೆ ಮತ್ತಷ್ಟು ವೃದ್ಧಿಸುತ್ತಿರುವ ಜಾಲಗಳ ಕರಾಳತೆಯನ್ನು ತೋರಿಸಿವೆ.
ನನಗೆ ನೆನಪಿರುವಂತೆ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಅಂಕಿಅಂಶಗಳ ಸಮೇತ ಓದಿದಾಗ, ಮೊಟ್ಟಮೊದಲಿಗೆ ಬೆಚ್ಚಿಬೀಳಿಸಿದ್ದು ಪಿಂಕಿ ವಿರಾನಿಯವರ “Bitter Chocolate” ಎಂಬ ಕೃತಿ. ನಮ್ಮ ದೇಶದಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಅಪ್ರಾಪ್ತ ಮಕ್ಕಳ ಕಳ್ಳಸಾಗಾಣಿಕೆ ಮತ್ತು ಈ ಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ನಡೆಸುತ್ತಿರುವ ಹಲವಾರು ಶಕ್ತಿ / ಬೇನಾಮಿ ಸಂಸ್ಥೆಗಳ ಚಾಣಾಕ್ಷತೆಯನ್ನು ಇಲ್ಲಿ ಓದಿಯೇ ತಿಳಿಯಬೇಕು. ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡುವಾಗಲೆಲ್ಲ ಈ ಕೃತಿಯ ಪ್ರಸ್ತಾಪವು ಸಾಮಾನ್ಯವಾಗಿ ಕೇಳಿಬರುವುದು ಸದರಿ ಪುಸ್ತಕವು ಓದುಗರನ್ನು ಗಾಢವಾಗಿ ತಟ್ಟಿದ್ದಕ್ಕೂ ಸಾಕ್ಷಿ. ಇನ್ನು ಮಕ್ಕಳ ಪಾಲಿಗೆ ಸಿಹಿಯಾಗಬೇಕಾದ ಚಾಕೊಲೇಟುಗಳು ಕೃತಿಯ ಶೀರ್ಷಿಕೆಯಲ್ಲಿ “ಕಹಿ ಚಾಕೊಲೇಟ್” ಆಗಿ ಕಾಣಿಸಿಕೊಳ್ಳುವುದು ಸೂಕ್ತ ವಿಡಂಬನೆ.
ಸಾಮಾನ್ಯವಾಗಿ ಎಲ್ಲಾ ನಗರ-ಮಹಾನಗರಗಳಲ್ಲೂ ಇಂಥದೊಂದು “ರಹಸ್ಯ ಕಿಚಡಿ” ಕುದಿಯುತ್ತಲೇ ಇರುತ್ತದೆ. ಕೆಲವು ಎಲ್ಲರಿಗೂ ಗೊತ್ತಿರುವ ಓಪನ್ ಸೀಕ್ರೆಟ್ ಗಳಾಗಿದ್ದರೆ, ಇನ್ನು ಕೆಲವು ಥೇಟು ಹವೆಯಂತೆ ಅದೃಶ್ಯವಾಗಿರುತ್ತವೆ. ಒಂದೆರಡು ವರ್ಷಗಳ ಹಿಂದೆ ಬಹಿರಂಗವಾದ ಪ್ರಕರಣವೊಂದರಲ್ಲಿ ಉತ್ತರಪ್ರದೇಶದ ನೋಯ್ಡಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಹವೇಲಿ (ಬಂಗಲೆ)ಯಲ್ಲಿ ವ್ಯವಸ್ಥಿತ ಸ್ಟುಡಿಯೋ ಒಂದನ್ನು ಕಟ್ಟಿಕೊಂಡಿದ್ದ. ಈ ಸ್ಟುಡಿಯೋದಲ್ಲಿ ನೀಲಿಚಿತ್ರಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು ಮತ್ತು ಹಲವು ವರ್ಷಗಳ ಕಾಲ ನೂರಾರು ಹೆಣ್ಣುಮಕ್ಕಳು ಇಲ್ಲಿ ನಿರಂತರವಾಗಿ ಬಂದುಹೋಗುತ್ತಿದ್ದರು. ಇಷ್ಟಿದ್ದೂ ಇಲ್ಲಾಗುತ್ತಿರುವ ಚಟುವಟಿಕೆಗಳ ಬಗ್ಗೆ ಸ್ಥಳೀಯರಿಗೆ ಕಿಂಚಿತ್ತು ಸುಳಿವಿರಲಿಲ್ಲ. ಆದರೆ ಗ್ರಹಚಾರ ಕೆಟ್ಟಿತೆಂಬಂತೆ ಮಧ್ಯಮವರ್ಗದ ವ್ಯಕ್ತಿಯೊಬ್ಬನಿಗೆ ಹಣದ ಹೊಳೆಯೇ ಹರಿದು ಬಂದಾಗ, ಆಕಸ್ಮಿಕವಾಗಿ ಮಾಡಿದ್ದ ಕೆಲವು ಒಣಪ್ರತಿಷ್ಠೆಯ ನಡೆಗಳು, ಎಲ್ಲಾ ಗುಟ್ಟುಗಳನ್ನು ಬಿಟ್ಟಿಟ್ಟು ಆತನ ರಹಸ್ಯ ಸಾಮ್ರಾಜ್ಯವನ್ನು ನೆಲಸಮ ಮಾಡಿದ್ದವು.
