ಬೆಂಗಳೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಲಕ್ಷ್ಮೀನಾರಾಯಣ ನಾಗವಾರ ಅವರು ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ. ಮೃತರು ಮಡದಿ, ಮಕ್ಕಳು ಅಪಾರ ಬಂಧುಮಿತ್ರು ಮತ್ತು ಹೋರಾಟಗಾರರನ್ನು ಅಗಲಿದ್ದಾರೆ. ಇವರ ಕುಟುಂಬಕ್ಕೆ ಭಗವಾನ್ ಬುದ್ಧ ದುಃಖವನ್ನು ಬರಿಸುವ ಶಕ್ತಿಯನ್ನು ಕೊಡಲಿ ಎಂದು ಆಪ್ತರು ಪ್ರಾರ್ಥಿಸಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ನಾಳೆ ನಾಗವಾರದಲ್ಲಿ ನಡೆಯಲಿದೆ. ಲಕ್ಷ್ಮೀನಾರಾಯಣ ನಾಗವಾರ, ಬೆಂಗಳೂರು ಉತ್ತರ ತಾಲೂಕಿನ ನಾಗವಾರ ಗ್ರಾಮದವರು. ತಮ್ಮ ವಿದ್ಯಾರ್ಥಿ ದಿನಗಳಲ್ಲೇ ದಲಿತ ಹಕ್ಕುಗಳ ಬಗ್ಗೆ ಧ್ವನಿಯನ್ನು ಎತ್ತುತ್ತಾ ಬಂದ ಹೋರಾಟಗಾರ. ಸಾಹಿತ್ಯ ಮಾತ್ರವಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಹ ಅತ್ಯಂತ ಆಸ್ಥೆ ಹೊಂದಿದ್ದ ಅವರು ಕಾಲೇಜು ಜೀವನದಲ್ಲೇ ಸಮಾಜ ವಿಜ್ಞಾನ, ಅರ್ಥಶಾಸ್ತ್ರ ವಿಷಯಗಳ ಅಧ್ಯಾಪಕರಿಗೆ ಪ್ರೀತಿಯ ವಿದ್ಯಾರ್ಥಿಯಾಗಿ ‘ದಲಿತ ವಿದ್ಯಾರ್ಥಿ ಒಕ್ಕೂಟ’ದ ಮುಖಂಡರಾಗಿದ್ದರು.
ದಲಿತ ಹಿರಿಯ ನೇತಾರ ಬಿ. ಬಸವಲಿಂಗ ಅವರು ನಡೆಸಿದ ಬೂಸಾ ಚಳವಳಿಗೆ ಇಪ್ಪತ್ತೈದು ವರ್ಷಗಳಾದ ಸಂದರ್ಭದಲ್ಲಿ ‘ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳವಳಿ : ಕಾಲು ಶತಮಾನ’ ಪುಸ್ತಕವನ್ನು ಸಂಪಾದಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಬರ್ಮಾ ಬಿಕ್ಕಟ್ಟು: ಆಗ್ನೇಯ ಏಷ್ಯಾದಲ್ಲಿ ಆತಂಕ, ‘ಭತ್ತದ ಬೆಳದಿಂಗಳು’, ‘ಬತ್ತದ ಹೊನಲು’ ಅವರ ಪ್ರಮುಖ ಕೃತಿಗಳು. 2011ರಲ್ಲಿ ಕರ್ನಾಟಕ ಸರ್ಕಾರ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ. ಬುದ್ಧ – ಬಸವ – ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ದತ್ತಿ ಪ್ರಶಸ್ತಿ, ಬಿ. ಬಸವಲಿಂಗಪ್ಪ ಪ್ರಶಸ್ತಿ, ಟಿಪ್ಪು ಪ್ರಶಸ್ತಿಗಳು ಅವರಿಗೆ ಸಂದಿವೆ.