ಭಾರತದ ʼಆರ್ಥಿಕತೆ ಏರುವಿಕೆʼಯ  ಹಿಂದಿನ ಕರಾಳ ಕಥೆ

Most read

1989ರಿಂದ ಪ್ರಾರಂಭಗೊಂಡು ಭಾರತದ ಸ್ಟಾಕ್ ಮಾರ್ಕೆಟ್ ಇಂಡೆಕ್ಸ್ ನ ಕಡ್ಡಿ ಥರ್ಮಾಮೀಟರಿನ ಪಾದರಸ ಕಡ್ಡಿಯಂತೆ ಹುಚ್ಚಾಪಟ್ಟೆ ಏರಿತು. 1992ರ ವೇಳೆಗೆ ನೋಡನೋಡುತ್ತಿದ್ದಂತೆ ಸೆನ್ಸೆಕ್ಸ್ ತುಟ್ಟತುದಿ ತಲುಪುವತ್ತ ಏರುತ್ತಾ ಹೋಯಿತು. ಈ ಏರುವಿಕೆಯ ಅಸಹಜತೆಯ ಅಸಲೀಯತ್ತು ಇವತ್ತಿಗೂ ಸಹಜತೆಯ ಮುಖವಾಡ ತೊಟ್ಟು ಜನರನ್ನು ಮೋಸಗೊಳಿಸುತ್ತಲೇ ಇದೆ. ಮುಖವಾಡದ ಹಿಂದಿನ ಸತ್ಯವನ್ನು ಬಯಲುಗೊಳಿಸುವ ಪ್ರಯತ್ನ ಇಲ್ಲಿದೆ -ವೃಂದಾ ಹೆಗಡೆ. ಅತಿಥಿ ಉಪನ್ಯಾಸಕರು.

ಅದು ತುರಮುಖಂ ಎಂಬ ಮಲೆಯಾಳಿ ಸಿನೆಮಾ. ಹಡಗು ಕಟ್ಟೆ (ಬಂದರು) ಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಆಯ್ದುಕೊಳ್ಳುವ ಚಪ್ಪಾ ಪದ್ಧತಿ. ಚಪ್ಪಾ ಅಂದರೆ ಟೋಕನ್ ಎಸೆದು ಕಾರ್ಮಿಕರನ್ನು ಆಯ್ದುಕೊಳ್ಳುವ ಒಂದು ಕ್ರಮ. ಹೇಗೆಂದರೆ… ಸಾವಿರಾರು  ಕಾರ್ಮಿಕರು ಅಂಗಳದಲ್ಲಿ ನೆರೆಯುವುದು, ನೂರಾರು ಟೋಕನ್ ಕಾಯಿನ್ ಗಳನ್ನು ಅವರ ಮೇಲೆ ಕಾಂಟ್ರಾಕ್ಟರನ ಕಡೆಯವರು ಎಸೆಯುವುದು. ಹಾಗೆ ಎಸೆದ ಟೋಕನ್ ಹಿಡಿಯಲು ನೂಕುನುಗ್ಗಾಟ ನಡೆಯುವುದು. ಟೋಕನ್ ಸಿಕ್ಕವರು ಆ ದಿನದ ಮಟ್ಟಿಗೆ ಅದೃಷ್ಟವಂತರು. ಅದೃಷ್ಟ ಏನೆಂದರೆ ಆ ದಿನದ ಕೆಲಸ ಹಾಗೂ ಕೂಲಿ ಸಿಗುತ್ತದೆ. ಇನ್ನುಳಿದ ಸಾವಿರಾರು ಜನರಿಗೆ ಹೊಟ್ಟೆಯ ಮೇಲೆ ತಣ್ಣೀರು ಪಟ್ಟಿಯೇ ಗತಿ.

ಹೀಗಿರುವಾಗ ಕೂಲಿ ಎಷ್ಟು  ಎಂಬುದು ನಮ್ಮ ಊಹೆಗೆ ಬಿಟ್ಟ ವಿಚಾರ.’ ಸಾಕಷ್ಟು ‘ ಎಂಬುದು ಯಾರ ಊಹೆಯಲ್ಲೂ ಇರದು.

