ಅಹಮದಾಬಾದ್: ಬಿಜೆಪಿ ದಲಿತ ವಿರೋಧಿ ಮನಸ್ಥಿತಿಯನ್ನು ಹೊಂದಿರುವುದು ಪದೇ ಪದೇ ಸಾಬೀತಾಗುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದ ಆಳ್ವಾರ್‌ನಲ್ಲಿನ ರಾಮಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ದಲಿತ ಶಾಸಕ ಟಿಕಾರಾಂ ಜುಲ್ಲಿ ಭಾಗವಹಿಸಿದ ನಂತರ ಬಿಜೆಪಿ ಮುಖಂಡ ಗ್ಯಾನ್ ದೇವ್ ಅಹುಜಾ ಅವರು ಗಂಗಾಜಲ ಸಿಂಪಡಿಸಿ ಮಂದಿರವನ್ನು ಶುದ್ಧೀಕರಿಸಿದ ವರದಿ ನಂತರ ಅವರು ಟೀಕಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ದೇಶವು ಸಂವಿಧಾನ ಮತ್ತು ಅದರ ಆದರ್ಶಗಳಿಂದ ನಡೆಯಬೇಕೇ ಹೊರತು, ಮನುಸ್ಮೃತಿಯಿಂದ ಅಲ್ಲ . ಈ ಪ್ರಕರಣ ಬಿಜೆಪಿಯ ದಲಿತ ವಿರೋಧಿ ಮತ್ತು ಮನುವಾದಿ ಚಿಂತನೆಗೆ ಮತ್ತೊಂದು ಉದಾಹರಣೆಯಾಗಿದೆ. ಈ ಮೂಲಕ ಬಿಜೆಪಿ ನಿರಂತರವಾಗಿ ದಲಿತರನ್ನು ಅವಮಾನಿಸುತ್ತಿದೆ ಹಾಗೂ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲಿತ ವಿರೋಧಿ, ತಾರತಮ್ಯದ ಮನಃಸ್ಥಿತಿಯೇ ಬಿಜೆಪಿ ಮತ್ತು ಆರ್‌ಎಸ್‌ಎಸ್ ನ ಸಿದ್ಧಾಂತವಾಗಿದೆ. ನಾಗ್ಪುರದ ಕೇಂದ್ರ ಕಚೇರಿಯಲ್ಲೇ ಈ ಸಂಬಂಧ ತರಬೇತಿ ನೀಡಲಾಗುತ್ತದೆ ಎಂದು ಜೈರಾಮ್ ರಮೇಶ್ ಅವರೂ ಎಕ್ಸ್ ಮೂಲಕ ಟೀಕಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಗ್ಯಾನ್ ದೇವ್ ಅಹುಜಾ ಅವರ ಕೃತ್ಯವನ್ನು ದಲಿತರಿಗೆ ಮಾಡಿದ ಅವಮಾನ ಎಂದು ಜರಿದಿದ್ದಾರೆ.