ಕೋಲಾರ: ಕೋಲಾರ ತಾಲ್ಲೂಕಿನ ಕೋಡಿ ಕಣ್ಣೂರು ಗ್ರಾಮದ ಮನೆಯೊಂದರಲ್ಲಿ ಗೃಹ ಬಳಕೆಯ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ ಮನೆಯಲ್ಲಿದ್ದ ಮುನಿರಾಜು ಹಾಗೂ ರತ್ನಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪುತ್ರಿ ನೇತ್ರಾಳಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ. ಮನೆಯ ಮೇಲ್ಛಾವಣಿ ಕುಸಿತಗೊಂಡು ಮನೆಯಲ್ಲಿದ್ದ ಅನೇಕ ವಸ್ತುಗಳಿಗೆ ಹಾನಿಯಾಗಿದೆ. ಸಿಲಿಂಡರ್ ಬದಲಿಸಿ ಸ್ಟವ್ ಅಂಟಿಸುವ ವೇಳೆ ಸಿಲಿಂಡರ್ ಸ್ಪೋಟಗೊಂಡಿದೆ ಎಂದು ತಿಳಿದು ಬಂದಿದೆ.
ಮೂವರಿಗೂ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿˌ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಮುನಿರಾಜು ಹಾಗೂ ರತ್ನಮ್ಮಗೆ ಶೇ. 40ರಷ್ಟು ಸುಟ್ಟ ಗಾಯಗಳಾಗಿವೆ. ನೇತ್ರಾಳ ಮೇಲೆ ಮೇಲ್ಛಾವಣಿಯ ಕಲ್ಲು ಚಪ್ಪಡಿಯ ತುಣುಕುಗಳು ಬಿದ್ದಿವೆ ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸರು ಹಾಗೂ ತಹಶಿಲ್ದಾರ್ ನಯನ ಎಂ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.