ಕಿಕ್ಕಿರಿದ ಜನರ ಮೇಲೆ ಟೋಕನ್‌ಗಳನ್ನು ಎಸೆದಾಗ ಅದನ್ನು ಹಿಡಿಯಲು ಪರದಾಡುವ ದೃಶ್ಯ  ನೋಡುಗರ ಎದೆಗೆ ನೇರವಾಗಿ ಬಿಟ್ಟ ಬಾಣದಂತಿದೆ. ಟೋಕನ್ ಸಿಕ್ಕವರ ಖುಷಿ  ಮತ್ತು ಸಿಗದವರ ವಿಷಾದ ಎರಡರ ಹಿಂದೆಯೂ ಅಪಾರ ನೋವಿದೆ. ಖುಷಿ ಆ ದಿನದ್ದು ಮಾತ್ರ. ನಾಳೆಯ ಗ್ಯಾರಂಟಿಯೇ ಇಲ್ಲದ ಬದುಕು, ನೋವು ಎಲ್ಲಾ ದಿನಗಳದ್ದು. ಇದು 40-50ರ ದಶಕದಲ್ಲಿ ಕೇರಳದ ಮಟ್ಟನ್ ಚೆರ್ರಿ ಬಂದರಿನಲ್ಲಿ ಕಾರ್ಮಿಕರು ಚಪ್ಪಾ ವ್ಯವಸ್ಥೆಯ ವಿರುದ್ಧ ಎದ್ದ ಬಂಡಾಯದ ಕಥೆ.

ಓಹ್!! ಆಗಿನ ಕಾಲದ್ದು ಎಂದು ನಿಟ್ಟುಸಿರು ಬಿಡುವ ಹಾಗಿಲ್ಲ. ಈ ದೃಶ್ಯ ಇಂದಿನ ಭಾರತದ ಸ್ಥಿತಿಗೆ ಪೂರ್ಣಪ್ರಮಾಣದ ರೂಪಕದಂತಿದೆ. ವಾಸ್ತವವು ಉದ್ಯೋಗ /ನಿರುದ್ಯೋಗ ದ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ನೂರು ಚಿಲ್ಲರೆ ಖಾಲಿ ಹುದ್ದೆಗಳಿಗೆ ಅಪರೂಪದಲ್ಲಿ ಅಧಿನಿಯಮ ರೂಪಿಸಿ ಅಧಿಕೃತವಾಗಿ ಅರ್ಜಿ ಆಹ್ವಾನಿಸಿದಾಗ ಬರುವ ಅರ್ಜಿಗಳು ಲಕ್ಷಗಳಷ್ಟು.!! ಮೊನ್ನೆ ಮೊನ್ನೆ ಯಾವುದೋ ಇಲಾಖೆಯಲ್ಲಿ ಕಸಗುಡಿಸುವ ಕೆಲಸಕ್ಕೆ ನಲ್ವತ್ತು ಸಾವಿರ ಅರ್ಜಿಗಳು! ಅವುಗಳಲ್ಲಿ ಹೆಚ್ಚಿನವರು ಇಂಜಿನಿಯರಿಂಗ್ ಪದವೀಧರರು ಎಂಬುದು ಆತಂಕ ಉಂಟು ಮಾಡಿದ ಸಂಗತಿಯಾಗಿತ್ತು. ಸಾವಿರ ಚಿಲ್ಲರೆ ಪಿಡಿಓ ಪೋಸ್ಟಿಗೆ ಐದು ಲಕ್ಷ ಅರ್ಜಿಗಳು!!

ನಿರುದ್ಯೋಗ- ಸಾಂದರ್ಭಿಕ ಚಿತ್ರ

ಇದ್ಯಾಕೆ ಹೀಗೆ? ನಿರುದ್ಯೋಗ ಯಾಕೆ ಸೃಷ್ಟಿ ಆಗುತ್ತದೆ?  ಸಾಮ್ರಾಜ್ಯಶಾಹಿ ಬ್ರಿಟಿಷರು ಬಿಟ್ಟು ಹೋದ ಮೇಲೂ ನಮ್ಮದೇ ದೇಶದಲ್ಲಿ 75 ವರ್ಷಗಳ ಬಳಿಕವೂ ಸ್ಥಿತಿ ಹದಗೆಡುತ್ತಲೇ ಹೋಗುತ್ತಿದೆ ಏಕೆ? ಹತ್ತಿರದಲ್ಲೆಲ್ಲೂ ಪರಿಹಾರ ಕಾಣುತ್ತಿಲ್ಲವೇಕೆ?