ರಕ್ಷಕರೆಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿರುವ ಹಲವು ಸಂಸ್ಥೆಗಳು ಪುಟ್ಟ ಮಕ್ಕಳನ್ನು ವಿದೇಶಿ ನಾಗರಿಕರಿಗೆ ಮಾರಾಟ ಮಾಡುವ ಜಾಲಗಳ ಬಗ್ಗೆ ನಾವು ಆಗಾಗ ಓದುತ್ತಿರುತ್ತೇವೆ. ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟಿನ ಮಾನ್ಯತೆಯನ್ನು ಪಡೆದಿರುವ ಕೆಲ ಪ್ರತಿಷ್ಠಿತ ಸಂಸ್ಥೆಗಳ ಹೆಸರೂ ಇಲ್ಲಿ ಕೇಳಿಬಂದಿವೆ. 2026ರ ಜನವರಿ ತಿಂಗಳ ಮೊದಲ 15 ದಿನಗಳಲ್ಲಿ 350ಕ್ಕೂ ಹೆಚ್ಚು ನಾಪತ್ತೆ ಪ್ರಕರಣಗಳು ಕೇವಲ ದಿಲ್ಲಿಯೊಂದರಲ್ಲೇ ನಡೆದಿವೆ ಎಂದು ಹೇಳಲಾಗಿದೆ. ಸುದ್ದಿಮೂಲಗಳ ಪ್ರಕಾರ ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಕಾಲಾಂತರದಲ್ಲಿ ಅಂತರ್ಜಾಲದ ವ್ಯಾಪ್ತಿ ಮತ್ತು ಮಹಾನಗರಗಳಲ್ಲಿ ಕಾಸ್ಮೋಪಾಲಿಟನ್ ಸಂಸ್ಕೃತಿಯು ಹೆಚ್ಚಿದಂತೆ ವರ್ಜ್ಯವೆಂದು ಹೇಳಲಾಗುತ್ತಿದ್ದ ಹಲವು ಗುಟ್ಟಿನ ಸಂಗತಿಗಳಿಗೆ ದನಿಗಳು ದೊರೆತವು. ಆದರೆ ಅಂತಹ ಸಾಮಾಜಿಕ ದರ್ಜೆಯನ್ನು ಪಡೆದುಕೊಳ್ಳಲಾರದ ಇನ್ನೂ ಕೆಲವು ಸಂಗತಿಗಳು ಕೆಲ ಆಯ್ದ ವಲಯಗಳಲ್ಲೇ ರಹಸ್ಯವಾಗಿ ಉಳಿದುಕೊಂಡವು. ಭಾರತದ ಮಹಾನಗರಗಳಲ್ಲೂ ವಿವಿಧ ಬಗೆಯ ಲೈಂಗಿಕ ಪ್ರವೃತ್ತಿಯ ಬಗ್ಗೆ ಆಸಕ್ತಿಯುಳ್ಳ ಹಲವರು ತಮ್ಮ ಅಭಿರುಚಿಗನುಗುಣವಾಗಿ ರಹಸ್ಯವಾಗಿ ಗುಂಪು ಗಟ್ಟಿಕೊಳ್ಳುವುದು, ಚರ್ಚೆ-ಚಟುವಟಿಕೆಗಳಲ್ಲಿ ಭಾಗವಹಿಸುವುದು… ಇತ್ಯಾದಿಗಳನ್ನು ತಮ್ಮ ಪಾಡಿಗೆ ನಡೆಸುತ್ತಿರುತ್ತಾರೆ. ಸಹಜ ಕಾರಣಗಳಿಂದಾಗಿ ಇವುಗಳು ಬಹಳ ಗೌಪ್ಯವಾಗಿರುತ್ತವೆ ಕೂಡ. ಸಾಮಾನ್ಯವಾಗಿ ವಿದ್ಯಾವಂತರೇ ಹೆಚ್ಚಿರುವ ಹಲವು ಸ್ತರದ ಮಂದಿಯನ್ನು ನಾವಿಲ್ಲಿ ಕಾಣಬಹುದು.