ನಿರಾಯಾಸವಾಗಿ ರಾಜಕಾರಣಿಗಳತ್ತ, ಆಡಳಿತದಲ್ಲಿರುವ ಪಕ್ಷ, ಅದರ ಸಿದ್ಧಾಂತ ಇವುಗಳೆಡೆ ಆರೋಪ ಹೊರಳುತ್ತದೆ. ಆರೋಪ, ಪ್ರತ್ಯಾರೋಪಗಳ ರಾಜಕಾರಣವೇ ಸಮಸ್ಯೆಯ ಉಗಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಪ್ರಶ್ನೆ ಉಳಿದೇ ಹೋಗುತ್ತದೆ. ರಾಜಕಾರಣ ಯಾಕಿಷ್ಟು ಮಾನವ ವಿರೋಧಿ? ಅದೂ ಪ್ರಪಂಚಕ್ಕೇ ಮಾದರಿಯೆನಿಸಿದ ಬೃಹತ್ ಪ್ರಜಾತಾಂತ್ರಿಕ ದೇಶದಲ್ಲಿ? ಯಾವ ಉತ್ತರವೂ ತೃಪ್ತಿದಾಯಕವಲ್ಲ. ಸಂತ್ರಸ್ತರ ಮನಸ್ಸು ಉತ್ತರ ಹುಡುಕುತ್ತಲೇ ಇರುತ್ತದೆ.

ಅತೀ ಸುಲಭವಾಗಿ ಕೖಗೆಟಕುವ ಉತ್ತರವೇ ವಿಧಿ, ದೇವರು. ಅದನ್ನೇ ನಂಬುವ ಸಾಮಾನ್ಯ ಜನರು ಮತ್ತು ಅದನ್ನು ತಮ್ಮ ಲಾಭಕ್ಕೆ ಹೀನಾಯವಾಗಿ ಬಳಸಿಕೊಂಡ ಒಂದು ವರ್ಗ, ಈ ವಿಚಾರ ಎಲ್ಲರಿಗೂ ತಿಳಿದದ್ದೇ. ಅದೇ ಬೇರೆ ಕಥೆ.

ವಾಸ್ತವದಲ್ಲಿ ಹುಡುಕುವಾಗ ಹುಡುಕಾಟ ಆರ್ಥಿಕ ರೀತಿ ನೀತಿಗಳಲ್ಲಿಗೆ ಬಂದು ನಿಲ್ಲುತ್ತದೆ. ಸ್ವಾತಂತ್ರ್ಯಾ ನಂತರ ಅನ್ನದ ಬಟ್ಟಲನ್ನು ತುಂಬಿಸಿಕೊಳ್ಳಲು ಹಸಿರು ಕ್ರಾಂತಿ, (ಅದರ ರೂವಾರಿ ಎಂ ಎಸ್ ಸ್ವಾಮಿನಾಥನ್  ಹೇಳಿದ್ದನ್ನು ಕೇಳಿದ್ದರೆ ಈಗದಕ್ಕೆ ಇರುವ ಅಪವಾದ ತಪ್ಪುತ್ತಿತ್ತು. ಸ್ವಾಮಿನಾಥನ್ ತುರ್ತಿನ ಹಸಿವು ಹಿಂಗಿದ ತಕ್ಷಣ ಪಾರಂಪರಿಕ ವ್ಯವಸಾಯ ಅಂದರೆ ಸಾವಯವ ವ್ಯವಸಾಯಕ್ಕೆ ಹಿಂತಿರುಗಬೇಕೆಂದು ಒತ್ತಾಯಿಸಿದ್ದರು.), ಪಂಚವಾರ್ಷಿಕ ಯೋಜನೆಗಳು, ಕೈಗಾರಿಕೀಕರಣ ಮುಂತಾದ ಯೋಜನೆಗಳಿಂದ ನಿಧಾನವಾಗಿ ಜನಜೀವನ ಸುಧಾರಿಸಿಕೊಳ್ಳುತ್ತಿದೆ ಎನ್ನುವ ಹೊತ್ತಿಗೆ…..

ಮನೆಯೊಡೆಯ ಅಂದರೆ ದೇಶದ ನಾಯಕರು ಖೋತಾ ಬಜೆಟ್, ಅಂತಾರಾಷ್ಟ್ರೀಯ ಸಾಲ, ಉತ್ಪನ್ನದ ಕೊರತೆ ಇವುಗಳನ್ನು ಬ್ಯಾಲೆನ್ಸ್ ಮಾಡಲು ಹೆಣಗುತ್ತಿದ್ದರು. ಹ್ಞಾ! ಆಗ ನನ್ನಪ್ಪನ ಪರಿಸ್ಥಿತಿಯೂ ಹೀಗೇ ಇತ್ತು. ತಿಂಗಳ ಸಂಬಳ ತಿಂಗಳಿಡೀ ಉಂಡು ಉಡಲು ಸಾಲುತ್ತಿರಲಿಲ್ಲ. ಮನೆ ಕಟ್ಟಿಸಿದ ಸಾಲ ತಲೆ ಮೇಲೆ. ಆಗ ನನ್ನ ತಾಯಿಯ ಆಕ್ಷೇಪಕ್ಕೆ ನನ್ನ ತಂದೆಯ ಉತ್ತರ “ದೇಶವೇ ಸಾಲ ಮಾಡಿಕೊಂಡಿದೆ. ಇನ್ನು ನಮ್ಮದು ಯಾವ ಲೆಕ್ಕ? ಸ್ವಲ್ಪ ಸಮಾಧಾನದಿಂದಿರು. ಸಾಲ ತೀರಿಸುತ್ತೇನೆ” ಎಂಬುದಾಗಿತ್ತು. ಈಗ ಸ್ಪಷ್ಟವಾಗಿ ನನ್ನಪ್ಪನ ಪರಿಸ್ಥಿತಿ ಅರ್ಥವಾಗುತ್ತಿದೆ. ದೇಶ ಕೂಡಾ ಆರ್ಥಿಕ ಸಬಲತೆಗಾಗಿ ದೊಡ್ಡ ದೊಡ್ಡ ಡ್ಯಾಮ್ ಕಟ್ಟಿಸಲು ತೊಡಗಿತ್ತು. ನೆಹರೂ “ದೊಡ್ಡ ಡ್ಯಾಮ್‌ಗಳು ಆಧುನಿಕ ಭಾರತದ ದೇವಾಲಯಗಳು” ಎಂದಿದ್ದನ್ನು ನೆನಪಿಸಿಕೊಳ್ಳೋಣ. ಮಾಡಿದ ಸಾಲವನ್ನು ತೀರಿಸಲು ಇನ್ನಿಲ್ಲದ ಉಪಾಯಗಳನ್ನು ಹುಡುಕುತ್ತಲೇ ಇದ್ದಾಗ ಆರ್ಥಿಕ ತಜ್ಞರು ಮತ್ತು ರಾಜಕೀಯ ನಾಯಕರು ವಿದೇಶೀ ಬಂಡವಾಳ ಹೂಡಿಕೆಯತ್ತ ಗಮನ ಹರಿಸಿದ್ದು, ಅದು ಉದಾರೀಕರಣ, ಜಾಗತೀಕರಣದತ್ತ ಜಾರಿದ್ದು ಈಗ ಇತಿಹಾಸ.

ಒಂದೆಡೆ ಇವತ್ತಿನ ಹೊಟ್ಟೆ ತುಂಬಿಸಿಕೊಳ್ಳುವ ಅಂದರೆ ದೇಶವಾಸಿಗರ ಹಸಿವು ನೀಗಿಸುವ ಚಿಂತೆ. ಇನ್ನೊಂದೆಡೆ ನಾಳಿನ ಭದ್ರತೆಗಾಗಿ ಹೂಡಿದ ಬಂಡವಾಳಕ್ಕೆ ಮಾಡಿದ ಸಾಲ ತೀರಿಸುವ ಚಿಂತೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಡೀ ವಿಶ್ವವೇ ಜಾಗತೀಕರಣದತ್ತ ದಾಪುಗಾಲು ಹಾಕುತ್ತಿದ್ದ ಸಮಯವದು. ಉದಾರೀಕರಣಕ್ಕೆ ವಾಲುವುದೊಂದೇ ಉಳಿದಿರುವ ಮಾರ್ಗ ಎಂಬುದು ಮೊಂಟೆಕ್ ಸಿಂಗ್ ಅಹ್ಲುವಾಲಿಯ ಅವರ M ಡಾಕ್ಯುಮೆಂಟ್ ಪುಸ್ತಕ ಓದಿದಾಗ ತಿಳಿಯುತ್ತದೆ. ( ಕನ್ನಡಕ್ಕೆ ರಾಜಾರಾಮ್ ತಲ್ಲೂರ್, ಅಹರ್ನಿಶಿ ಪ್ರಕಾಶನ) ಆಗ ಶುರುವಾದದ್ದು ಮನೆಯವರೇ ಮನೆಗೆ ಕನ್ನ ಹಾಕುವ ಹೀನ ಕ್ರಿಯೆಗಳು. ಇದನ್ನು 2023 ಡಿಸೆಂಬರ್ 15 ರ ಫ್ರಂಟ್ ಲೈನ್ ಪಾಕ್ಷಿಕದಲ್ಲಿ ಡಾ. ಅಶೋಕ ಮೋದಿಯವರು  “ಕಡಿವಾಣವಿಲ್ಲದ ಆರ್ಥಿಕ ಬಂಡವಾಳಶಾಹಿ’- Lawless financial capitalism -ಎಂದು ವಿಸ್ತೃತವಾಗಿ ಚರ್ಚಿಸಿದ್ದಾರೆ.