ನಂತರ ಬರುವುದು ಎಪ್ಸ್ಟೀನ್ ನಂತಹ ಮಂದಿ. ಈ ವರ್ಗದವರು ನಾಡಿನ ಶಕ್ತಿಕೇಂದ್ರಗಳಲ್ಲಿ ತಮ್ಮದೇ ಆದ ಮಹತ್ವದ ಪಾತ್ರವನ್ನು ವಹಿಸುವ ಬಲಿಷ್ಠರು. ದುರಾದೃಷ್ಟವಶಾತ್ ಭಾರತದಲ್ಲಿ ಗೋವಾದಂತಹ ರಾಜ್ಯಗಳು ಪಿಡೋಫಿಲಿಕ್ ಸ್ವರ್ಗಗಳೆಂಬ ಕುಖ್ಯಾತಿಯನ್ನು ಪಡೆದಿವೆ. ದಿಲ್ಲಿ-ಆಗ್ರಾ-ಜೈಪುರಗಳನ್ನು ಕೂಡ ಈ ನಿಟ್ಟಿನಲ್ಲಿ “ಗೋಲ್ಡನ್ ಟ್ರಯಾಂಗಲ್” ಎಂದು ಸಾಂಕೇತಿಕ ಭಾಷೆಯಲ್ಲಿ ಕರೆಯಲಾಗುತ್ತದೆ. ವಿಚಿತ್ರವೆಂದರೆ ಕೆಲ ವರ್ಷಗಳ ಹಿಂದೆ ಖ್ಯಾತ ಚಾನೆಲ್ಲೊಂದು ಶಿಶುಲೈಂಗಿಕತೆಯ ಅಭಿರುಚಿ ಇಟ್ಟುಕೊಂಡಿರುವವರನ್ನು ಅನುಕಂಪದ ಧಾಟಿಯಲ್ಲಿ ಸಾಕ್ಷ್ಯಚಿತ್ರವೊಂದರಲ್ಲಿ ಬಿಂಬಿಸಿತ್ತು. ಸದ್ಯ ಎಪ್ಸ್ಟೀನ್ ಹಗರಣಗಳಲ್ಲಿ ಕಾಣುತ್ತಿರುವ ಒಳಸುಳಿಗಳನ್ನು ಗಮನಿಸುತ್ತಿದ್ದರೆ, ವಿಜ್ಞಾನದ ಗುರಾಣಿಯಡಿಯಲ್ಲಿ ಈ ಬಗೆಯ ಲೈಂಗಿಕ ಅಭಿರುಚಿಯನ್ನು ನಿಧಾನವಾಗಿ ಮುಖ್ಯವಾಹಿನಿಗೆ ತರಲಾಗುತ್ತಿರುವ ಅಪಾಯಗಳೂ ದಟ್ಟವಾಗಿ ಕಾಣುತ್ತಿವೆ.
ಸ್ವತಃ ಅವರೇ ಹೇಳುವಂತೆ ಒಂದು ಕಾಲದಲ್ಲಿ ಹಲವು ಪ್ರಖ್ಯಾತ ಸಿರಿವಂತರ “ಸೆಕ್ಸ್ ಸ್ಲೇವ್” ಆಗಿದ್ದ ಅನೆಕ್ ಲುಕಾಸ್ ಎಂಬ ಮಹಿಳೆಯೊಬ್ಬರು, ಎಲೀಟ್ ವರ್ಗದಡಿ ಬರುವ ಗಣ್ಯಾತಿಗಣ್ಯರನ್ನು ಲೈಂಗಿಕವಾಗಿ ಸಂತೃಪ್ತಪಡಿಸಲು ತಮಗೆ ಯಾವ ಬಗೆಯ ತರಬೇತಿಯನ್ನು ವರ್ಷಗಟ್ಟಲೆ ನೀಡಲಾಯಿತು ಎಂಬುದನ್ನು ಮಾಧ್ಯಮಗಳಿಗೆ ನೀಡಿರುವ ಸಂದರ್ಶನಗಳಲ್ಲಿ ವಿವರವಾಗಿ ತಿಳಿಸಿದ್ದಾರೆ. ಆಗ ಆಕೆ ಕೇವಲ 9-10 ವರ್ಷದ ಬಾಲಕಿಯಾಗಿದ್ದರು.
ಮಾನವ ತನ್ನ ಮನದೊಳಗಿನ ಕರಾಳ ವಾಂಛೆಗಳನ್ನು ತೀರಿಸಿಕೊಳ್ಳಲು ಯಾವ ಮಟ್ಟಿಗೆ ಇಳಿಯಬಲ್ಲ ಎಂಬುದಕ್ಕೆ ಅನೆಕ್ ಲುಕಾಸ್ ಓರ್ವ ಜೀವಂತ ಉದಾಹರಣೆ!
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿಅಡಿಷನಲ್ ಎಂಜಿನಿಯರ್ ಆಗಿ ಸೇವೆಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. ಇವರು ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ- ಎಫ್ಸ್ಟೀನ್ ಫೈಲ್ಸ್ ಭಾಗ-1 | ಸತ್ಯಗಳ ಸಂತೆಯಲ್ಲಿ ಬ್ಲ್ಯಾಕ್ಮೇಲ್ ದಂಧೆಗಿಳಿಯಿತೇ ಅಮೆರಿಕಾ?