ಕಣ್ಣಿಗೆ ರಾಚುವಂತೆ ಏರತೊಡಗಿದ ಭಾರತದ ಸ್ಟಾಕ್ ಮಾರ್ಕೆಟ್ಟಿನ ಸೂಚ್ಯಂಕದ ಹೊಸ ಏರುವಿಕೆ ಹೊರ ಜಗತ್ತಿಗೆ ಭಾರತದ ಆರ್ಥಿಕತೆಯ ಏರುವಿಕೆ ಎಂದೇ ತೋರುತ್ತಿತ್ತು. ಆದರೆ ಯಾವುದೇ ವಲಯದಲ್ಲಿ ಯಾವುದೇ ತರದ ಉತ್ಪಾದನೆ ಇಲ್ಲದಾಗ್ಯೂ, ರಾಜಕೀಯ ಕೂಡಾ ಸ್ಥಿರತೆ ಇಲ್ಲದೆ ಗೊಂದಲದಲ್ಲಿದ್ದಾಗ್ಯೂ ಒಂದೇ ಸಮ ಏರುಗತಿಯಲ್ಲಿ ಆರ್ಥಿಕತೆ ಓಡಿದ್ದಾದರೂ ಹೇಗೆ?

ದುರದೃಷ್ಟವಶಾತ್ ಈ ಸೂಚ್ಯಂಕದ ಏರುಗತಿ ಸಂಪೂರ್ಣ ಸುಳ್ಳು. ಈ ಸುಳ್ಳನ್ನು ಸೃಷ್ಟಿ ಮಾಡಿದ್ದು ಕೆಲವು ಭಯಂಕರ ಬುದ್ಧಿವಂತ ದಗಾಕೋರರು. ಹರ್ಷದ್ ಮೆಹ್ತಾ ಸಿಕ್ಕಿಬಿದ್ದವರಲ್ಲಿ ಮೊದಲಿಗರು. ಇಡೀ ದೇಶದ ಜನಮಾನಸಕ್ಕೆ ಸುಳ್ಳಿನ ಬಲೆ ಬಿದ್ದಾಗಿತ್ತು.. ಬಲೆಯನ್ನು ಹರಿಯುವ, ಬಿಡಿಸಿ ಹೊರಬರುವ ಪ್ರಯತ್ನ ಆಗದೇ ಅದರೊಳಗೇ ಬದುಕುವ, ಪಾಲಿಗೆ ಬಂದದ್ದನ್ನು ಬಾಚಿಕೊಳ್ಳುವ ಬದುಕು ಎಲ್ಲರದಾಯಿತು. ಸುಳ್ಳು ಸಹಜ ಮತ್ತು ಸಾಮಾನ್ಯವಾಗಿ ಹೋಯ್ತು. ಅದೇ ಬದುಕಿನ ಧರ್ಮವಾಗಿ ಹೋದದ್ದು ದುರಂತವಾದರೂ ಸುಳ್ಳನ್ನು ಆಯುಧವಾಗಿಸಿ ಗೆದ್ದವರಿಗೆ ಸಾಧನೆಯೆನಿಸಿತು. ಮತ್ತು ಸೋತವರಿಗೆ ದುರಂತದ ಮೂಲ ಕಾಣಿಸಲೇ ಇಲ್ಲ. ಈ ಅಗೋಚರ ಮೂಲವೇ ಎಲ್ಲಾ ಸಮಸ್ಯೆಯ ಮೂಲ. ಅದರ ಬಗ್ಗೆ. ಸ್ವಲ್ಪ ಅರಿಯೋಣ.

ಹರ್ಷದ್ ಮೆಹ್ತಾನ ದೋಖಾಬಾಜಿ ಹೇಗೆಂದರೆ ಶೇರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಸುಳ್ಳು ಸುಳ್ಳೇ ಅದರ ಬೆಲೆ ಮಾರುಕಟ್ಟೆಯಲ್ಲಿ ಏರುವಂತೆ ಮಾಡಿ ಹೆಚ್ಚಿನ ಬೆಲೆಗೆ ಮಾರಿ ಬಿಡುವುದು. ನಂತರದ ಆಗುಹೋಗುಗಳಿಗೆ ಅವನು ಜವಾಬ್ದಾರನಲ್ಲ. ಸುಳ್ಳು ಸೂಚ್ಯಂಕ ನಂಬಿದ ಹೂಡಿಕೆದಾರರು ಅದರಲ್ಲೂ ಸಾಮಾನ್ಯರು ಮೋಸ ಹೋದರು ಅಷ್ಟೇ. ಇಲ್ಲಿ ಯಾವುದಕ್ಕೂ ಯಾರೂ ಹೊಣೆಗಾರರಲ್ಲ. ಹರ್ಷದ್ ಮೆಹ್ತಾನಿಗೆ ಐನೂರು ಕೋಟಿ ರುಪಾಯಿ ಬಡ್ಡಿ ರಹಿತ ಸಾಲ ಕೊಟ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಜವಾಬ್ದಾರ ಆಗಲಿಲ್ಲ.!!! ಈ ರೀತಿಯ ವ್ಯವಹಾರಗಳನ್ನು ಪರೀಕ್ಷಿಸಿ (inspect) ತನ್ನ ಕಣ್ಣಳತೆಯಲ್ಲಿ ಇಂತಹಾ ಸಂಸ್ಥೆಗಳನ್ನು ಇಟ್ಟುಕೊಳ್ಳಬೇಕಿದ್ದ ರಿಸರ್ವ್ ಬ್ಯಾಂಕ್ ಕೂಡಾ ಜವಾಬ್ದಾರ ಅನಿಸಿಕೊಳ್ಳಲಿಲ್ಲ. ಕಣ್ಣಿಗೆ ರಾಚುವಂತಿದ್ದ ಪ್ರಕರಣ ರಿಸರ್ವ್ ಬ್ಯಾಂಕಿನ ಕಣ್ಣಿಗೆ ಕಾಣದಾದಾಗ ಆ ಕುರುಡು ರೂಢಿಯಾಗಿ ಹೋಯ್ತು. (A feet that became a habit- page 13.)

ಹರ್ಷದ್ ಮೆಹ್ತಾ

ಸಾಮಾನ್ಯ ಮಧ್ಯಮವರ್ಗದ ಹಿನ್ನೆಲೆಯ ಮೆಹ್ತಾ ಅಸಾಮಾನ್ಯ ಶ್ರೀಮಂತನಾದದ್ದು ಅವನನ್ನು ಜನಸಾಮಾನ್ಯರ ಕಣ್ಣುಗಳಲ್ಲಿ  ಹೀರೋ ಆಗಿಸಿತು. ಬಂಧನಕ್ಕೊಳಗಾಗಿದ್ದರೂ ಜನರ ಮನಸ್ಸಿನಲ್ಲಿ ಹೀರೋ ಆಗಿಯೇ ಉಳಿದ. ಅವನ ಅಕಾಲ ಮರಣ ಅವನ ದೋಖಾಬಾಜಿಯ ತನಿಖೆಯ ವಿವರವನ್ನೂ ಮುಗಿಸೇಬಿಟ್ಟಿತು. ಅಶೋಕ್ ಮೋದಿ ಹೇಳುತ್ತಾರೆ ‘ಆದಾಯ ತೆರಿಗೆ ಇಲಾಖೆ ಇವತ್ತಿಗೂ ಮೆಹ್ತಾನ ಹೆಂಡತಿಯನ್ನು ಬೆಂಬತ್ತಿದೆ.. ಆದರೆ ಮೆಹ್ತಾ ಜನರ ಕಣ್ಣಲ್ಲಿ ಹೀರೋ ಆಗಿಬಿಟ್ಟ.’ ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಆದಾಯ ತೆರಿಗೆ ಇಲಾಖೆ ಮಾತ್ರ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಆದರೆ ಮೆಹ್ತಾ ಮಾಡಿದ ಅಪರಾಧ ತೆರಿಗೆ ವಂಚನೆ ಮಾತ್ರ ಅಲ್ಲ. ಇಡೀ ದೇಶದ ಆರ್ಥಿಕ ನಡೆಯನ್ನು ದಿಕ್ಕು ತಪ್ಪಿಸುವ ಕೆಲಸ. ಇದು ಆಕರ್ಷಕ (catchy) ಅನ್ನಿಸಿದ್ದು, ಜನ ಅದನ್ನು ಬಿಸಿನೆಸ್ ನಡೆಸುವ ಮಾದರಿ ಎಂದುಕೊಂಡಿದ್ದು ದುರಂತ. ಆರ್ಥಿಕ ವಲಯ ದಿಟದಲ್ಲಿ ಅರಾಜಕತೆಯನ್ನು ಮೈಮೇಲೆ ಹಾಕಿಕೊಂಡಿತು. ಈ ಅರಾಜಕತೆಯ ಮುಂದುವರಿಕೆಯೇ ಈಗಿನ ಹಾಹಾಕಾರಕ್ಕೆ ಕಾರಣ.

ಹರ್ಷದ್ ಮೆಹ್ತಾನ ಗರಡಿಯಲ್ಲಿ ಪಳಗಿದ, ಇನ್ನೂ ಬುದ್ಧಿವಂತ ಕೇತನ್ ಪಾರೇಖ್ ಅಸಾಮಾನ್ಯ. ಅವನು ಆರಿಸಿಕೊಂಡಿದ್ದು ಐಟಿ ವಲಯ. ಈ ವಲಯದಲ್ಲಿ ಆಗ ಪ್ರೊಮೋಟರ್ಸ್ ಹೆಚ್ಚಿನ ಈಕ್ವಿಟಿ ಶೇರುಗಳನ್ನು ಇಟ್ಟುಕೊಂಡು ಸ್ಟಾಕ್ ಓನರ್‌ಶಿಪ್ ನ ಸಣ್ಣ ಪ್ರಮಾಣವನ್ನು ಮಾತ್ರ ಮಾರ್ಕೆಟ್‌ಗೆ ಬಿಡುತ್ತಿದ್ದರು. ಇಂತಹಾ ಸಣ್ಣ ಅವಕಾಶವಿದ್ದ ವಲಯದಲ್ಲಿ ಕೇತನ್ ಪಾರೇಖ್ ಬಿಗ್ ಬುಲ್ ಆಗಿ ಅದರ ಶೇರು  ಬೆಲೆಗಳನ್ನು (ಕು) ಯುಕ್ತಿಯಿಂದ  ಏರಿಸಲು ಸಫಲನಾದ. (manipulate). ಇಷ್ಟೇ ಆಗಿದ್ದರೆ ಉಳಿದವರ ಜೊತೆ ಇನ್ನೊಂದು ಹೆಸರಾಗಿ ಮರವೆಗೆ ಸಂದುತ್ತಿದ್ದ. ಅವನ ಹೆಸರು ಇನ್ನೊಂದು ಅಸಾಮಾನ್ಯ ಅವಕಾಶದ ದಾರಿ ಕಂಡುಹಿಡಿಯುವಲ್ಲಿ ಕುಖ್ಯಾತಿ ಗಳಿಸಿತು. ಅದ್ಯಾವುದೆಂದರೆ……

(ಈ ಲೇಖನದ ಮುಂದಿನ ಭಾಗ ನಾಳೆ ( 5-4-2025) ಪ್ರಕಟವಾಗಲಿದೆ-ಸಂ.)

ವೃಂದಾ ಹೆಗಡೆ

ಅತಿಥಿ ಉಪನ್ಯಾಸಕರು

ಇದನ್ನೂ ಓದಿ- ಮೆಹನತ್ ಇಲ್ಲದ ‘ಹರ್ಷ’ ಹಗರಣದಲ್ಲಿ ಕೊನೆಯಾದ ಕಥೆ

More articles

Latest article